ಮೈಸೂರು: ನಗರದ ಐತಿಹಾಸಿಕ ದೇವರಾಜ ಮಾರುಕಟ್ಟೆಯಲ್ಲಿ ಹಬ್ಬದ ಸಂದರ್ಭಗಳಲ್ಲಿ ಹೆಚ್ಚಾಗುತ್ತಿರುವ ಜನದಟ್ಟಣೆ, ಅತಿಕ್ರಮಣ ಮತ್ತು ಸುರಕ್ಷತಾ ಸಮಸ್ಯೆಗಳ ಕುರಿತು ಮೈಸೂರು ರಕ್ಷಣಾ ವೇದಿಕೆ ಅಧ್ಯಕ್ಷ ಮೈ ಕಾ ಪ್ರೇಮ್ ಕುಮಾರ್ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ದೇವರಾಜ ಮಾರುಕಟ್ಟೆಯ ಹಲವು ಪ್ರವೇಶ ದ್ವಾರಗಳು ಸಾರ್ವಜನಿಕರ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತವಾಗಿಲ್ಲ. ಕೆಲವು ವ್ಯಾಪಾರಸ್ಥರು ತಮ್ಮ ವ್ಯಾಪಾರ ವಿಸ್ತರಣೆಗಾಗಿ ಸಾರ್ವಜನಿಕರಿಗೆ ಮೀಸಲಾದ ಜಾಗವನ್ನು ಅತಿಕ್ರಮಿಸಿಕೊಂಡಿದ್ದಾರೆ, ಮಾರುಕಟ್ಟೆಯ ಒಳಭಾಗದಲ್ಲಿ ಜನರು ಓಡಾಡುವ ರಸ್ತೆ ಹಾಗೂ ಮಾರ್ಗಗಳಲ್ಲಿಯೂ ಅಂಗಡಿಗಳನ್ನು ಸ್ಥಾಪಿಸಿರುವುದರಿಂದ ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ ಎಂದು ಆರೋಪಿಸಿದರು.
ಹಬ್ಬದ ದಿನಗಳಲ್ಲಿ ಸಾವಿರಾರು ಜನರು ಮಾರುಕಟ್ಟೆಗೆ ಆಗಮಿಸುತ್ತಾರೆ, ಮಹಿಳೆಯರು, ಹಿರಿಯ ನಾಗರಿಕರು ಹಾಗೂ ಮಕ್ಕಳು ಸಂಚಾರ ಮಾಡಲು ಕಷ್ಟಪಡುತ್ತಿದ್ದಾರೆ. ತುರ್ತು ಪರಿಸ್ಥಿತಿ ಅಥವಾ ಅವಘಡ ಸಂಭವಿಸಿದರೆ ಜನರು ಸುರಕ್ಷಿತವಾಗಿ ಹೊರಬರಲು ಕೂಡ ಅಡಚಣೆ ಉಂಟಾಗುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ದೇವರಾಜ ಮಾರುಕಟ್ಟೆಯನ್ನು ಮಹಿಳೆಯರು ಮತ್ತು ಕುಟುಂಬ ವರ್ಗದವರು ನಿರ್ಭಯವಾಗಿ ವ್ಯಾಪಾರ ಹಾಗೂ ಖರೀದಿ ನಡೆಸುವ ಸುರಕ್ಷಿತ ಕೇಂದ್ರವನ್ನಾಗಿ ರೂಪಿಸುವ ಅಗತ್ಯವಿದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಅತಿಕ್ರಮಣ ತೆರವು ಕಾರ್ಯಾಚರಣೆ ನಡೆಸಿ, ಎಲ್ಲಾ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಬೇಕು ಎಂದು ಆಗ್ರಹಿಸಿದರು.
ನಗರಪಾಲಿಕೆ ಆಯುಕ್ತರು ಮತ್ತು ಪೊಲೀಸ್ ಕಮಿಷನರ್,ಅಪರ ಜಿಲ್ಲಾಧಿಕಾರಿಗಳು ಕೂಡಾ ಮಹಿಳೆಯರೇ ಇದ್ದಾರೆ ಆದರೆ ದೇವರಾಜ ಮಾರುಕಟ್ಟೆಯಲ್ಲಿ ಮಹಿಳೆಯರು ಮುಕ್ತವಾಗಿ ವ್ಯಾಪಾರ ಮಾಡಲು ಮತ್ತು ರಕ್ಷಣೆಗೆ ಕ್ರಮ ಕೈಗೊಳ್ಳ ದಿರುವುದು ನಿಜಕ್ಕೂ ನಾಚಿಕೆಗೇಡಿನ ಸಂಗತಿ ಎಂದು ಮೈ ಕಾ ಪ್ರೇಮ್ ಕುಮಾರ್ ಹೇಳಿದ್ದಾರೆ.
ಮಾರುಕಟ್ಟೆಯಲ್ಲಿ ಶಿಸ್ತುಬದ್ಧ ವ್ಯಾಪಾರ ವಾತಾವರಣ ನಿರ್ಮಿಸಲು ನಗರ ಪಾಲಿಕೆ, ಪೊಲೀಸ್ ಇಲಾಖೆ ಹಾಗೂ ಮಾರುಕಟ್ಟೆ ಆಡಳಿತ ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಮಹಿಳಾ ಸುರಕ್ಷತೆ ಮತ್ತು ಸಾರ್ವಜನಿಕರ ಅನುಕೂಲತೆಗೆ ಆದ್ಯತೆ ನೀಡದಿದ್ದರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳು ಮತ್ತಷ್ಟು ಗಂಭೀರವಾಗುವ ಸಾಧ್ಯತೆ ಇದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳೇ ಹೊಣೆ ಎಂದು ಮೈ ಕಾ ಪ್ರೇಮ್ ಕುಮಾರ್ ಎಚ್ಚರಿಸಿದರು.
ಈ ಬಗ್ಗೆ ಕ್ರಮ ಕೈಗೊಳ್ಳದಿದ್ದರೆ ನಾವು ಪ್ರತಿಭಟನೆ ಮಾಡಲೇಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
