
ಮೈಸೂರು: ಮೇಲ್ ತಳಕು ಒಳಗೆ ಹುಳುಕು ಅನ್ನೋ ಗಾದೆ ಮೈಸೂರು ನಗರಕ್ಕೆ ಹೇಳಿ ಮಾಡಿಸಿದಂತಿದೆ.
ಸ್ವಚ್ಛನಗರಿ ಪಟ್ಟ ಮತ್ತೆ ಪಡೆಯಲು ಮೈಸೂರು ಮಹಾನಗರ ಪಾಲಿಕೆ ಅಧಿಕಾರಿಗಳು ಏನೇನೊ ಪ್ಲ್ಯಾನ್ ಮಾಡ್ತಾಲೆ ಇದಾರೆ.ಅದೇನೊ ಸರೀನೆ.
ಆದರೆ ನಗರದ ಪ್ರಮುಖ ಭಾಗಗಳನ್ನ ಸ್ವಚ್ಚ ಮಾಡಿ ಫೋಟೊ ಪೋಸ್ ಕೊಟ್ಟರೆ ಆಗೋದಿಲ್ಲ.ಬಡಾವಣೆಗಳ ಕಡೇನೂ ಗಮನ ಹರಿಸುವ ಅತ್ಯಗತ್ಯವಿದೆ.
ಇತ್ತೀಚೆಗೆ ನಗರ ಪಾಲಿಕೆ ವತಿಯಿಂದ ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣ ಅಭಿಯಾನ ಹಮ್ಮಿಕೊಂಡು ಮನೆ,ಮನೆಗೆ ಬಂದು ಸ್ವಚ್ಛತೆ ಪಾಠ ಮಾಡಿದ್ದಾಯ್ತು.ಅದು ಸ್ವಾಗತಾರ್ಹ ಕೂಡಾ.
ಮತ್ತೆ ಒಂದೆರಡು ದಿನ ಬಿಟ್ಟು ಬಡಾವಣೆಗಳಲ್ಲಿನ ಉದ್ಯಾನವನಗಳ ಕಾಂಪೌಂಡ್ ಗಳಿಗೆ ಸುಣ್ಣ,ಬಣ್ಣ ಮಾಡಿದ್ದೂ ಆಯ್ತು.ಅದೂ ಸಣ್ಣ ಮಳೆ ಬೀಳುವಾಗಲೇ ಬಣ್ಣ ಬಳಿದರು.ಇದು ಎಷ್ಟು ದಿನ ಇರುತ್ತೊ ನಗರಪಾಲಿಕೆನೋರೇ ಹೇಳಬೇಕು.
ಪಾರ್ಕ್ ಗಳ ಸುತ್ತ ಬಣ್ಣ ಬಳಿದರೆ ಸಾಕೆ? ಒಳಗಿನ ಕಸದ ರಾಡೀನೆಲ್ಲ ತೆಗೆಸೋಕೆ ಹೋಗಿಲ್ಲ ಯಾಕೆ ಎಂಬುದು ಗೊತ್ತಿಲ್ಲ.
ನಗರ ಪಾಲಿಕೆಯ ಅಧಿಕಾರಿಗಳು ಸ್ಥಳೀಯ ಶಾಸಕರು ಸ್ವಚ್ಛತೆ ಕಡೆ ಗಮನ ಹರಿಸಿದರೆ ಪಾರ್ಕ್ ಗಳಲ್ಲಿ ಏನೇನು ಆಗ್ತಾ ಇದೆ ಅನ್ನೋದು ಗೊತ್ತಾಗುತ್ತೆ.
ಮೈಸೂರಿನ ಸಿದ್ಧಾರ್ಥ ಬಡಾವಣೆಯ ಸ್ಕೇಟಿಂಗ್ ಪಾರ್ಕ್ ಇದಕ್ಕೆ ಉದಾಹರಣೆ.ಖಂಡಿತಾ ಈ ಪಾರ್ಕ್ ಅಂದರೆ ಸ್ಕೇಟಿಂಗ್ ರಿಂಕ್ ಗೆ ಸಂಬಂಧಪಟ್ಟ ಅಧಿಕಾರಿಗಳು ಶಾಸಕರು ಬರಬೇಕು,ಬಂದು ಈ ಪಾರ್ಕ್ ನ ಅವ್ಯವಸ್ಥೆ ನೋಡಬೇಕು.

ಈ ಸ್ಕೇಟಿಂಗ್ ಪಾರ್ಕ್ ಗೆ ಹೊಂದಿಕೊಂಡಂತೆ ಲಲಿತಮಹಲ್ ರಸ್ತೆ ಸರ್ವಿಸ್ ರೋಡ್ ನಲ್ಲೇ ಫುಡ್ ಸ್ಟ್ರೀಟ್ ಇದೆ.ಇಲ್ಲಿ ತಿಂಡಿ ತಿನ್ನಲು ಬರುವ ಮಂದಿ ತ್ಯಾಜ್ಯಾನೆಲ್ಲಾ ಪಾರ್ಕ್ ಒಳಗೆ ಎಸೆದು ಹೋಗ್ತಾರೆ.ಇನ್ನಾ ರಾತ್ರಿ ವೇಳೆ ಯಾರೊ ಪುಂಡು ಹುಡಗರೊ ಅಥವಾ ಮತ್ಯಾರೊ ಕಡಿದು ಬಾಟಲಿಗಳನ್ನ ಅಲ್ಲೇ ಬಿಸಾಡಿರುತ್ತಾರೆ.
ಈ ಸ್ಕೇಟಿಂಗ್ ರಿಂಕ್ ಈವಾಗ ಒಂತರಾ ಡಂಪಿಂಗ್ ಯಾರ್ಡ್ ಆಗಿಬಿಟ್ಟಿದೆ.ಇಲ್ಲಿ ಬೆಳಿಗ್ಗೆ ಸಂಜೆ ಮಹಿಳೆಯರು, ಹಿರಿಯ ನಾಗರೀಕರು ವಾಕಿಂಗ್ ಮಾಡಲು ಹೋದರೆ ದಾರೀನೆ ಇಲ್ಲದಂತೆ ಮಾಡಿದ್ದಾರೆ. ಬರೀ ಕಲ್ಲುಗಳು.ಜತೆಗೆ ಅಲ್ಲಲ್ಲೇ ಬಿಲ್ಡಿಂಗ್ ತ್ಯಾಜ್ಯಾನೂ ಸುರಿದಿದ್ದು ನೋಡಲು ಆಗುವುದಿಲ್ಲ.
ಗಲೀಜು ಬಟ್ಟೆ ತುಂಡು ಗಳು,ಪ್ಲಾಸ್ಟಿಕ್ ಕವರ್ ಗಳು ಪ್ಲಾಸ್ಟಿಕ್ ಪೇಪರ್ ಗಳು ಅಲ್ಲಲ್ಲೇ ಬಿದ್ದಿದೆ. ತಿಂಡಿ,ಕಾಫಿ ಸೇವಿಸಿದವರು ಪಾರ್ಕ್ ಮೂಲೆಯಲ್ಲಿ ನೀರು ಶೇಖರಿಸಲೆಂದು ಮಾಡಿರುವ ತೊಟ್ಟಿಯಲ್ಲಿ ಹಾಕಿದ್ದು ಇದೂ ಕೂಡಾ ಯಾರ್ಡ್ ಆಗಿಬಿಟ್ಟಿದೆ.
ಅಲ್ಲಲ್ಲೇ ಹಸು ಕರುಗಳೂ ಇರುತ್ತವೆ.ಈ ಪಾರ್ಕ್ ಹೀಗಿರುವಾಗ ಜನ ಎಲ್ಲಿ ವಾಕಿಂಗ್ ಮಾಡಬೇಕು?ಎಲ್ಲಾ ಕಡೆ ಕೆಟ್ಟ ವಾಸನೆ ಇರುತ್ತೆ ಅಂತಾ ಬೇಸರ ಪಡುತ್ತಾರೆ.
ಇಷ್ಟೆಲ್ಲಾ ಸಾಲದು ಎಂಬಂತೆ ಕೆಲ ಜನ ಪಾರ್ಕ್ ಒಳಗೆ ಮರಗಳ ಬಳಿ,ಹೊರಗೆ ಕಾಂಪೌಂಡ್ ಬಳಿ ಮೂತ್ರ ವಿಸರ್ಜಿಸುತ್ತಾರೆ.
ಮಳೆ ಬಂದಾಗ ನೀರು ಸೇರಿ ಗಬ್ಬು ವಾಸನೆ ಬರುವಂತೆ ಆಗಿದೆ.
ಇದರಿಂದ ಪರಿಸರ ಕಲುಷಿತವಾಗಿದೆ ಸ್ಕೇಟಿಂಗ್ ಮಾಡುವ ಮಕ್ಕಳಿಗೂ ಇದರಿಂದ ತೊಂದರೆ.
ಫುಡ್ ಸ್ಟ್ರೀಟ್ ನಿಂದ ಇಲಿ,ಹೆಗ್ಗಣಗಳು ಹೆಚ್ಚಾಗಿದೆ ಸುತ್ತಮುತ್ತಲ ಮನೆಗಳಿಗೂ ಇವುಗಳಿಂದ ತೊಂದರೆಯಾಗುತ್ತಿದೆ.ಚರಂಡಿ ಪೈಪ್ ಗಳನ್ನ ಕಚ್ಚಿ ಮಣ್ಣು ಕೊರೆಯುವುದರಿಂದ ಮನೆಗಳಲ್ಲಿ ಕೊಳಕು ನೀರು ಹೋಗುವ ಪೈಪ್ ಗಳು ಕಟ್ಟಿಕೊಂಡು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ಬೇಸರ ಪಡುತ್ತಾರೆ.
ಕೇವಲ ಮಹಾ ನಗರ ಪಾಲಿಕೆ ಮತ್ತು ಫುಡ್ ಸ್ಟ್ರೀಟ್ ಅಂಗಡಿಗಳವರೇ ಎಲ್ಲಾ ಕ್ಲೀನ್ ಮಾಡಲಿ ಎನ್ನುವುದು ಸರಯಲ್ಲ.ಸಾರ್ವಜನಿಕರೂ ಕೂಡಾ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಿದೆ.
ತಾವು ತಿನ್ನುವ ಪೇಪರ್ ಪ್ಲೇಟ್ ಮತ್ತು ಕಪ್ ಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಅಲ್ಲೇ ಇರುವ ಡಸ್ಟ್ ಬಿನ್ ಗೆ ಅಥವಾ ಕಸದ ಬುಟ್ಟಿಗೆ ಹಾಕುವ ಮೂಲಕ ಇತರರಿಗೂ ತಿಳುವಳಿಕೆ ಮೂಡಿಸುವುದು ಒಳಿತಲ್ಲವೆ
