ಮೈಸೂರು, ಸೆ.1: ರಾಜ್ಯದ ಕಾನೂನಿನಡಿ ಬರ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಿದರೆ ಪರಿಹಾರ ಸಿಗುವುದಿಲ್ಲ, ಕೇಂದ್ರ ಸರ್ಕಾರದ ನಿಯಮಗಳಡಿಯಲ್ಲೇ ಮಾಡಬೇಕು ಎಂದು ಉಪ ಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರಾದ ಡಾ.ಜಿ.ಪರಮೇಶ್ವರ ಅವರು ತಿಳಿಸಿದರು.
ಹಾಗಾಗಿ ನಾವು 101 ತಾಲೂಕುಗಳನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಿದ್ದೇವೆ. ಇನ್ನೊಂದು ವಾರ ಬಿಟ್ಟು ಪರಿಶೀಲನೆ ನಡೆಸಿ, ಆಗ ಈ ವರ್ಗಕ್ಕೆ ಸೇರುವ ಪ್ರದೇಶಗಳನ್ನು ಬರಪೀಡಿತ ಎಂದು ಘೋಷಿಸಲಾಗುವುದು ಎಂದು ಹೇಳಿದರು.
ಇಂದು ಹುಣಸೂರು ತಾಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ಬರ ವೀಕ್ಷಣೆ ನಡೆಸಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು.
ಇನ್ನೆರಡು ವಾರದೊಳಗೆ ಕೇಂದ್ರಕ್ಕೆ ಸಮಗ್ರ ಬರ ವರದಿಯನ್ನು ಸಲ್ಲಿಸುತ್ತೇವೆ. ಆ ಬಳಿಕ ಕೇಂದ್ರದ ತಂಡಗಳು ಬಂದು ಪರಿಶೀಲನೆ ನಡೆಸಿದ, ನಂತರ ಪರಿಹಾರ ಬಿಡುಗಡೆಯಾಗುತ್ತದೆ. ಅದಕ್ಕೆ ಮೊದಲು ನಮಗೆ ಯಾವುದೇ ಪರಿಹಾರ ಹಣವನ್ನು ಕೊಡುವುದಿಲ್ಲ ಎಂದು ತಿಳಿಸಿದರು.
ಮುಖ್ಯಮಂತ್ರಿಗಳು ಇಂದು ಗದಗದಲ್ಲಿ ಬರವೀಕ್ಷಣೆ ಮಾಡುತ್ತಿದ್ದಾರೆ. ನಾನು ಇಲ್ಲಿ ವೀಕ್ಷಣೆ ಮಾಡುತ್ತಿದ್ದೇನೆ. ಮುಖ್ಯಮಂತ್ರಿಗಳ ಆದೇಶದಂತೆ ಎಲ್ಲ ಸಚಿವರು ತಮಗೆ ನಿಯೋಜಿಸಿರುವ ಜಿಲ್ಲೆಗಳ ಬರ ವೀಕ್ಷಣೆ ನಡೆಸುತ್ತಿದ್ದಾರೆ. ಆನಂತರ ಎಲ್ಲವನ್ನೂ ಒಟ್ಟಾಗಿ ಪರಿಶೀಲಿಸಿ, ರೈತರಿಗೆ ಯಾವ ರೀತಿಯಲ್ಲಿ ಸಹಾಯ ಮಾಡಬೇಕು, ಇನ್ಶೂರೆನ್ಸ್ ಏನು ಮಾಡಬೇಕು ಎಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಜೋಳಕ್ಕೆ ಬಿಳಿಸುಳಿ ರೋಗ ಬಂದಿದೆ. ಆ ರೋಗ ಇನ್ಶೂರೆನ್ಸ್ನಲ್ಲಿ ಕವರ್ ಆಗಲ್ಲ. ಹಾಗಾಗಿ ಇನ್ಶೂರೆನ್ಸ್ ಕಂಪನಿಯವರೊಂದಿಗೆ ಮಾತನಾಡಿ ಈ ಬಗ್ಗೆ ಕ್ರಮ ಕೈಗೊಳ್ಳುವ ಬಗ್ಗೆ ಪ್ರಯತ್ನ ಮಾಡಬೇಕು. ಇದನೆಲ್ಲ ತಿಳಿದುಕೊಳ್ಳಲೆಂದೇ ನಾನು ಬರವೀಕ್ಷಣೆಗೆ ಬಂದಿದ್ದೇನೆ ಎಂದು ಪರಮೇಶ್ವರ್ ತಿಳಿಸಿದರು.
ಅಂತಾರಾಷ್ಟ್ರೀಯ ಹವಾಮಾನ ವರದಿಯ ಪ್ರಕಾರ, ಸೆಪ್ಟೆಂಬರ್ ಒಂದನೇ ವಾರ ಅಥವಾ ಎರಡನೇ ವಾರದಲ್ಲಿ ಮಳೆ ಕಂಪ್ಲೀಟ್ ಆಗಿ ನಿಂತು ಹೋಗುತ್ತದೆ ಎಂಬ ಮಾಹಿತಿ ಇದೆ. ಎಲ್ ನಿನೋದಿಂದಾಗಿ 123 ವರ್ಷಗಳ ಬಳಿಕ ಈ ಪರಿಸ್ಥಿತಿ ಇದೆ. ಮಳೆ ಬರುತ್ತದೆ ಎಂದು ಹೇಳಲು ಆಗವುದಿಲ್ಲ. ಹೀಗಾಗಿ ರೈತರಿಗೆ ಮುಂದೆ ಯಾವ ರೀತಿ ಸಹಾಯ ಮಾಡಬೇಕು ಎಂಬುದನ್ನು ತೀರ್ಮಾನ ಮಾಡುತ್ತೇವೆ ಎಂದು ಪರಮೇಶ್ವರ್ ಭರವಸೆ ನೀಡಿದರು.
ಮೋಡ ಬಿತ್ತನೆಯ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೋಡ ಬಿತ್ತನೆ ಮಾಡಲು ಆದೇಶ ಕೊಟ್ಟಿದ್ದಾರೆ. ಈ ಬಗ್ಗೆ ನಮ್ಮ ಟೆಕ್ನಿಕಲ್ ತಂಡದವರು ತಯಾರಿ ಮಾಡಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಹುಣಸೂರು ತಾಲ್ಲೂಕಿನ ಕಂದಾಯ ಇಲಾಖೆಯ ಕಟ್ಟಡಗಳು ಸೋರುತ್ತಿರುವ ಬಗ್ಗೆ ವರದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಿಸಿಎಂ, ಈ ಬಗ್ಗೆ ಜಿಲ್ಲಾಧಿಕಾರಿಗಳಿಂದ ಮಾಹಿತಿ ಪಡೆದುಕೊಳ್ಳುತ್ತೇನೆ. ಈ ಕುರಿತು ಪ್ರಸ್ತಾವನೆ ಬಂದಿದ್ದರೆ ಅದನ್ನು ಪರಿಶೀಲನೆ ಮಾಡಿ ಮುಂದೆ ನೂತನ ಕಟ್ಟಡವನ್ನು ನಿರ್ಮಿಸಲು ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.
ಈ ವೇಳೆ ಹುಣಸೂರು ಶಾಸಕ ಹರೀಶ್ಗೌಡ, ಕೆ.ಆರ್.ನಗರ ಶಾಸಕ ರವಿಶಂಕರ್, ಮಾಜಿ ಶಾಸಕ ಹೆಚ್.ಪಿ.ಮಂಜುನಾಥ್, ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಹಾಗೂ ತಹಶೀಲ್ದಾರ್ ಮತ್ತು ಕೃಷಿ ಅಧಿಕಾರಿಗಳು ಹಾಜರಿದ್ದರು.
