ಮೈಸೂರು: ಮೈಸೂರು ಎಂದರೆ ಕೇವಲ ಅರಮನೆಗಳ ನಗರವಲ್ಲ, ಪರಂಪರೆಯನ್ನು ತೆರೆದಿಡುವ ಸುಂದರ ಊರು,ಇಲ್ಲಿನ ಸಾಂಪ್ರದಾಯಿಕ ಕಟ್ಟಡಗಳು ಮತ್ತು ಇತಿಹಾಸವನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಕರ್ತವ್ಯ ಎಂದು ಖ್ಯಾತ ನಟ ಹಾಗೂ ನಿರ್ದೇಶಕರಾದ ಬಿ. ಸುರೇಶ್ ಅವರು ಹೇಳಿದರು.
ರಂಗಚಾರ್ಲು ಪುರಭವನ ಆವರಣದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ವತಿಯಿಂದ ಆಯೋಜಿಸಿದ್ಧ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮೈಸೂರಿನ ದಾಖಲೆಯಲ್ಲಿ ಈ ಊರಿಗೆ ಇರುಮೈ ಊರು ಅಂದರೆ ಎಮ್ಮೆಗಳ ಊರು ಎಂದರ್ಥವಿತ್ತು. ಕಾಲಾಂತರದಲ್ಲಿ ಸಾಂಸ್ಕೃತೀಕರಣಗೊಂಡು ಇದು ಮಹೀಷಪುರ ಹಾಗೂ ಕಾಲಕ್ರಮೇಣ ಮೈಸೂರು ಆಗಿ ಬದಲಾಗಿರುವುದು ಒಂದು ದೊಡ್ಡ ಇತಿಹಾಸ ಎಂದು ಹೇಳಿದರು.
ದಿವಾನ್ ಶೇಷಾದ್ರಿ ಅಯ್ಯರ್ ಅವರು ಇಂಜಿನಿಯರ್ ಆಗಿ 1884ರಲ್ಲಿ ಈ ಕಟ್ಟಡ ನಿರ್ಮಾಣವನ್ನು ಆರಂಭಿಸಿದರು. ಯಾವುದೇ ತೊಂದರೆಯಿಲ್ಲದೆ 100 ವರ್ಷಗಳನ್ನು ಪೂರೈಸಿರುವ ಈ ಕಟ್ಟಡದ ಮುಂದೆ 1985ರ ವಿಶ್ವ ಕನ್ನಡ ಸಮ್ಮೇಳನದಲ್ಲಿ ತಾವೇ ನಾಟಕ ಪ್ರದರ್ಶನ ನೀಡಿರುವುದು ಸಂತೋಷದ ವಿಷಯ ಎಂದು ತಿಳಿಸಿದರು.
ಆರ್.ಕೆ. ನಾರಾಯಣ್, ಕುವೆಂಪು ಹಾಗೂ ತಾರಾಸು ಅವರಂತಹ ಹಿರಿಯ ಸಾಹಿತಿಗಳು ಮತ್ತು ಕಲಾವಿದರ ಮನೆಗಳನ್ನು ಹಾಗೂ ಪಾರಂಪರಿಕ ಕಟ್ಟಡಗಳನ್ನು ಜೆಸಿಬಿಗಳ ಕಣ್ಣು ಮತ್ತು ರಿಯಲ್ ಎಸ್ಟೇಟ್ ಕಣ್ಣು ಬೀಳದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಕೇವಲ ಪ್ರವಾಸೋದ್ಯಮವನ್ನು ಬೆಳೆಸುವುದು ಮಾತ್ರವಲ್ಲದೆ, ನಮ್ಮ ಪರಂಪರೆಯನ್ನು ಕಾಪಾಡುವುದು ಮುಖ್ಯ. ದಸರಾ ಹಿನ್ನೆಲೆಯಲ್ಲಿ ನಡೆಯುತ್ತಿರುವ ಪಾರಂಪರಿಕ ನಡಿಗೆ ಕೇವಲ ಮೈಸೂರಿನ ಪರಂಪರೆ ಮಾತ್ರವಲ್ಲ, ಕರ್ನಾಟಕದ ಇತಿಹಾಸವನ್ನು ಬಿಚ್ಚಿಡುವ ದೊಡ್ಡ ಕೆಲಸವಾಗಬೇಕು ಎಂದು ಅವರು ಹೇಳಿದರು.
ಮೈಸೂರು ನಗರದಲ್ಲಿ ಸುಮಾರು 129 ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳು ಇದ್ದು, ಅವುಗಳ ವಾಸ್ತುಶಿಲ್ಪ, ಇತಿಹಾಸ ಮತ್ತು ಶೈಲಿಯನ್ನು ತಿಳಿದುಕೊಂಡು ರಕ್ಷಿಸುವುದು ಅತ್ಯಂತ ಅವಶ್ಯಕವಾಗಿದೆ.ಕೇವಲ ದೊಡ್ಡ ಗಾತ್ರದ ಕಟ್ಟಡಗಳಷ್ಟೇ ಅಲ್ಲದೆ, ಪ್ರತಿಯೊಂದು ಕಟ್ಟಡದ ಹಿಂದೆ ಅದರದೇ ಆದ ಇತಿಹಾಸ, ಕಾಲಘಟ್ಟ ಮತ್ತು ಸಾಂಸ್ಕೃತಿಕ ಹಿನ್ನೆಲೆ ಅಡಗಿದೆ. ನಮ್ಮ ಪರಂಪರೆಯನ್ನು ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ತಿಳಿಹೇಳಿದರು.
ಪಾರಂಪರಿಕ ಇಲಾಖೆ ಆಯುಕ್ತ ದೇವರಾಜು ಅವರು ಮಾತನಾಡಿ ಮೈಸೂರು ನಗರವು ಹಲವು ಪಾರಂಪರಿಕ ಕಟ್ಟಡಗಳನ್ನು ಹೊಂದಿದ್ದು, ಅವೆಲ್ಲವೂ ನಮ್ಮ ಸಂಸ್ಕೃತಿ ಮತ್ತು ಇತಿಹಾಸದ ಪ್ರತೀಕವಾಗಿವೆ.
ಮೇಲ್ನೋಟಕ್ಕೆ ಇವು ಬೃಹತ್ ಕಟ್ಟಡಗಳಂತೆ ಕಂಡರೂ, ಅವುಗಳ ಹಿಂದೆ ದೊಡ್ಡ ಇತಿಹಾಸ, ವಾಸ್ತುಶಿಲ್ಪದ ವೈಶಿಷ್ಟ್ಯ, ನಿರ್ದಿಷ್ಟ ಶೈಲಿ ಹಾಗೂ ಕಾಲಘಟ್ಟದ ಹಿನ್ನೆಲೆ ಇದೆ ಎಂದು ತಿಳಿಸಿದರು.
ಮೈಸೂರಿನಲ್ಲಿ ಈಗಾಗಲೇ ಸುಮಾರು 129 ಕ್ಕೂ ಹೆಚ್ಚು ಪಾರಂಪರಿಕ ಕಟ್ಟಡಗಳನ್ನು ಗುರುತಿಸಿ ಪಟ್ಟಿ ಮಾಡಲಾಗಿದೆ. ಕೆಲವು ಆಯ್ದ ಕಟ್ಟಡಗಳ ಬಗ್ಗೆ ಬ್ರೋಷರ್ ಮೂಲಕ ಮಾಹಿತಿ ನೀಡಲಾಗಿದೆ.
ನಮ್ಮ ಪರಂಪರೆ ಮತ್ತು ಇತಿಹಾಸವನ್ನು ಮುಂದಿನ ಪೀಳಿಗೆಗಾಗಿ ಉಳಿಸಿ ಬೆಳೆಸುವುದು ಮತ್ತು ಸಂರಕ್ಷಣೆ ಮಾಡುವುದು ಅತ್ಯಂತ ಮುಖ್ಯ ಎಂದು ಹೇಳಿದರು
ಕರ್ನಾಟಕ ರಾಜ್ಯ ವಿಶ್ವ ಮುಕ್ತ ವಿಶ್ವವಿದ್ಯಾನಿಲಯದ ಮುಖ್ಯಸ್ಥರಾದ ಪಿಳೈ ಅಯ್ಯಂಗಾರ್ ಅವರು ಮಾತನಾಡಿ ಇತಿಹಾಸವನ್ನು ಮರುಪರಿಶೀಲಿಸುವುದರಿಂದ ಹಿಂದಿನ ತಪ್ಪುಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲು ಸಾಧ್ಯವಾಗುತ್ತದೆ.
ಕೇವಲ ಹಕ್ಕುಗಳ ಬಗ್ಗೆ ಮಾತನಾಡುವ ನಾವು, ನಮ್ಮ ಸಂವಿಧಾನದಲ್ಲಿ ತಿಳಿಸಿರುವಂತೆ ಪರಂಪರೆ ಮತ್ತು ಇತಿಹಾಸವನ್ನು ಸಂರಕ್ಷಿಸುವ ಮೂಲ ಕರ್ತವ್ಯವನ್ನು ಪಾಲಿಸಬೇಕು ಎಂದು ಕರೆ ನೀಡಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಆಡಳಿತಾವಧಿಯ 25ನೇ ವರ್ಷದಲ್ಲಿ ಕಾರ್ಮಿಕರೇ ಸ್ವಂತ ಹಣದಿಂದ ನಿರ್ಮಿಸಿದ ಸಿಲ್ವರ್ ಜುಬಿಲಿ ಗಡಿಯಾರ ಗೋಪುರವು ಅತ್ಯುತ್ತಮ ಆಡಳಿತಕ್ಕೆ ಸಾಕ್ಷಿಯಾಗಿದೆ. ನಮ್ಮ ಹೆರಿಟೇಜ್ ಕಟ್ಟಡಗಳನ್ನು ಉಳಿಸಿ, ಮುಂದಿನ ಪೀಳಿಗೆಗೆ ಹಸ್ತಾಂತರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ಮನೆಮನೆಯಲ್ಲಿ ಬೊಂಬೆ ಪ್ರದರ್ಶನ ಹಾಗೂ ಸೆಲ್ಫಿ ವಿತ್ ಹೆರಿಟೇಜ್ ಬಿಲ್ಡಿಂಗ್ ಫೋಟೋ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.
ಬೊಂಬೆ ಪ್ರದರ್ಶನ ಸ್ಪರ್ಧೆಯಲ್ಲಿ ಗಜಲಕ್ಷ್ಮಿ ನಾಗರಾಜ್ ಪ್ರಥಮ ಬಹುಮಾನ,ಗೀತಾ ಶ್ರೀಹರಿ ದ್ವಿತೀಯ ಬಹುಮಾನ ಮತ್ತು ಸರಸ್ವತಿ ಕಿರಣ್ ತೃತೀಯ ಬಹುಮಾನವನ್ನು ಪಡೆದಿದ್ದಾರೆ.
ಸೆಲ್ಫಿ ಸ್ಪರ್ಧೆಯಲ್ಲಿ ಮೀನಾ ಕೃಷ್ಣ ಕುಮಾರ್ ಪ್ರಥಮ ಬಹುಮಾನ,ಅನುದಿತ ದ್ವಿತೀಯ ಬಹುಮಾನ ಮತ್ತು ಪುರುಷೋತ್ತಮ್ ಚಕ್ರವರ್ತಿ ತೃತೀಯ ಬಹುಮಾನವನ್ನು ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಉಪ ನಿರ್ದೇಶಕರಾದ ಡಾ. ಸಿ ಎನ್ ಮಂಜುಳಾ, ಪುರಾತತ್ವ ಸಂರಕ್ಷಣಾ ಇಂಜಿನಿಯರ್ ಗಳಾದ ಟಿ ತಾರಕೇಶ್ ಕೆ.ಪಿ ಗುರುಮಲ್ಲಪ್ಪ, ನಿವೃತ್ತ ಪ್ರಾಧ್ಯಾಪಕರಾದ ರಂಗರಾಜು, ಉಪನ್ಯಾಸಕರಾದ ಲ.ನ ಸ್ವಾಮಿ ಹಾಗೂ ಟೆರಿಷಿಯನ್, ಜೆಎಸ್ಎಸ್ ಮಹಿಳಾ ಕಾಲೇಜು, ಮಹಾಜನ ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
