ಬನ್ನೂರು: ರಾಷ್ಟ್ರೀಯ ಕ್ರೀಡಾ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿದ ವರ್ಷಿಣಿ ಶಿವರಾಮ್ ಅವರು ಅಂತರಾಷ್ಟ್ರೀಯ ಕ್ರೀಡಾಸ್ಪರ್ಧೆಯಲ್ಲಿ ಭಾಗವಹಿಸಲು ಆರ್ಥಿಕ ಸಹಾಯ ಮಾಡಬೇಕೆಂದು ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆಯವರು ಮಾಜಿ ಸಚಿವ ಹೆಚ್.ಸಿ.ಮಹದೇವಪ್ಪ ಹಾಗೂ ಸಂಸದ ಸುನಿಲ್ ಬೋಸ್ ಅವರಲ್ಲಿ ಮನವಿ ಮಾಡಿದರು.
ಬನ್ನೂರು ತಾಲೂಕು ಬೆಟ್ಟಳ್ಳಿ ಗ್ರಾಮದ ವರ್ಷಿಣಿ ಶಿವರಾಮ್ ಅವರು ಮೈಸೂರಿನ ಶಾಂತಲಾ ವಿದ್ಯಾಪೀಠದ 9 ನೆ ತರಗತಿ ವಿದ್ಯಾರ್ಥಿನಿ.
ಅವರು ಇತ್ತೀಚೆಗೆ ಉತ್ತರ ಪ್ರದೇಶದ ಗೋರಖ್ ಪುರದಲ್ಲಿ ನಡೆದ ಸಿಐಎಸ್ಸಿಇ ರಾಷ್ಟ್ರೀಯ ಶೂಟಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಂಡು ಜಯಗಳಿಸಿದ್ದಾರೆ.ಅವರು 17 ವರ್ಷದೊಳಗಿನ ಬಾಲಕಿಯರ ಮುಕ್ತ ಸೈಟ್ ವಿಭಾಗದಲ್ಲಿ ಭಾಗವಹಿಸಿ,ಅತ್ಯುತ್ತಮ ಕೌಶಲ್ಯ,ಏಕಾಗ್ರತೆಯಿಂದ ಆಡಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಚಿನ್ನದ ಪದಕ ಗಳಿಸಿ ನಾಡಿಗೆ ಕೀರ್ತಿ ತಂದಿದ್ದಾರೆ
ಶಾಸಕರಾದ ಎಚ್ ಸಿ ಮಹದೇವಪ್ಪ ಹಾಗೂ ಸಂಸದರಾದ ಸುನಿಲ್ ಬೋಸ್ ಅವರು
ವಟ್ಗಲ್ ರಂಗನಾಥ ಸ್ವಾಮಿ ಬೆಟ್ಟಕ್ಕೆ ಆಗಮಿಸುತ್ತಿದ್ದಾಗ ಮಾರ್ಗ ಮಧ್ಯೆ ರೈತ ಮುಖಂಡರು ಭೇಟಿ ಮಾಡಿದರು.
ಈ ವೇಳೆ ಬೆಟ್ಟಳ್ಳಿ ಗ್ರಾಮದ ವರ್ಷಿಣಿ ಶಿವರಾಮ್ ಪರವಾಗಿ ಕರ್ನಾಟಕ ರಾಜ್ಯ ರೈತ ಸಂಘ ಮೂಲ ಸಂಘಟನೆ ಮೈಸೂರು ಜಿಲ್ಲಾಧ್ಯಕ್ಷರಾದ ಬನ್ನೂರು ನಾರಾಯಣ ನೇತೃತ್ವದಲ್ಲಿ ಅನೇಕ ಮುಖಂಡರು ಶಾಸಕರು,ಸಂಸದರನ್ನು ಭೇಟಿ ಮಾಡಿ ಆರ್ಥಿಕವಾಗಿ ಸಹಾಯ ಮಾಡಬೇಕೆಂದು ಮನವಿ ಮಾಡಿ ಮನವರಿಕೆ ಮಾಡಿಕೊಟ್ಟರು.
ಶಾಸಕರು ಹಾಗೂ ಸಂಸದರು ರೈತ ಮುಖಂಡರ ಮನವಿ ಸ್ವೀಕರಿಸಿ 9ನೇ ತರಗತಿ ವಿದ್ಯಾರ್ಥಿನಿಯಾಗಿ ರಾಷ್ಟ್ರೀಯ ಮಟ್ಟದ ಚಿನ್ನದ ಪದಕ ಗಳಿಸಿರುವ ನಮ್ಮ ಕ್ಷೇತ್ರದ ವರ್ಷಿಣಿ ಶಿವರಾಮ್ ಅವರಿಗೆ ಒಳ್ಳೆಯದಾಗಲಿ ಎಂದು ತುಂಬು ಹೃದಯದ ಶುಭಾಶಯ ಕೋರಿದರು.
ವರ್ಷಿಣಿ ಅವರು ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗೆ ಭಾಗವಹಿಸಿ ಗೆಲುವು ಸಾಧಿಸಲಿ ಎಂದು ಹಾರೈಸಿ,ಯಾವ ಕ್ಷಣದಲ್ಲಿ ಬೇಕಾದರೂ ತಮ್ಮನ್ನು ಭೇಟಿ ಮಾಡಲಿ ಸಹಾಯ ಮಾಡುತ್ತೇವೆ ಎಂದು ಮಹಾದೇವಪ್ಪ ಹಾಗೂ ಸುನಿಲ್ ಬೋಸ್ ಎಲ್ಲರೆದುರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಬೆಟ್ಟಹಳ್ಳಿ ಶಿವರಾಮ್, ಸುರೇಶ್, ಕಾಳೇಗೌಡ, ರಂಗಸ್ವಾಮಿ, ತಮ್ಮಯ್ಯ, ಹೊನ್ನೇ ಗೌಡ್ರು, ಕಳ್ಳಿಪುರ ನಾರಾಯಣ, ರವೀಂದ್ರ, ಇನ್ನು ಅನೇಕ ರೈತ ಮುಖಂಡರು ಹಾಗೂ ಊರಿನ ಗ್ರಾಮಸ್ಥರು ಹಾಜರಿದ್ದರು.
