ಮೈಸೂರು: ದೇಶದ ಡಿಜಿಟಲ್ ಆರೋಗ್ಯ ಕ್ಷೇತ್ರದಲ್ಲಿ ನಾಯಕತ್ವ ರೂಪಿಸುವ ನಿಟ್ಟಿನಲ್ಲಿ ಜೆಎಸ್ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ (JSS AHER) ಕೌಶಲ್ಯಾಭಿವೃದ್ಧಿ ವಿಭಾಗವಾದ ‘JSS AHER EDGE’ ಸಂಸ್ಥೆಯು ಭಾರತೀಯ ಆರೋಗ್ಯ ಕ್ಷೇತ್ರದಲ್ಲಿ ಎಐ ಕಾರ್ಯನಿರ್ವಾಹಕ ಕೋರ್ಸ್ನ ಪ್ರಮಾಣಪತ್ರ ವಿತರಣಾ ಸಮಾರಂಭ ಹಮ್ಮಿಕೊಂಡಿತು.
ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳವರ ಸಾನ್ನಿಧ್ಯದಲ್ಲಿ ಜರುಗಿದ ಈ ಸಮಾರಂಭದಲ್ಲಿ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ 150ಕ್ಕೂ ಹೆಚ್ಚು ವೈದ್ಯರು ಮತ್ತು ಆರೋಗ್ಯ ಕ್ಷೇತ್ರದ ವೃತ್ತಿಪರರು ಎಐ ಯೋಧರ ಮೊದಲ ತಂಡವಾಗಿ ಪ್ರಮಾಣಪತ್ರ ಸ್ವೀಕರಿಸಿದರು.
300ಕ್ಕೂ ಹೆಚ್ಚು ನೋಂದಣಿ
ಕೋರ್ಸ್ನ ರೂಪುರೇಷೆ ನೀಡಿದ ಡಾ. ವಿಕ್ರಮ್ ಪಾಟೀಲ್ ಅವರು, ವೆಲ್ಲೂರು, ವಾರಂಗಲ್ ಸೇರಿದಂತೆ ದೇಶದ ಪ್ರಮುಖ ವೈದ್ಯಕೀಯ ಕೇಂದ್ರಗಳಿಂದ ವೈದ್ಯಕೀಯ, ದಂತವೈದ್ಯ, ಆಯುರ್ವೇದ, ವಾಕ್-ಶ್ರವಣ, ನರ್ಸಿಂಗ್, ಫಾರ್ಮಸಿ, ಎಂಜಿನಿಯರಿಂಗ್ ಮತ್ತು ಆಸ್ಪತ್ರೆ ಆಡಳಿತ ಕ್ಷೇತ್ರದ 300ಕ್ಕೂ ಹೆಚ್ಚು ವೃತ್ತಿಪರರು ಈ ಕೋರ್ಸ್ಗೆ ನೋಂದಾಯಿಸಿಕೊಂಡಿದ್ದರು ಎಂದು ತಿಳಿಸಿದರು.
ಕಾರ್ಯನಿರತ ವೈದ್ಯರ ಅನುಕೂಲಕ್ಕಾಗಿ ಎಲ್ಲಿದ್ದರೂ, ಯಾವಾಗ ಬೇಕಾದರೂ ಕಲಿಯುವ ಆನ್ಲೈನ್ ಮಾದರಿಯಲ್ಲಿ ಕೋರ್ಸ್ ವಿನ್ಯಾಸಗೊಳಿಸಲಾಗಿತ್ತು. ಸಾಗರದ ಡಾ. ಅರುಣ್ ಕುಮಾರ್ ಅವರು, ಈ ನಮ್ಯ ಕಲಿಕಾ ಮಾದರಿಯು ಗ್ರಾಮೀಣ ಪ್ರದೇಶದ ತಜ್ಞ ವೈದ್ಯರಿಗೂ ಅತ್ಯಂತ ಉಪಯುಕ್ತವಾಗಿದೆ ಎಂದು ಹೇಳಿದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಸಚಿವ ಪಿ.ಜಿ.ಆರ್. ಸಿಂಧ್ಯಾ ಮಾತನಾಡಿ, “ಆಧುನಿಕ ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ ಅನಿವಾರ್ಯವಾಗಿದೆ. ಭಾರತೀಯ ವೈದ್ಯಕೀಯ ವ್ಯವಸ್ಥೆಗೆ ಸೂಕ್ತವಾದ ಇಂತಹ ಕೋರ್ಸ್ ಆರಂಭಿಸಿ, ಗೂಗಲ್ ಮತ್ತು ಎಲ್&ಟಿ ಸಹಯೋಗದಲ್ಲಿ ವೈದ್ಯರಿಗೆ ತರಬೇತಿ ನೀಡಿದ ಜೆಎಸ್ಎಸ್ ಕಾರ್ಯ ಶ್ಲಾಘನೀಯ ಎಂದು ಹೇಳಿದರು.
ಆಶೀರ್ವಚನ ನೀಡಿದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು, “ಕಲಿಕೆಗೆ ಕೊನೆಯಿಲ್ಲ. ವೈದ್ಯಕೀಯ ಜ್ಞಾನ ಮತ್ತು ತಂತ್ರಜ್ಞಾನ ಬದಲಾಗುತ್ತಿದ್ದು, ಹೊಸ ಕೌಶಲ್ಯಗಳನ್ನು ಮೈಗೂಡಿಸಿಕೊಳ್ಳುವುದು ಅಗತ್ಯ. ಎಐ ಆಸ್ಪತ್ರೆ ಕೆಲಸ ಸುಲಭಗೊಳಿಸಿದರೂ ಅಂತಿಮ ವೈದ್ಯಕೀಯ ನಿರ್ಧಾರ ಮತ್ತು ರೋಗಿಯ ಕಾಳಜಿ ವೈದ್ಯರ ಕೈಯಲ್ಲೇ ಇರಬೇಕು ಎಂದು ತಿಳಿಸಿದರು.
ಜೆಎಸ್ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ. ಸಿ.ಜಿ. ಬೆಟಸೂರಮಠ, JSS AHER ಕುಲಪತಿ ಡಾ. ಹೆಚ್. ಬಸವನಗೌಡಪ್ಪ, ಪ್ರೊ-ಚಾನ್ಸಲರ್ ಡಾ. ಬಿ. ಸುರೇಶ್ ಉಪಸ್ಥಿತರಿದ್ದರು. ಡಾ. ಅಕ್ಷಯ್ ಹೆಚ್.ಎಂ. ವಂದಿಸಿದರು.
