ಯಳಂದೂರು: ಡಾ.ಬಿ.ಆರ್. ಅಂಬೇಡ್ಕರ್, ಬುದ್ಧ ಹಾಗೂ ಬಸವಣ್ಣ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವವರನ್ನು ಗಡಿಪಾರು ಮಾಡುವಂತೆ ದಲಿತ ಸಂಘಟನೆಗಳು ಆಗ್ರಹಿಸಿವೆ.
ಮಂಡ್ಯ ಜಿಲ್ಲೆ, ಕೆ.ಆರ್. ಪೇಟೆ ತಾಲೂಕು ಬೂಕನಕೆರೆ ಹೋಬಳ ದೊಡ್ಡಯಾಚೇನಹಳ್ಳಿ ಗ್ರಾಮದ ವೇದಮೂರ್ತಿಯನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಒತ್ತಾಯಿಸಿ ವಿವಿಧ ದಲಿತಪರ ಸಂಘಟನೆಗಳು ರಾಜ್ಯಪಾಲರಿಗೆ ತಹಶೀಲ್ದಾರ್ ಮೂಲಕ ಮನವಿ ಪತ್ರ ಸಲ್ಲಿಸಿದವು.
ವೇದಮೂರ್ತಿ ಎಂಬವರು ತಮ್ಮ ಫೇಸ್ಬುಕ್ ಖಾತೆಯಲ್ಲಿ ರಾಷ್ಟ್ರ ನಾಯಕರು, ದಲಿತ ಜನಾಂಗವನ್ನು ನಿಂದಿಸಿದ್ದಾರೆ. ಅಲ್ಲದೆ, ದಲಿತ ಜನಾಂಗದ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕ್ ಖರ್ಗೆ ಅವರನ್ನು ಏಕ ವಚನದಲ್ಲಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ ಎಂದು ದಲಿತ ಮುಖಂಡರು ಮನವಿಯಲ್ಲಿ ದೂರಿದ್ದಾರೆ.
ಈತ ತನ್ನ ವಿಡಿಯೋಗಳಲ್ಲಿ ಮೀಸಲಾತಿ ವಿರುದ್ಧ ಮಾತನಾಡಿದ್ದಲ್ಲದೆ ಬುದ್ಧ, ಬಸವ ಅಂಬೇಡ್ಕರ್ರನ್ನು ಕೀಳು ಭಾಷೆಯನ್ನು ಬಳಸಿ ನಿಂದಿಸಿದ್ದಾನೆ. ಇಂತಹ ಹೇಳಿಕೆಗಳಿಂದ ಸಮಾಜದಲ್ಲಿ ಶಾಂತಿ ಕದಡುತ್ತದೆ. ಜಾತಿ ಸಂಘರ್ಷಕ್ಕೆ ಇದು ಕಾರಣವಾಗುವ ಸಾಧ್ಯತೆ ಇದೆ. ಇಂತಹ ಪ್ರಚೋನಾಧಿಕಾರಿ, ಸಮಾಜ ಘಾತುಕ ಹೇಳಿಕೆಗಳನ್ನು ನೀಡುವ ಮೂಲಕ ಕಾನೂನು ವ್ಯವಸ್ಥೆಗೆ ಭಂಗ ತರುವ ಇಂತಹವರ ಹೇಳಿಕೆ ದಲಿತ ಸಮುದಾಯಕ್ಕೆ ಮಾಡಿರುವ ಅವಮಾನವಾಗಿದ್ದು ಕೂಡಲೇ ಈತನನ್ನು ದೇಶದ್ರೋಹ ಕಾಯ್ದೆಯಡಿ ಬಂಧಿಸಿ ರಾಜ್ಯದಿಂದ ಗಡಿಪಾರು ಮಾಡಬೇಕೆಂದು ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸ್ವೀಕರಿಸಿದ ಗ್ರೇಡ್-2 ತಹಶೀಲ್ದಾರ್ ಎಂ. ಶಾಂತಿ ಇದನ್ನು ನಮ್ಮ ಇಲಾಖೆಯ ಮೂಲಕ ರಾಜ್ಯಪಾಲರಿಗೆ ಕಳುಹಿಸಲಾಗುವುದು ಎಂದು ಭರವಸೆ ನೀಡಿದರು.
ನಂತರ ಯಳಂದೂರು ಪೊಲೀಸ್ ಠಾಣೆಗೆ ತೆರಳಿ ಅಲ್ಲಿಯೂ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಸೇವಾ ಸಮಿತಿ ಅಧ್ಯಕ್ಷ ಕೆಸ್ತೂರು ಸಿದ್ಧರಾಜು, ಪ್ರಧಾನ ಕಾರ್ಯದರ್ಶಿ ನಟರಾಜು, ಯರಿಯೂರು ರಾಜಣ್ಣ, ಚಂಗಚಹಳ್ಳಿ ಜಯರಾಮು, ಗುಂಬಳ್ಳಿ ಮಹದೇವ್, ಹೊನ್ನೂರು ಎನ್. ಸಿದ್ದರಾಜು, ಸುರೇಶ್, ಮಲ್ಲಿಗಹಳ್ಳಿ ನಾಗಣ್ಣ, ಗೌಡಹಳ್ಳಿ ಚಂದ್ರಶೇಖರ್, ಆರ್. ಚಿನ್ನಸ್ವಾಮಿ, ದುಗ್ಗಹಟ್ಟಿ ಮಾದೇಶ್, ಮಾಂಬಳ್ಳಿ ರಾಮು, ಯರಂಬಳ್ಳಿ ಮಲ್ಲು, ಸಿದ್ಧರಾಜು, ಅಗ್ರಹಾರ ರಂಗಸ್ವಾಮಿ, ನಾಗರಾಜು ಸೇರಿದಂತೆ ದಲಿತ ಮುಖಂಡರು ಹಾಜರಿದ್ದರು.
