ಮೈಸೂರು: ಶ್ರೀರಾಂಪುರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಮೂಕಾಂಬಿಕಾ ಸಮೃದ್ಧಿ ಬಡಾವಣೆಯಲ್ಲಿ ನಡೆಯುತ್ತಿರುವ ಗಣೇಶೋತ್ಸವದ ಅಂಗವಾಗಿ, ಶ್ರೀರಾಂಪುರ ಪಟ್ಟಣ ಪಂಚಾಯಿತಿ ವತಿಯಿಂದ ಸ್ವಚ್ಛತಾ ಹಿ ಸೇವಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್ ಅವರು ಸಾರ್ವಜನಿಕರಿಗೆ ದೀಪದ ಹಣತೆಗಳನ್ನು ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಆರೋಗ್ಯಾಧಿಕಾರಿ ಅಣ್ಣೇಶ್ ಅವರು ಬಡಾವಣೆಯ ನಿವಾಸಿಗಳಿಗೆ ಸ್ವಚ್ಛತಾ ಹಿ ಸೇವಾ ಪ್ರಮಾಣವಚನ ಬೋಧಿಸಿದರು.
ಹಸಿ ಕಸ, ಒಣ ಕಸ, ಇ-ತ್ಯಾಜ್ಯ, ವೈದ್ಯಕೀಯ ತ್ಯಾಜ್ಯ, ವಿಷಕಾರಿ ತ್ಯಾಜ್ಯ ಹಾಗೂ ವಿಶೇಷ ಕಾಳಜಿಯ ತ್ಯಾಜ್ಯಗಳ ಕುರಿತು ಅರಿವು ಮೂಡಿಸಿ, ಅವುಗಳ ಸೂಕ್ತ ವಿಂಗಡಣೆ ಮತ್ತು ವಿಲೇವಾರಿ ಕುರಿತು ಮಾಹಿತಿ ನೀಡಿದರು. ಕಸವನ್ನು ಎಲ್ಲೆಂದರಲ್ಲಿ ಎಸೆಯದೆ, ವಿಂಗಡಿಸಿ ಪಟ್ಟಣ ಪಂಚಾಯಿತಿಯ ಕಸದ ಗಾಡಿಗೆ ನೀಡುವಂತೆ ಮನವಿ ಮಾಡಿದರು.
ದೀಪದ ಬೆಳಕು ಹೇಗೆ ಸ್ವಚ್ಛವಾಗಿ, ನಿಷ್ಕಳಂಕವಾಗಿ ಪ್ರಕಾಶಿಸುವುದೊ ಅದೇ ರೀತಿ ನಮ್ಮ ಭಾರತ ದೇಶವೂ ಸ್ವಚ್ಛ, ಸದೃಢವಾಗಿ ಇರಬೇಕು ಎಂದು ಅವರು ಆಶಿಸಿದರು.
ನಂತರ ಗಣಪತಿಯ ಸನ್ನಿಧಿಯಲ್ಲಿ ದೀಪ ಬೆಳಗಿಸಿ, ಸೈನಿಕರು ಮತ್ತು ರೈತರು ಆರೋಗ್ಯವಂತರಾಗಿ, ದೀರ್ಘಾಯುಷಿಗಳಾಗಿರಲಿ, ರಾಜ್ಯದಲ್ಲಿ ಬರಗಾಲ ನಿವಾರಣೆಯಾಗಿ ಉತ್ತಮ ಮಳೆಯಾಗಲಿ, ವಾಡಿಕೆಯಂತೆ ಗೌರೀ ಮಳೆಯಾಗಿ ಜಲಾಶಯಗಳು ತುಂಬಲಿ ಎಂದು ಪ್ರಾರ್ಥಿಸಲಾಯಿತು.
ಮೂಕಾಂಬಿಕಾ ಸಮೃದ್ಧಿ ಬಡಾವಣೆ ನಿವಾಸಿಗಳ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಕೆ.ಆರ್. ಗಣೇಶ್ ಮಾತನಾಡಿ, ಬಡಾವಣೆಯಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಎಲ್ಲಾ ನಿವಾಸಿಗಳು ಭಾಗವಹಿಸುವುದರಿಂದ ಸೌಹಾರ್ದತೆ ಮೂಡುತ್ತದೆ. ಸ್ವಚ್ಛತಾ ಜಾಗೃತಿ ಮೂಡಿಸುವ ಪ್ರಯತ್ನಗಳು ಹೆಚ್ಚು ಪರಿಣಾಮಕಾರಿಯಾಗುತ್ತವೆ. ಪಟ್ಟಣ ಪಂಚಾಯಿತಿಯ ಈ ಪ್ರಯತ್ನ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮ ದಲ್ಲಿ ಕಂದಾಯಾಧಿಕಾರಿ ಕುಮಾರ್, ಸಮುದಾಯ ಅಧಿಕಾರಿ ಮೀನಾಕ್ಷಿ, ನಿರ್ವಹಣಾ ಉಸ್ತುವಾರಿ ಪರಮೇಶ್, ಬಡಾವಣೆಯ ಉಪಾಧ್ಯಕ್ಷ ರಾಮಕೃಷ್ಣ, ಕಾರ್ಯದರ್ಶಿ ಪುನೀತ್, ನಾಗಭೂಷಣಾಚಾರಿ, ಮೋಹನ್, ಮಂಜುನಾಥ್, ರಚನಾ ಪಾರ್ಶ್ವನಾಥ್, ಪೂಜಾ ಪುನೀತ್, ಸರಸ್ವತಿ ಗಣೇಶ್, ನಿರ್ಮಲಾ ರಾಮಕೃಷ್ಣ, ವರಲಕ್ಷ್ಮಿ, ರೇಖಾ ಸೇರಿದಂತೆ ಬಡಾವಣೆಯ ನಿವಾಸಿಗಳು ಪಾಲ್ಗೊಂಡಿದ್ದರು.
