ಬೆಂಗಳೂರು: ನಮ್ಮಲ್ಲಿರುವ ಪ್ರತಿಭಾವಂತ ಮಾನವ ಸಂಪನ್ಮೂಲ, ದೇಶದ ಬೇರೆ ಯಾವುದೇ ರಾಜ್ಯಗಳಲ್ಲಿ ಇಲ್ಲ, ನಮ್ಮ ಮಕ್ಕಳು ಜಾಗತಿಕ ಮಟ್ಟದಲ್ಲಿ ಕಲಿಯಬೇಕು, ಅವರು ಕೇವಲ ಉದ್ಯೋಗಿಗಳಾಗುವುದಲ್ಲ, ಉದ್ಯೋಗದಾತರಾಗಬೇಕು ಎಂದು ಸಿಎಂ ಡಿ ಕೆ ಶಿವಕುಮಾರ್ ಕರೆ ನೀಡಿದರು.
ಕೌಶಲ್ಯಾಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರಿನ ಅರಮನೆ ಮೈದಾನದಲ್ಲಿ ಭಾನುವಾರ ನಡೆದ ವಿದೇಶದಲ್ಲಿ ಅಧ್ಯಯನ 2026 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಿಎಂ ಮಾತನಾಡಿದರು.
ದೇಶದ ಅಧ್ಯಯನಕ್ಕೆ ನಮ್ಮ ಸರ್ಕಾರ ಹೊಸ ಬಾಗಿಲು ತೆರೆದಿದೆ. ಶರಣ ಪ್ರಕಾಶ್ ಪಾಟೀಲ್ ಅವರ ನೇತೃತ್ವದಲ್ಲಿ ಸಾಗರೋತ್ತರ ಜ್ಞಾನ ಬೆಸೆಯುವಲ್ಲಿ ಅತ್ಯುತ್ತಮ ಕಾರ್ಯನಿರ್ವಹಿಸುತ್ತಿದ್ದಾರೆ. ಜ್ಞಾನದ ಮೇಲಿನ ಹೂಡಿಕೆ ಪ್ರತಿಯೊಬ್ಬರಿಗೂ ಅತ್ಯುತ್ತಮ ಆಸ್ತಿಯಾಗುತ್ತದೆ. ಮಾನವನಿಗೆ ಎಲ್ಲೆಗಳಿವೆ, ಆದರೆ ಜ್ಞಾನಕ್ಕೆ ಎಲ್ಲೆಗಲಿಲ್ಲ. ಜಾಗತಿಕ ಮಟ್ಟದ ಶಿಕ್ಷಣದ ಅವಕಾಶ ಪಡೆಯುವುದರಿಂದ ಮಾನಸಿಕವಾಗಿ ಬಲಿಷ್ಠರನ್ನಾಗಿಸುತ್ತದೆ ಎಂದು ತಿಳಿಸಿದರು.
ನಾವು ಕಲಿತ ವಿದ್ಯೆಯನ್ನು ಯಾರೂ ಕಸಿಯಲು ಸಾಧ್ಯವಿಲ್ಲ. ಸಚಿವರು ಹಾಗೂ ಸರ್ಕಾರ ನಿಮಗೆ ಜಾಗತಿಕ ಮಟ್ಟದಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಿ ನಿಮ್ಮ ಭವಿಷ್ಯವನ್ನು ಉಜ್ವಲಿಸುವಂತೆ ಮಾಡುತ್ತಿದೆ ಎಂದು ಹೇಳಿದರು.
ಮಹಾತ್ಮ ಗಾಂಧಿ, ಅಂಬೇಡ್ಕರ್, ರಾಜಾರಾಮ್ ಮೋಹನ್ ರಾಯ್ ರಂತಹ ನಾಯಕರು ವಿದೇಶದಲ್ಲಿ ಓದಿ, ನಮ್ಮ ದೇಶವನ್ನು ಮುನ್ನಡೆಸಿದ್ದಾರೆ. ವಿದೇಶದ ವಿವಿಗಳಲ್ಲಿ ನಮ್ಮ ಮಕ್ಕಳಿಗೆ ಅಧ್ಯಯನಕ್ಕೆ ಅವಕಾಶ ಕಲ್ಪಿಸಲು ಕರ್ನಾಟಕ ಸರ್ಕಾರ ಈ ಅವಕಾಶ ಕಲ್ಪಿಸಿದೆ. ಈ ಕಾರ್ಯಕ್ರಮದಲ್ಲಿ 80ಕ್ಕೂ ಹೆಚ್ಚು ವಿವಿಗಳು ಭಾಗವಹಿಸಿದ್ದು, 300ಕ್ಕೂ ಹೆಚ್ಚು ವಿಷಯಗಳಲ್ಲಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಸರ್ಕಾರದ ವಿವಿಧ ಇಲಾಖೆಗಳಿಂದ ವಿಶೇಷ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ವಿವಿಧ ಬ್ಯಾಂಕ್ ಗಳು ನೆರವು ನೀಡುತ್ತಿದ್ದು, 2 ಕೋಟಿ ರೂ. ವರೆಗೂ ಸಾಲ ಸೌಲಭ್ಯ ನೀಡುತ್ತಿವೆ. ರಾಜ್ಯದ ವಿದ್ಯಾರ್ಥಿಗಳು ಈ ಅವಕಾಶ ಸದುಪಯೋಗಪಡಿಸಿಕೊಂಡು ಬಲಿಷ್ಠವಾಗಬೇಕು. ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ಡಿ.ಕೆ.ಶಿವಕುಮಾರ್ ಕಿವಿಮಾತು ಹೇಳಿದರು.
ನಾವು ಕ್ವೀನ್ಸ್ ಲ್ಯಾಂಡ್ ವಿವಿ ಜೊತೆಗೆ ಒಡಂಬಡಿಕೆ ಮಾಡಿಕೊಂಡಿದ್ದು, ವಿದೇಶದ ವಿವಿಗಳಲ್ಲಿ ವ್ಯಾಸಂಗ ಮಾಡಲು 3,145 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ನಮ್ಮ ಮಕ್ಕಳು ವಿದ್ಯಾಭ್ಯಾಸ ಮುಗಿಸಿದ್ದರೂ ಅವರು ಹೆಚ್ಚಿನ ಮಾಹಿತಿ ಪಡೆಯಲು ಇಲ್ಲಿಗೆ ಬನ್ನಿ ಎಂದು ಕರೆದಿರುವೆ ಎಂದು ಹೇಳಿದರು
ನಮ್ಮ ಸರ್ಕಾರ ಶಿಕ್ಷಕರಿಗೆ ಗೌರವ ನೀಡಲು Tr. (Teacher) ಎಂದು ತಮ್ಮ ಹೆಸರಿನ ಮುಂದೆ ಸೇರಿಸಲು ತೀರ್ಮಾನಿಸಿದ್ದೇವೆ. ನನಗೆ ನೂರಾರು ಕರೆ ಬಂದಿದ್ದು, ನಮ್ಮ ತೀರ್ಮಾನವನ್ನು ಸ್ವಾಗತಿಸಿದ್ದಾರೆ. ನಾವು ಗುರುಗಳನ್ನು ದೇವರಂತೆ ಕಾಣುತ್ತೇವೆ. ಶಿಕ್ಷಕರಿಗೆ ಗೌರವ ನೀಡಲು ಮುಂದಾಗಿದ್ದೇವೆ. ನಿಮ್ಮಲ್ಲಿ ಅವರ ಯಶಸ್ಸು ಕಾಣಲು ತಂದೆ ತಾಯಿ ಹಾಗೂ ಗುರುಗಳು ಬಯಸುತ್ತಾರೆ ಎಂದು ಸಿಎಂ ತಿಳಿಸಿದರು
