ಮೈಸೂರು: ನಗರದ ಬೆಮೆಲ್ ಕಾರ್ಖಾನೆ ಬಳಿ ಚಿರತೆ ಮತ್ತೆ ಪ್ರತ್ಯಕ್ಷವಾಗಿದ್ದು, ಸುತ್ತಮುತ್ತಲಿನ ಜನ ರಾತ್ರಿ ಹೊರಬರಲು ಅಂಜುವಂತಾಗಿದೆ.
ಹಿಂದೆಯೂ ಹಲವು ಬಾರಿ ಇದೇ ಪ್ರದೇಶದಲ್ಲಿ ಕಾಣಿಸಿಕೊಂಡು ಸ್ಥಳೀಯರಲ್ಲಿ ಭಯ ಹುಟ್ಟಿಸಿತ್ತು.ಮತ್ತೆ ಅದೇ ಚಿರತೆ ಬೆಮೆಲ್ ಆವರಣದ ವಾಚ್ ಟವರ್ ಮೇಲೆ ಕುಳಿತಿರುವುದು ಕಂಡುಬಂದಿದೆ.
ಘಟನೆಯ ದೃಶ್ಯವನ್ನು ಯಾರೋ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದು, ಆ ವಿಡಿಯೋ ಮತ್ತು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ವಾಚ್ ಟವರ್ ಮೇಲೆ ಚಿರತೆ ಕುಳಿತಿರುವುದನ್ನು ನೋಡಿದ ಕಾರ್ಖಾನೆಯ ಸಿಬ್ಬಂದಿ ಮತ್ತು ಸುತ್ತಮುತ್ತಲಿನ ನಿವಾಸಿಗಳು ತಕ್ಷಣವೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಬೆಮೆಲ್ ಕಾರ್ಖಾನೆ ಸುತ್ತ ಜನವಸತಿ ಪ್ರದೇಶಗಳಿದ್ದು, ಈ ಹಿಂದೆಯೂ ಚಿರತೆ ಸಂಚಾರದ ಬಗ್ಗೆ ಹಲವು ಬಾರಿ ದೂರುಗಳು ಬಂದಿದ್ದವು. ಮತ್ತೆ ಚಿರತೆ ಕಾಣಿಸಿಕೊಂಡಿರುವುದರಿಂದ ರಾತ್ರಿ ವೇಳೆ ಓಡಾಡಲು ಜನರು ಭಯಪಡುತ್ತಿದ್ದಾರೆ. ಕಾರ್ಖಾನೆಯ ಶಿಫ್ಟ್ ಮುಗಿಸಿ ಮನೆಗೆ ತೆರಳುವ ಸಿಬ್ಬಂದಿ ಎಚ್ಚರದಿಂದ ಓಡಾಡುವಂತೆ ಸೂಚಿಸಲಾಗಿದೆ.
ಮಾಹಿತಿ ಪಡೆದ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು, ಚಿರತೆಯ ಚಲನವಲನದ ಮೇಲೆ ನಿಗಾ ಇಡಲಾಗಿದೆ.ಕಾಣಿಸಿದರೆ ಸೆರೆಹಿಡಿದು ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಚಿರತೆ ಎಲ್ಲಿ ಅಡಗಿದೆ ಎಂಬುದರ ಬಗ್ಗೆ ಶೋಧ ಕಾರ್ಯ ಮುಂದುವರೆದಿದೆ. ಸಾರ್ವಜನಿಕರು ಆತಂಕಗೊಳ್ಳದೆ, ಚಿರತೆ ಕಂಡಲ್ಲಿ ತಕ್ಷಣವೇ ಅರಣ್ಯ ಇಲಾಖೆ ಅಥವಾ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಲಾಗಿದೆ.
