ಬೆಂಗಳೂರು: ತೀವ್ರ ಬರಗಾಲದ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮೋಡ ಬಿತ್ತನೆಗೆ ಮುಂದಾಗಿರುವುದು ಒಳ್ಳೆಯದೆ,ಆದರೆ ಇದನ್ನು ಗುತ್ತಿಗೆ ನೀಡುವಲ್ಲಿ ಕಾಂಗ್ರೆಸ್, ಬಿಜೆಪಿ ಶಾಮೀಲಾಗಿವೆ ಎಂದು
ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಆರೋಪಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ತೀವ್ರ ಬರಗಾಲವನ್ನು ಎದುರಿಸುತ್ತಿರುವ ರಾಜ್ಯದಲ್ಲಿ ಮೋಡ ಬಿತ್ತನೆ ಕಾರ್ಯವನ್ನು ತ್ವರಿತವಾಗಿ ಕೈಗೊಳ್ಳುವ ಉದ್ದೇಶದಿಂದ ಸರ್ಕಾರವು ಕರ್ನಾಟಕ ಪಾರದರ್ಶಕ ಸಾರ್ವಜನಿಕ ಸಂಗ್ರಹಣೆ ಕಾಯ್ದೆಯ 4(ಜಿ) ಅಡಿಯಲ್ಲಿ ಟೆಂಡರ್ ಪ್ರಕ್ರಿಯೆಯಿಂದ ವಿನಾಯಿತಿ ಪಡೆದಿರುವುದನ್ನು ಆಮ್ ಆದ್ಮಿ ಪಕ್ಷ ಪ್ರಶ್ನಿಸುವುದಿಲ್ಲ. ಆದರೆ, ಈ ವಿನಾಯಿತಿಯ ಹೆಸರಿನಲ್ಲಿ ಅಧಿಕಾರ ದುರುಪಯೋಗ, ಸ್ವಜನಪಕ್ಷಪಾತ ಮತ್ತು ರಾಜಕೀಯ ನಂಟು ಹೊಂದಿರುವ ಸಂಸ್ಥೆಗೆ ಅನುಕೂಲ ಮಾಡಿಕೊಡಲಾಗಿದೆಯೇ ಎಂಬುದು ನಮ್ಮ ಗಂಭೀರ ಪ್ರಶ್ನೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
28.52 ಕೋಟಿ ಮೊತ್ತದ ಈ ಮೋಡ ಬಿತ್ತನೆ ಕಾಮಗಾರಿಯನ್ನು ಪಡೆಯುತ್ತಿರುವ ಖ್ಯಾತಿ ಹವಾಮಾನ ಮಾರ್ಪಾಡು ಸಲಹಾ ಸಂಸ್ಥೆ ಎಲ್ಎಲ್ಪಿಗೆ ಶಾಸಕ ಪ್ರಕಾಶ್ ಕೋಳಿವಾಡ ಅವರ ಪುತ್ರ ಕೃಷಿ ಪ್ರಕಾಶ್ ಕೋಳಿವಾಡ ಅವರ ವ್ಯವಹಾರಿಕ ನಂಟಿದೆ. ಇದೇ ಸಂಸ್ಥೆಯೊಂದಿಗೆ ಬಿಜೆಪಿ ಪ್ರಮುಖ ನಾಯಕ ಗೋವಿಂದ ಎಂ. ಕಾರಜೋಳ ಅವರ ಪುತ್ರ ಅರುಣ್ ಕಾರಜೋಳ ಅವರಿಗೂ ವ್ಯವಹಾರಿಕ ನಂಟು ಇದೆ ಎನ್ನುವುದು ಬಹಿರಂಗ.
ಒಂದೆಡೆ ಕಾಂಗ್ರೆಸ್ ಶಾಸಕರ ಕುಟುಂಬ, ಮತ್ತೊಂದೆಡೆ ಬಿಜೆಪಿ ಪ್ರಮುಖ ನಾಯಕರ ಕುಟುಂಬದ ನಂಟು ಹೊಂದಿರುವ ಸಂಸ್ಥೆಗೆ ಕೋಟ್ಯಂತರ ರೂಪಾಯಿ ಸರ್ಕಾರಿ ಕಾಮಗಾರಿ ದೊರೆತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ ಎಂದು ಜಗದೀಶಿ ತಿಳಿಸಿದರು.
ಬರಗಾಲದ ತುರ್ತು ಪರಿಸ್ಥಿತಿಯಲ್ಲಿ 4(ಜಿ) ವಿನಾಯಿತಿ ಅಗತ್ಯವಿರಬಹುದು. ಆದರೆ ತುರ್ತು ಪರಿಸ್ಥಿತಿ ಎಂದರೆ ಪಾರದರ್ಶಕತೆಯನ್ನು ಬದಿಗೊತ್ತಿ ನಿರ್ದಿಷ್ಟ ಸಂಸ್ಥೆಗೆ ಅನುಕೂಲ ಮಾಡಿಕೊಡುವ ಅಧಿಕಾರವಲ್ಲ. ಸಂಸ್ಥೆಯ ತಾಂತ್ರಿಕ ಅರ್ಹತೆ, ಅನುಭವ, ದರ ಮತ್ತು ಆಯ್ಕೆಯ ಮಾನದಂಡಗಳನ್ನು ಸರ್ಕಾರ ಬಹಿರಂಗಪಡಿಸಬೇಕು ಎಂದು ಜಗದೀಶ್ ವಿ.ಸದಂ ಆಗ್ರಹಿಸಿದರು.
ದೇಶದಲ್ಲಿ ಮೋಡ ಬಿತ್ತನೆ ಕ್ಷೇತ್ರದಲ್ಲಿ ಅನುಭವ ಹೊಂದಿರುವ ಅಗ್ನಿ ಏವಿಯೇಷನ್ ಕನ್ಸಲ್ಟೆಂಟ್ಸ್, ಸಿರಿ ಏವಿಯೇಷನ್ಸ್, ಜೆನ್ಎಕ್ಸ್ ಎಐ ಸೇರಿದಂತೆ ಹಲವು ಸಂಸ್ಥೆಗಳಿರುವಾಗ, ನಿರ್ದಿಷ್ಟ ಸಂಸ್ಥೆಯನ್ನೇ ಆಯ್ಕೆ ಮಾಡಲು ಕಾರಣವೇನು ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.
ಈ ಪ್ರಕರಣದಲ್ಲಿ ಬಿಜೆಪಿ ನಾಯಕ ಗೋವಿಂದ ಕಾರಜೋಳ ಅವರ ಪುತ್ರನ ವ್ಯವಹಾರಿಕ ನಂಟು ಇರುವುದರಿಂದ ರಾಜ್ಯ ಬಿಜೆಪಿ ಕೂಡ ತನ್ನ ನಿಲುವನ್ನು ಸ್ಪಷ್ಟಪಡಿಸಬೇಕು.
ಕಾಂಗ್ರೆಸ್ ಸರ್ಕಾರದೊಂದಿಗೆ ಬಿಜೆಪಿಗೆ ಯಾವುದೇ ಒಳ ಒಪ್ಪಂದ ಅಥವಾ ರಾಜಕೀಯ-ವ್ಯವಹಾರಿಕ ನಂಟು ಇಲ್ಲದಿದ್ದರೆ, ಬಿಜೆಪಿ ರಾಜ್ಯ ನಾಯಕರು ಈ ಕುರಿತು ಬಹಿರಂಗವಾಗಿ ಪ್ರತಿಕ್ರಿಯಿಸಲಿ ಎಂದು ಅವರು ಸವಾಲು ಹಾಕಿದರು.
ಜನರ ತೆರಿಗೆ ಹಣ 28.52 ಕೋಟಿಗೆ ಸರ್ಕಾರ ಲೆಕ್ಕ ನೀಡಬೇಕು. 4(ಜಿ) ವಿನಾಯಿತಿಯನ್ನು ಜನರ ಹಿತಕ್ಕಾಗಿ ಬಳಸಬೇಕೇ ಹೊರತು ರಾಜಕೀಯ ಪ್ರಭಾವ ಹೊಂದಿರುವ ಕುಟುಂಬಗಳಿಗೆ ಅನುಕೂಲ ಮಾಡಿಕೊಡಲು ಬಳಸಬಾರದು. ಕಾಂಗ್ರೆಸ್ ಸರ್ಕಾರದ ಅಧಿಕಾರ ದುರುಪಯೋಗ ಮತ್ತು ಸ್ವಜನಪಕ್ಷಪಾತವನ್ನು ಆಮ್ ಆದ್ಮಿ ಪಕ್ಷ ತೀವ್ರವಾಗಿ ಖಂಡಿಸುತ್ತದೆ ಎಂದು ಜಗದೀಶ್ ವಿ. ಸದಂ ತಿಳಿಸಿದರು.
