ಮೈಸೂರು: ಮೈಸೂರು ಅರಮನೆ ಆವರಣದಲ್ಲಿ ಸಂಪ್ರದಾಯಿಕ ವಾದ್ಯಗಳಾದ ವೀಣೆ, ಕೊಳಲು ಹಾಗೂ ಮೃದಂಗಗಳ ಜೊತೆಗೆ ಆಧುನಿಕ ಸಂಗೀತ ವಾದ್ಯಗಳ ನಾದ ಸಂಯೋಜನೆ ಪ್ರೇಕ್ಷಕರಿಗೆ ಹೊಸ ರೀತಿಯ ಶ್ರವಣಾನಂದವನ್ನು ನೀಡಿತು.
ಭಾರತೀಯ ಶಾಸ್ತ್ರೀಯ ನೃತ್ಯ ಮತ್ತು ಶಾಸ್ತ್ರೀಯ ಸಂಗೀತದ ಸೊಗಡನ್ನು, ಆಧುನಿಕ ಶೈಲಿಗೆ ತಕ್ಕಂತೆ ಪ್ರಸ್ತುತಪಡಿಸಿದ ಈ ಕಲಾ ಪ್ರದರ್ಶನವು ಯುವಜನತೆ ಸೇರಿದಂತೆ ಎಲ್ಲರ ಗಮನ ಸೆಳೆಯಿತು.
ಮೈಸೂರು ಅರಮನೆ ಆವರಣದಲ್ಲಿ ಆಯೋಜಿಸಲಾಗಿದ್ದ ಕ್ಲಾಸಿಕಲ್ ಫ್ಯೂಷನ್ ಆಕ್ಟ್ ಸಾಂಸ್ಕೃತಿಕ ಕಾರ್ಯಕ್ರಮವು ಕಲಾಪ್ರೇಮಿಗಳನ್ನು ಮಂತ್ರಮುಗ್ಧಗೊಳಿಸಿತು.
ಭಾರತೀಯ ಶಾಸ್ತ್ರೀಯ ಸಂಗೀತ ಮತ್ತು ಪಾಶ್ಚಾತ್ಯ ಶೈಲಿಯ ವಿಶಿಷ್ಟ ಸಮ್ಮಿಳನವು ಪ್ರೇಕ್ಷಕರಿಗೆ ನೂತನ ಸಂಗೀತ ಲೋಕದ ಅನುಭವವನ್ನು ನೀಡಿತು.
ಹೆಸರಾಂತ ಡೊರಿಮಿ ಲೈವ್ ಬ್ಯಾಂಡ್ ಕಲಾವಿದರು ಅದ್ಭುತ ಪ್ರದರ್ಶನದ ಮೂಲಕ ವಾತಾವರಣ ರಂಗೇರಿಸಿದರು. ಖ್ಯಾತ ಸಂಗೀತಗಾರರ ವಾದ್ಯಮೇಳ ಹಾಗೂ ಹದವಾದ ಧ್ವನಿಯು ಅರಮನೆಯ ಅಂಗಳದಲ್ಲಿ ಮಾರ್ದನಿಸಿ, ಸಾಂಸ್ಕೃತಿಕ ಸಂಜೆಗೆ ಕಳೆಕಟ್ಟಿತು.
ಪ್ರಸಿದ್ಧ ಕಲಾವಿದರಾದ ಜಯಂತಿ ಘೋಷ್ ಮತ್ತು ಖ್ಯಾತ ಪರ್ಕ್ಯುಷನಿಸ್ಟ್ ತೌಫೀಕ್ ಖುರೇಷಿ ಅವರ ನೇತೃತ್ವದ ಈ ತಂಡವು ಲಯಬದ್ಧವಾದ ವಾದ್ಯ ವಿನೋದದಿಂದ ಸಭಿಕರನ್ನು ತೂಗುವಂತೆ ಮಾಡಿತು. ತೌಫೀಕ್ ಖುರೇಷಿ ಅವರ ಹ್ಯಾಂಡ್ ಪರ್ಕ್ಯುಷನ್ ಮತ್ತು ಜಯಂತಿ ಘೋಷ್ ಅವರ ವಯೋಲಿನ್ ನುಡಿತದ ಜುಗಲ್ಬಂದಿ ವಿಶೇಷ ಆಕರ್ಷಣೆಯಾಯಿತು.
ಇವರೊಂದಿಗೆ ಪ್ರತಿಭಾವಂತ ಕಲಾವಿದರಾದ ಅತುಲ್ ರಾನಿಂಗಾ, ಸುಖದ್ ಮುಂಡೆ ಮತ್ತು ರವಿ ಜೂಲೆ ಅವರು ಸಂಗೀತ ಪ್ರೇಮಿಗಳನ್ನು ಮರುಳು ಮಾಡಿದರು. ವಿವಿಧ ವಾದ್ಯಗಳ ಮೇಳೈಸುವಿಕೆ ಹಾಗೂ ನುರಿತ ಕಲೆಗಾರಿಕೆಯು ಇಡೀ ವಾತಾವರಣವನ್ನು ಸಂಗೀತಮಯವನ್ನಾಗಿ ಬದಲಾಯಿಸಿತು.
ಜೊತೆಗೆ, ಲವೇಶ್ ಸ್ವಡೇಕರ್, ವಿವೇಕ್ ಸೋನಾರ್ ಮತ್ತು ಓಜಸ್ ಆದಿಯಾ ಮುಂತಾದ ಪ್ರತಿಭಾವಂತ ರಿದಮ್ ಹಾಗೂ ಇನ್ಸ್ಟ್ರುಮೆಂಟಲ್ ಕಲಾವಿದರು ಸಾಥ್ ನೀಡುವ ಮೂಲಕ ಕಾರ್ಯಕ್ರಮದ ಮೆರುಗನ್ನು ಮತ್ತಷ್ಟು ಹೆಚ್ಚಿಸಿದರು.
ಸಾಂಪ್ರದಾಯಿಕತೆ ಮತ್ತು ಆಧುನಿಕತೆಯ ಬೆಸುಗೆಯಿಂದ ಮೂಡಿಬಂದ ಈ ಅಪರೂಪದ ಕ್ಲಾಸಿಕಲ್ ಫ್ಯೂಷನ್ ಕಾರ್ಯಕ್ರಮವು ಮೈಸೂರಿನ ಸಾಂಸ್ಕೃತಿಕ ಇತಿಹಾಸದಲ್ಲಿ ಮತ್ತೊಂದು ಮೈಲಿಗಲ್ಲಾಗಿ ಸಾಕ್ಷಿಯಾಯಿತು
ಕಾರ್ಯಕ್ರಮದಲ್ಲಿ ಉಪ ವಿಭಾಗಾಧಿಕಾರಿಗಳಾದ ಕೆ. ಆಶಪ್ಪನವರ್ ಕಾರ್ಯಾಧ್ಯಕ್ಷರಾದ ಎಂ.ಡಿ. ಸುದರ್ಶನ್ ಉಪಾಧ್ಯಕ್ಷರಾದ ಮಣಿಯಯ್ಯ ಮತ್ತಿತರರು ಉಪಸ್ಥಿತರಿದ್ದರು.
