ಮೈಸೂರು: ಚಿನ್ನತಂಬಿ @ ಸೌಂದರ್ಯರಾಜು ವಿರುದ್ಧ ಮತ್ತೊಂದು ಗಂಭೀರ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ರಾಜಾಜಿನಗರ ಮೂಲದ ಮಹಿಳೆಯೊಬ್ಬರು ನಜರ್ಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಚಿವ ಡಾ. ಯತೀಂದ್ರ ಅವರ ಸೂಚನೆಯ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ದೂರಿನಲ್ಲಿ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿರುವುದು, ಕೊಲೆ ಬೆದರಿಕೆ ಹಾಕಿರುವುದು, ಆಕೆಯ ಚಿನ್ನವನ್ನು ಕರಗಿಸಿ ಅಕ್ರಮವಾಗಿ ವಶಪಡಿಸಿಕೊಂಡಿರುವುದು ಸೇರಿದಂತೆ ಹಲವು ಗಂಭೀರ ಆರೋಪಗಳನ್ನು ಮಾಡಲಾಗಿದೆ. ಮಹಿಳೆ ಹಾಗೂ ಆಕೆಯ ಸಹೋದರನನ್ನು ಕೂಡಿಹಾಕಿ ಚಿತ್ರಹಿಂಸೆ ನೀಡಲಾಗಿದೆ ಎಂದೂ ದೂರಲಾಗಿದೆ.
ರೌಡಿಗಳ ಮೂಲಕ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಅಲ್ಲದೆ ಲೈಂಗಿಕ ಕಿರುಕುಳ ನೀಡಿರುವುದು ಮತ್ತು ಒಂದು ರಾತ್ರಿ ಆರೋಪಿಗಳು ಸೂಚಿಸಿದ ವ್ಯಕ್ತಿಗಳೊಂದಿಗೆ ಇರುವಂತೆ ಒತ್ತಡ ಹೇರಲಾಗಿದೆ ಎಂಬ ಆರೋಪವೂ ಇದೆ.
ನಜರ್ಬಾದ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
