ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ಕ್ಕೆ ಸಕಲ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು,ದಸರಾದ ಪ್ರಮುಖ ಆಕರ್ಷಣೆ ಗಜಪಯಣ ಆ.26ಕ್ಕೆ ಪ್ರಾರಂಭವಾಗಲಿದೆ
ದಸರಾ ಮಹೋತ್ಸವದ ಸಂಭ್ರಮಕ್ಕೆ ಚಾಲನೆ ನೀಡುವ ಗಜಪಯಣವು ಆಗಸ್ಟ್ 26 ರಂದು ನಡೆಯಲಿದೆ. ಅರಣ್ಯ ಇಲಾಖೆಯಿಂದ ತರಬೇತಿ ಪಡೆದ ಆನೆಗಳು ಈ ದಿನ ಅರಮನೆ ಕಡೆಗೆ ಪಯಣ ಬೆಳೆಸಲಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಗಜಪಯಣದ ಬಳಿಕ ತರಬೇತಿಯನ್ನು ಪೂರ್ಣಗೊಳಿಸಿದ ದಸರಾ ಆನೆಗಳು ಆಗಸ್ಟ್ 28 ರಂದು ಬೆಳಗ್ಗೆ 10 ಗಂಟೆಗೆ ವೈಭವೋಪೇತವಾಗಿ ಮೈಸೂರು ಅರಮನೆಗೆ ಪ್ರವೇಶಿಸಲಿವೆ.
ಅರಮನೆ ಪ್ರವೇಶದ ನಂತರ ಆನೆಗಳಿಗೆ ವಿಶೇಷ ಪೂಜೆ, ಆರೈಕೆ ಹಾಗೂ ದಸರಾ ಮೆರವಣಿಗೆಗೆ ಅಗತ್ಯವಾದ ತರಬೇತಿಯನ್ನು ನೀಡಲಾಗುವುದು.
ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಆಹಾರ ಮೇಳ, ಕವಿಗೋಷ್ಠಿ, ಯೋಗ ದಸರಾ ಸೇರಿದಂತೆ ವಿವಿಧ ಉಪಸಮಿತಿಗಳ ಮೂಲಕ ನಾಡಹಬ್ಬಕ್ಕೆ ಸಿದ್ಧತೆ ನಡೆಸಲಾಗುತ್ತಿದೆ.
ಅರಮನೆ, ನಗರದ ಪ್ರಮುಖ ರಸ್ತೆಗಳು ಹಾಗೂ ಸರ್ಕಾರಿ ಕಟ್ಟಡಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಮೈಸೂರಿಗೆ ರಾಜೋಚಿತ ಮೆರುಗು ನೀಡಲು ಯೋಜಿಸಲಾಗಿದೆ.
ಜಿಲ್ಲಾಡಳಿತ ನಾಡಹಬ್ಬ ದಸರಾ ಸಂಭ್ರಮಕ್ಕೆ ಎಲ್ಲರಿಗೂ ಆತ್ಮೀಯ ಸ್ವಾಗತ ಕೋರಿದೆ.
