ಮೈಸೂರು: ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲಾ 317G ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿ ವತಿಯಿಂದ ಮಾನವೀಯ ಸೇವಾ ಕಾರ್ಯದ ಅಂಗವಾಗಿ ಅರ್ಹರಿಗೆ ಕೃತಕ ಕಾಲುಗಳನ್ನು ವಿತರಣೆ ಮಾಡಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಲೋಕಸಭಾ ಸದಸ್ಯ ಯದುವೀರ್ ಒಡೆಯರ್ ಅವರು,
ಅಂಗವೈಕಲ್ಯದಿಂದಾಗಿ ದೈನಂದಿನ ಜೀವನದಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದ್ದ ಫಲಾನುಭವಿಗಳಿಗೆ ಕೃತಕ ಕಾಲುಗಳನ್ನು ಒದಗಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬನೆಯ ಭರವಸೆಯನ್ನು ಮೂಡಿಸಲಾಗಿದೆ ಎಂದು ತಿಳಿಸಿದರು
ಲಯನ್ಸ್ ಕ್ಲಬ್ ಆಫ್ ಮೈಸೂರು ಗೋಲ್ಡನ್ ಸಿಟಿಯ 2026–27ನೇ ಸಾಲಿನ ಅಧ್ಯಕ್ಷರಾಗಿ ಲಯನ್ ಜೆ. ಆಶಾ ಮಂಜುನಾಥ್ ಅವರು ಅಧಿಕಾರ ವಹಿಸಿಕೊಂಡಿದ್ದು, ನೂತನ ತಂಡದ ಪದಗ್ರಹಣ ಕಾರ್ಯಕ್ರಮ ಸೆ. 12ರಂದು ಮೈಸೂರಿನ ಅಗ್ರಹಾರದಲ್ಲಿರುವ ಶ್ರೀ ಸಚಿದಾನಂದ ವಿಲಾಸ, ಶ್ರೀ ಶೃಂಗೇರಿ ಶಾರದಾ ಮಠದಲ್ಲಿ ಹಮ್ಮಿಕೊಳ್ಳಲಾಗಿತ್ತು
ಹೊಸ ತಂಡವು ಲಯನ್ಸ್ ಇಂಟರ್ನ್ಯಾಷನಲ್ನ ಸೇವಾ ಧ್ಯೇಯವನ್ನು ಮುಂದುವರಿಸಿ, ಸಮಾಜದ ಅಗತ್ಯವಿರುವ ವರ್ಗಗಳಿಗೆ ಸೇವೆ ಸಲ್ಲಿಸುವುದು, ಆರೋಗ್ಯ, ಶಿಕ್ಷಣ, ಪರಿಸರ, ಮಾನವೀಯ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮತ್ತಷ್ಟು ಪರಿಣಾಮಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಸಂಕಲ್ಪದೊಂದಿಗೆ ಕಾರ್ಯನಿರ್ವಹಿಸಲಿದೆ ಎಂದು ಮಾಜಿ ಜಿಲ್ಲಾ ರಾಜ್ಯಪಾಲರಾದ ಎನ್ ಕೃಷ್ಣೇಗೌಡರವರು ತಿಳಿಸಿದರು.
ಸೇವಾ ಕಾರ್ಯಗಳಿಗೆ ವಿಶೇಷ ಆದ್ಯತೆ ನೀಡುವ ನಿಟ್ಟಿನಲ್ಲಿ ಕ್ಲಬ್ನ ಸೇವಾ ವಿಭಾಗದ ಅಧ್ಯಕ್ಷರಾಗಿ ಲಯನ್ ಕೃಷ್ಣಮೂರ್ತಿ, ಕೃತಕ ಅಂಗಾಂಗಳ ಸೇವೆಗೆ ಸಂಬಂಧಿಸಿದಂತೆ ಲಯನ್ ಮಹಾವೀರ್ ಚಂದ್ ಭನ್ಸಾಲಿ ಅವರು ಜವಾಬ್ದಾರಿ ವಹಿಸಿಕೊಂಡಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಕೃಷ್ಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ಶ್ರೀವತ್ಸ “ಒಬ್ಬ ವ್ಯಕ್ತಿಗೆ ಕೃತಕ ಅಂಗವನ್ನು ನೀಡುವುದು ಕೇವಲ ಒಂದು ಸೇವಾ ಕಾರ್ಯವಲ್ಲ; ಅವರ ಬದುಕಿಗೆ ಮತ್ತೆ ಹೆಜ್ಜೆ ಇಡುವ ಶಕ್ತಿಯನ್ನು ನೀಡಿದಂತಾಗಿದೆ. ಸೇವೆಯ ನಿಜವಾದ ಅರ್ಥ ಮತ್ತೊಬ್ಬರ ಬದುಕಿನಲ್ಲಿ ಬೆಳಕನ್ನು ಮೂಡಿಸುವುದಾಗಿದೆ ಎಂದು ಅಭಿಪ್ರಾಯಪಟ್ಟರು.
ಲಯನ್ಸ್ ಸಂಸ್ಥೆಯ ಸೇವಾ ಧ್ಯೇಯಕ್ಕೆ ಅನುಗುಣವಾಗಿ ಆರೋಗ್ಯ, ಶಿಕ್ಷಣ, ಪರಿಸರ, ಮಾನವೀಯ ಸೇವೆ ಸೇರಿದಂತೆ ಸಮಾಜದ ಅಗತ್ಯವಿರುವ ವಿವಿಧ ಕ್ಷೇತ್ರಗಳಲ್ಲಿ ನಿರಂತರವಾಗಿ ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಂಕಲ್ಪವನ್ನು ನೂತನ ತಂಡ ಮಾಡಬೇಕೆಂದು ಎರಡನೇ ಜಿಲ್ಲಾ ಉಪ ರಾಜ್ಯಪಾಲ ಎಂ ಸಿದ್ದೇಗೌಡ ಹೇಳಿದರು.
ಕಾರ್ಯಕ್ರಮದಲ್ಲಿ ಲಯನ್ ಜಯಕುಮಾರ್, ಲಯನ್ ಕೆ.ಪಿ. ಚಂದ್ರಕಲಾ ಸೇರಿದಂತೆ ವಿವಿಧ ಹಂತದ ಲಯನ್ಸ್ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು ಎಂದು ಲಯನ್ಸ್ ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಯನ್ ಸಿ.ಆರ್ ದಿನೇಶ್ ಅವರು ಮಾಹಿತಿ ತಿಳಿಸಿದ್ದಾರೆ.
