ಮದ್ದೂರು: ಈ ತಾಲಿಬಾನ್ ಸರ್ಕಾರ ಹಿಂದೂಗಳ ಮೇಲೆ ದೌರ್ಜನ್ಯ ಮಾಡುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿಕಾರಿದರು.
ಮದ್ದೂರಿನಲ್ಲಿ ಗಣೇಶೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕಳೆದ ವರ್ಷ ಹಿಂದೂಗಳ ಮೇಲೆ ಬೆದರಿಕೆ ಹಾಕಲಾಗಿತ್ತು. ಆಗ ಪ್ರತಿ ವರ್ಷ ಬರುತ್ತೇವೆಂದು ಹಿಂದೂ ಕಾರ್ಯಕರ್ತರಿಗೆ ಭರವಸೆ ನೀಡಿದ್ದೆವು ಅದರಂತೆ ಈಗ ಇಲ್ಲಿಗೆ ಭೇಟಿ ನೀಡಿದ್ದೇವೆ ಎಂದು ಹೇಳಿದರು.
ಟಿ.ನರಸೀಪುರದ ಘಟನೆ ಸಣ್ಣದು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಆದರೆ ಎಲ್ಲೇ ಹಿಂದೂಗಳಿಗೆ ನೋವಾದರೂ ನಾವು ಅಲ್ಲಿಗೆ ಹೋಗುತ್ತೇವೆ. ಅಲ್ಲಿನ ಇನ್ಸ್ಪೆಕ್ಟರ್ ಸಂಘಟನೆಗಳವರ ಜೊತೆ ಅವಾಚ್ಯವಾಗಿ ಮಾತಾಡಿದ್ದಾರೆ. ಹಿಂದೂಗಳು ಮಾತ್ರ ಮಸೀದಿ ಮುಂದೆ ಹೋಗಬಾರದು. ಆದರೆ ಮುಸ್ಲಿಮರು ಮಾತ್ರ ಮಸೀದಿಯಲ್ಲಿ ಇಡೀ ವರ್ಷ ಆಜಾನ್ ಕೂಗಬಹುದು. ಮುಖ್ಯಮಂತ್ರಿಗಳು ನದಿಯಲ್ಲಿ ಮುಳುಗಿ ನಾಮ ಹಾಕಿದರೆ ಅದನ್ನು ಯಾರೂ ನಂಬಲ್ಲ. ನಿಜವಾದ ಹಿಂದೂ ಆಗಿದ್ದರೆ, ಪೊಲೀಸರ ವಿರುದ್ಧ ಕಠಿಣ ಕ್ರಮ ವಹಿಸಬೇಕಿತ್ತು. ಈ ಕಪಟ ಹಿಂದುತ್ವವನ್ನು ಯಾರೂ ನಂಬಲ್ಲ ಎಂದು ತಿಳಿಸಿದರು.
ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಾಗಿ ನೋಡುವುದು ಕಾಂಗ್ರೆಸ್ನ ರಕ್ತದಲ್ಲೇ ಇದೆ. ಟಿ.ನರಸೀಪುರದ ಠಾಣೆಯ ಇನ್ಸ್ಪೆಕ್ಟರ್ ವಿರುದ್ಧ ಕ್ರಿಮಿನಲ್ ಕೇಸ್ಗಳಿವೆ. ಹಿಂದೂ ಪರಂಪರೆ ನಮಗೆ ಚೆನ್ನಾಗಿ ಗೊತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ನ ನಿಯಮಗಳನ್ನು ನೋಡಿದರೆ ಬ್ರಿಟಿಷರೇ ವಾಸಿ ಎನ್ನಿಸುತ್ತದೆ. ಗಣೇಶೋತ್ಸವಕ್ಕೆ ಆ ಮಟ್ಟಿಗಿನ ನಿರ್ಬಂಧಗಳನ್ನು ಹೇರಿದ್ದಾರೆ. ಇದನ್ನು ಹಿಂದೂಗಳ ಗಣೇಶೋತ್ಸವ ಎನ್ನಲಾಗುವುದಿಲ್ಲ. ಇದನ್ನು ಪೊಲೀಸರ ಗಣೇಶೋತ್ಸವ ಎನ್ನಬೇಕು ಹಿಂದೂಗಳನ್ನೇ ಕರೆದು ಬೆದರಿಕೆ ಹಾಕುತ್ತಾರೆ. ಆದರೆ ರಸ್ತೆಯಲ್ಲೇ ಕೂರುವ ಮುಸ್ಲಿಮರನ್ನು ಕರೆದು ಎಚ್ಚರಿಕೆ ನೀಡುವುದಿಲ್ಲ. ಚುನಾವಣೆ ಬಂದಾಗ ಹಿಂದೂ ಆಗುವ ಕಾಂಗ್ರೆಸ್ಸಿಗರು ನಂತರ ಮುಸ್ಲಿಮರಾಗಿ ಬದಲಾಗುತ್ತಾರೆ ಎಂದು ಅಶೋಕ್ ಟೀಕಾಪ್ರಹಾರ ನಡೆಸಿದರು.
ಮಸೀದಿಯಲ್ಲಿ ಬೆಳಗ್ಗೆಯಿಂದ ರಾತ್ರಿವರೆಗೆ ಆಜಾನ್ ಕೂಗುತ್ತಾರೆ. ಇಷ್ಟೇ ಡೆಸಿಬಲ್ ಇರಬೇಕೆಂದು ಕೋರ್ಟ್ ಆದೇಶವಿದ್ದರೂ ಅದನ್ನು ಸರ್ಕಾರ ಪಾಲಿಸಿಲ್ಲ. ಹೀಗೆ ಮಾಡಿಯೇ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಹಿಂದೂಗಳ ಗಣೇಶೋತ್ಸವಕ್ಕೆ ಯಾವುದೇ ಕಾರಣಕ್ಕೂ ತೊಂದರೆ ಕೊಡಬಾರದು. ತಾಕತ್ತಿದ್ದರೆ ಹಿಂದೂಗಳನ್ನು ಕರೆದು ಎಚ್ಚರಿಕೆ ನೀಡಿದಂತೆಯೇ ಮುಸ್ಲಿಮರಿಗೂ ಎಚ್ಚರಿಕೆ ನೀಡಲಿ ಎಂದು ಆರ್.ಅಶೋಕ ಸವಾಲು ಹಾಕಿದರು
