ಮೈಸೂರು: ಮೈಸೂರಿನಲ್ಲಿ ಭಾರತ್ ಜೋಡೋ ಯುವ ಸಂಘ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ಸಿಕ್ಕಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮುಖ್ಯಮಂತ್ರಿಯವರ ಯುವ ಶಕ್ತಿ ರಾಷ್ಟ್ರ ಶಕ್ತಿ ಎಂಬ ಶೀರ್ಷಿಕೆಯಡಿ ಹಮ್ಮಿಕೊಂಡಿರುವ ಭಾರತ್ ಜೋಡೋ ಯುವ ಸಂಘ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಸಿದ್ದಾರ್ಥ ಲೇಔಟ್ನ ಕುರುಬರಹಳ್ಳಿ ಸರ್ಕಲ್ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಚಾಲನೆ ನೀಡಲಾಯಿತು.
ಕಾರ್ಯಕ್ರಮದಲ್ಲಿ ಮೈಸೂರು ಮಹಾನಗರ ಪಾಲಿಕೆ ಆಯುಕ್ತೆ ಎಂ.ಕೆ. ಸವಿತಾ ಅವರು ಮಾತನಾಡಿ, ಇಂದಿನ ಯುವ ಸಮುದಾಯವು ಸ್ವಚ್ಛತೆ, ಪರಿಸರ ಸಂರಕ್ಷಣೆ, ಆರೋಗ್ಯ ಮತ್ತು ಯೋಗಕ್ಷೇಮ, ಸಂಸ್ಕೃತಿ ಮತ್ತು ಸಾಮಾಜಿಕ ಸಾಮರಸ್ಯ, ಕೌಶಲ್ಯಾಭಿವೃದ್ಧಿ ಹಾಗೂ ಯುವ ಸಬಲೀಕರಣ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಬೇಕು ಎಂದು ಕರೆ ನೀಡಿದರು.
ಯುವ ಸಮುದಾಯವು ಸರ್ಕಾರದ ಕಾರ್ಯಕ್ರಮಗಳಲ್ಲಿ ಹೇಗೆ ಭಾಗವಹಿಸಬೇಕು, ಸಂವಿಧಾನದ ಆಶಯಗಳಿಗೆ ಅನುಗುಣವಾಗಿ ಸಮಾಜದಲ್ಲಿ ಹೇಗೆ ಕೆಲಸ ಮಾಡಬೇಕು ಎಂಬುದರ ಕುರಿತು ಅವರು ಮಾಹಿತಿ ನೀಡಿದರು.
ಸಾರ್ವಜನಿಕರಲ್ಲಿ ಬಾಲ್ಯ ವಿವಾಹದ ಬಗ್ಗೆ ಜಾಗೃತಿ ಮೂಡಿಸುವುದು, ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ನಿವಾರಿಸುವುದು, ರಕ್ತದಾನ ಶಿಬಿರಗಳನ್ನು ಹಮ್ಮಿಕೊಳ್ಳುವುದು ಸೇರಿದಂತೆ ಸಮಾಜದ ವಿಕಾಸ ಮತ್ತು ಸೌಹಾರ್ದತೆಗಾಗಿ ಯುವಕರು ತೊಡಗಿಸಿಕೊಳ್ಳುವಂತೆ ಆಯುಕ್ತರು ಸಲಹೆ ನೀಡಿದರು.
ಸರ್ಕಾರದ ಮಾರ್ಗದರ್ಶನದಂತೆ BJYS ಪೋರ್ಟಲ್ ಅಥವಾ ಮೊಬೈಲ್ ಆ್ಯಪ್ ಮೂಲಕ QR ಕೋಡ್ ಸ್ಕ್ಯಾನ್ ಮಾಡಿ 16 ರಿಂದ 35 ವರ್ಷದೊಳಗಿನ ಕನಿಷ್ಠ 100 ಸದಸ್ಯರನ್ನು ಹೊಂದಿರುವ ಯುವ ಸಂಘಗಳನ್ನು ರಚಿಸಬೇಕು ಎಂದು ಆಯುಕ್ತೆ ಸವಿತಾ ತಿಳಿಸಿದರು.
ಮೊಬೈಲ್ ಆ್ಯಪ್ ಮೂಲಕ ಭಾರತ್ ಜೋಡೋ ಯುವ ಸಂಘಕ್ಕೆ ಹೇಗೆ ಸೇರ್ಪಡೆಯಾಗಬೇಕು ಎಂಬುದರ ಕುರಿತು ಯುವಕರಿಗೆ ಅರಿವು ಮೂಡಿಸಿ, ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲೆ ಮಾಯದೇವಿ, ಪ್ರಾಧ್ಯಾಪಕರಾದ ಕುಮಾರ್, ಕೃಷ್ಣಗೌಡ ಮತ್ತು ಕಿರಣ್ ರಾವತ್, ಕಂದಾಯಾಧಿಕಾರಿ ಜಾವದ್, ಕಂದಾಯ ಪರಿಶೀಲಕರಾದ ವರದರಾಜು, ಹನುಮಂತಪ್ಪ, ಪರಮೇಶ್ ಮತ್ತು ಉಮೇಶ್ ಸೇರಿದಂತೆ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
