ಚಿತ್ರದುರ್ಗ, ಸೆ.3: ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ಕೃತಕ ಬುದ್ಧಿಮತ್ತೆ, ರೊಬೊಟಿಕ್ಸ್, ಬಯೋಟೆಕ್ನಾಲಜಿ ಹಾಗೂ ಡಿಜಿಟಲ್ ತಂತ್ರಜ್ಞಾನದ ಪಾತ್ರ ಪ್ರಮುಖವಾಗಿದ್ದು, ವಿದ್ಯಾರ್ಥಿಗಳಿಗೆ ಕೌಶಲ ಮತ್ತು ನಾವೀನ್ಯತೆ ಆಧಾರಿತ ಶಿಕ್ಷಣ ನೀಡುವುದು ಅತ್ಯಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ತಿಳಿಸಿದರು.
ಹಿರಿಯೂರು ತಾಲ್ಲೂಕಿನ ಹೊಸಯಳನಾಡು ಗ್ರಾಮದಲ್ಲಿ ಗುರುವಾರ ಕರ್ನಾಟಕ ಪಬ್ಲಿಕ್ ಶಾಲೆಯ ನೂತನ ಶಾಲಾ ಕೊಠಡಿಗಳು, ಪ್ರಾರ್ಥನಾ ಮಂದಿರ ಹಾಗೂ ಕುಟೀರಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ವಿಜ್ಞಾನ ಮಾದರಿಗಳ ತಯಾರಿ, ಪರಿಸರ ಯೋಜನಾ ಚಟುವಟಿಕೆಗಳು, ರೀಡಿಂಗ್ ಕ್ಲಬ್ಗಳು, ಕ್ರೀಡೆ ಹಾಗೂ ಕೌಶಲಾಭಿವೃದ್ಧಿ ಚಟುವಟಿಕೆಗಳನ್ನು ಶಾಲಾ ಹಂತದಲ್ಲೇ ಹೆಚ್ಚು ಪ್ರೋತ್ಸಾಹಿಸಬೇಕು. ಸಣ್ಣ ಸಣ್ಣ ನಾವೀನ್ಯತಾ ಯೋಜನೆಗಳ ಮೂಲಕ ಮಕ್ಕಳಲ್ಲಿ ಸೃಜನಶೀಲತೆ ಮತ್ತು ಆವಿಷ್ಕಾರದ ಮನೋಭಾವವನ್ನು ಬೆಳೆಸಬೇಕು ಎಂದು ರಾಜ್ಯಪಾಲರು ಅಭಿಪ್ರಾಯಪಟ್ಟರು.
ಶಾಲೆಗಳು ಕೇವಲ ಶಿಕ್ಷಣದ ಕೇಂದ್ರಗಳಷ್ಟೇ ಅಲ್ಲದೆ ಪರಿಸರ ಜಾಗೃತಿಯ ಕೇಂದ್ರಗಳಾಗಿಯೂ ಹೊರಹೊಮ್ಮಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯೂ ಕನಿಷ್ಠ ಒಂದು ಸಸಿನಟ್ಟು ಪೋಷಿಸಬೇಕು. ಜಲ ಸಂರಕ್ಷಣೆ, ಪ್ಲಾಸ್ಟಿಕ್ ಬಳಕೆ ಕಡಮೆ ಮಾಡುವುದು, ಶಕ್ತಿ ಉಳಿತಾಯ ಹಾಗೂ ಶಾಲೆ ಮತ್ತು ಸುತ್ತಮುತ್ತಲಿನ ಪರಿಸರದಲ್ಲಿ ಸ್ವಚ್ಛತೆ ಕಾಯ್ದುಕೊಳ್ಳುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ಶಾಲೆಯು ಜ್ಞಾನ, ಸಂಸ್ಕಾರ, ಶಿಸ್ತು, ನಾವೀನ್ಯತೆ ಮತ್ತು ಶ್ರೇಷ್ಠತೆಯ ಕೇಂದ್ರವಾಗಿ ಬೆಳೆಯಲಿದೆ. ಇಲ್ಲಿ ವ್ಯಾಸಂಗ ಮಾಡುವ ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಕುಟುಂಬ, ಸಮಾಜ, ಕರ್ನಾಟಕ ರಾಜ್ಯ ಹಾಗೂ ಇಡೀ ದೇಶಕ್ಕೆ ಕೀರ್ತಿ ತರಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಗೆಹ್ಲೋಟ್ ಹೇಳಿದರು.
ಶಿಕ್ಷಣ ಕೇವಲ ಪರೀಕ್ಷೆಯಲ್ಲಿ ಅಂಕ ಗಳಿಸುವುದು ಅಥವಾ ಉದ್ಯೋಗ ಪಡೆಯುವುದಕ್ಕೆ ಮಾತ್ರ ಸೀಮಿತವಾಗಿರಬಾರದು. ಜ್ಞಾನದೊಂದಿಗೆ ವಿವೇಕ, ವಿಜ್ಞಾನದೊಂದಿಗೆ ಸಂವೇದನೆ, ಯಶಸ್ಸಿನೊಂದಿಗೆ ಸಂಸ್ಕಾರ ಹಾಗೂ ಹಕ್ಕುಗಳೊಂದಿಗೆ ಕರ್ತವ್ಯ ಪ್ರಜ್ಞೆಯನ್ನು ಮೂಡಿಸುವುದೇ ನಿಜವಾದ ಶಿಕ್ಷಣದ ಮುಖ್ಯ ಉದ್ದೇಶ ಎಂದು ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ ಹೇಳಿದರು.
ದೇಶದ ನಿಜವಾದ ಶಕ್ತಿ ಕೇವಲ ಪ್ರಾಕೃತಿಕ ಅಥವಾ ಆರ್ಥಿಕ ಸಂಪನ್ಮೂಲಗಳಲ್ಲ, ಬದಲಿಗೆ ಸಂಸ್ಕಾರವಂತ, ಕೌಶಲಪೂರ್ಣ ಹಾಗೂ ಜವಾಬ್ದಾರಿಯುತ ಪ್ರಜೆಗಳು. ಹೀಗಾಗಿ ಶಿಕ್ಷಕರು ವಿದ್ಯಾರ್ಥಿಗಳಲ್ಲಿ ಪ್ರಾಮಾಣಿಕತೆ, ಶಿಸ್ತು, ಆತ್ಮವಿಶ್ವಾಸ, ವೈಜ್ಞಾನಿಕ ಮನೋಭಾವ ಹಾಗೂ ದೇಶಭಕ್ತಿಯಂತಹ ಮೌಲ್ಯಗಳನ್ನು ಬೆಳೆಸಬೇಕು ಎಂದು ಮನವಿ ಮಾಡಿದರು.
ರಾಷ್ಟ್ರೀಯ ಶಿಕ್ಷಣ ನೀತಿ 2020 ಶಿಕ್ಷಣವನ್ನು ಹೆಚ್ಚು ಸಮಗ್ರ, ಕೌಶಲಾಧಾರಿತ ಹಾಗೂ ನಾವೀನ್ಯತೆ ಕೇಂದ್ರಿತಗೊಳಿಸಲು ಒತ್ತು ನೀಡಿದೆ. ಇಂದು ವಿದ್ಯಾರ್ಥಿಗಳು ಕೇವಲ ಪುಸ್ತಕಗಳಿಗೆ ಸೀಮಿತವಾಗದೆ ಪ್ರಯೋಗಾಲಯ, ಕ್ರೀಡಾಂಗಣ, ಕಲೆ, ಸಂಸ್ಕೃತಿ ಮತ್ತು ತಂತ್ರಜ್ಞಾನದ ಸೃಜನಶೀಲ ಬಳಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿಕಸಿತ ಭಾರತ’ದ ಕನಸು ನನಸಾಗಲು ಹೆಣ್ಣುಮಕ್ಕಳ ಪಾತ್ರ ಅತ್ಯಂತ ಪ್ರಮುಖವಾಗಿದೆ. ಪ್ರತಿಯೊಬ್ಬ ಹೆಣ್ಣುಮಗಳಿಗೆ ಗುಣಮಟ್ಟದ ಶಿಕ್ಷಣ, ಸುರಕ್ಷತೆ, ಆರೋಗ್ಯ ಮತ್ತು ಆತ್ಮವಿಶ್ವಾಸ ಸಿಗುವಂತಾಗಬೇಕು ಎಂದು ರಾಜ್ಯಪಾಲರು ಆಶಿಸಿದರು.
ಸುತ್ತೂರು ಜಗದ್ಗುರು ಶ್ರೀ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದರು.ಸಚಿವ ಟಿ.ರಘುಮೂರ್ತಿ,ಮಾಜಿ ಸಚಿವ ಗೋವಿಂದ ಕಾರಜೋಳ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳು ಹಾಜರಿದ್ದರು.
