ಮೈಸೂರು: ಇಸ್ಲಾಂ ಧರ್ಮದ ಬಗ್ಗೆ ಮಾತನಾಡುವ ಮೂಲಕ ವಿವಿಧ ಧರ್ಮದವರ ಭಾವನೆಗಳಿಗೆ ಧಕ್ಕೆ ತಂದಿರುವ
ಸಚಿವ ಬಸವರಾಜ ರಾಯರಡ್ಡಿಯವರು ಕ್ಷಮೆ ಯಾಚಿಸುವಂತೆ ಬಿಜೆಪಿ ಮುಖಂಡರಾದ ಡಾ.ಹೇಮನಂದೀಶ್ ಆಗ್ರಹಿಸಿದ್ದಾರೆ.
ಇತರೆ ಧರ್ಮ ದವರ ಭಾವನೆಗೆ ಧಕ್ಕೆ ತರುವುದರ ಜತೆಗೆ ರಾಜಕೀಯ ವಲಯದಲ್ಲಿ ವಿವಾದಕ್ಕೆ ಕಾರಣವಾಗಿರುವ ಸಚಿವ ಬಸವರಾಜ ರಾಯರಡ್ಡಿಯವರು ತಮ್ಮ ಹೇಳಿಕೆಯನ್ನು ಹಿಂಪಡೆದು ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಕುಕನೂರಿನ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ರಾಯರಡ್ಡಿಯವರು ‘ಇಸ್ಲಾಂ ಧರ್ಮವೇ ಸರ್ವ ಶ್ರೇಷ್ಠ’ ಎಂದು ಹೇಳುವ ಮೂಲಕ ಇತರೆ ಧರ್ಮದ ಮೌಲ್ಯಗಳಿಗೆ ಅಪ್ರತ್ಯಕ್ಷವಾಗಿ ಅಗೌರವ ತೋರಿದಂತಾಗಿದೆ. ಇದು ಇತರೆ ಧರ್ಮದವರ ಮನಸ್ಸಿಗೆ ನೋವುಂಟು ಮಾಡಿದಂತಿದೆ’ ಎಂದು ಹೇಳಿದ್ದಾರೆ.
‘ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಮೆಕ್ಕಾಗೆ ಭೇಟಿ ನೀಡುವ ಬಯಕೆ ವ್ಯಕ್ತಪಡಿಸಿದ ರಾಯರಡ್ಡಿಯವರ ಓಲೈಕೆ ರಾಜಕಾರಣದ ಮೂಲಕ ಅನ್ಯ ಧರ್ಮದರಿಗೆ ನೋವು ತರುವ ಕೆಲಸಕ್ಕೆ ಹಿಂದೂ ಧರ್ಮೀಯರು ತೀವ್ರವಾಗಿ ಖಂಡಿಸುತ್ತಾರೆ’ ಎಂದು ತಿಳಿಸಿದರು.
ಮತಕ್ಕಾಗಿ ಧರ್ಮಗಳನ್ನು ಬಳಸಿಕೊಳ್ಳುವುದು ರಾಯರಡ್ಡಿಯವರ ಕೀಳು ಮಟ್ಟದ ಅಭಿರುಚಿ ತೋರಿಸುತ್ತಿದ್ದು, ಕೂಡಲೇ ಕ್ಷಮೆಯಾಚಿಸಬೇಕು. ಹಿಂದೂ ಧರ್ಮಕ್ಕೆ ಸಂಬಂಧಿಸಿದ ಯಾವುದೇ ನೋವು ತರಿಸುವ ಮಾತುಗಳನ್ನು ಆಡಿದ್ದಲ್ಲಿ ಹೋರಾಟ ಮಾಡಬೇಕಾಗುತ್ತದೆ’ ಎಂದು ಹೇಮಾ ನಂದೀಶ್ ಎಚ್ಚರಿಸಿದರು.
ರಾಯರೆಡ್ಡಿ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತರಾಗಿ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
