ಮುಂಬೈ: ಶಿರೋಮಣಿ ಅಕಾಲಿದಳದ ಮುಖ್ಯಸ್ಥ ಹಾಗೂ ಪಂಜಾಬ್ ಮಾಜಿ ಉಪ ಮುಖ್ಯಮಂತ್ರಿ ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ಮಾರಣಾಂತಿಕ ದಾಳಿ ನಡೆಸಲಾಗಿದೆ.
ಮಹಾರಾಷ್ಟ್ರದ ನಾಂದೇಡ್ ಗುರುದ್ವಾರದಲ್ಲಿ ನಿಹಾಂಗ್ ಸಿಖ್ಖರೊಬ್ಬರು ಕತ್ತಿ ಯಿಂದ ಭೀಕರ ದಾಳಿ ನಡೆಸಿದ್ದಾರೆ. ಗಾಯಗೊಂಡ ಬಾದಲ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಾರಾಷ್ಟ್ರದ ನಾಂದೇಡ್ನಲ್ಲಿರುವ ಗುರುದ್ವಾರ ಮಾತಾ ಸಾಹಿಬ್ ದೇವಾನ್ ಜಿ ಮುಗತ್ ಬಳಿ ಇಂದು ಮಧ್ಯಾಹ್ನ ಸುಮಾರು 1:45 ಕ್ಕೆ ಈ ಘಟನೆ ನಡೆದಿದೆ.
ಸುಖ್ಬೀರ್ ಸಿಂಗ್ ಬಾದಲ್ ಅವರು ತಮ್ಮ ಪತ್ನಿ ಹಾಗೂ ಸಂಸದೆ ಹರಸಿಮ್ರತ್ ಕೌರ್ ಬಾದಲ್ ಅವರೊಂದಿಗೆ ಗುರುದ್ವಾರಕ್ಕೆ ಭೇಟಿ ನೀಡಿದ್ದರು.
ನಿಹಾಂಗ್ ಸಿಖ್ಖರ ಉಡುಪಿನಲ್ಲಿದ್ದ ಜಸ್ಪಾಲ್ ಸಿಂಗ್ (62 ವರ್ಷ) ಎಂಬ ವ್ಯಕ್ತಿ ಹಠಾತ್ತನೆ ಬಾದಲ್ ಅವರ ಹೊಟ್ಟೆಯ ಭಾಗಕ್ಕೆ ಕತ್ತಿಯಿಂದ ಇರಿಯಲು ಯತ್ನಿಸಿದ್ದಾನೆ.
ಬಾದಲ್ ಅವರಿಗೆ ಝಡ್ ಪ್ಲಸ್ ಭದ್ರತೆ ಇರುವುದರಿಂದ, ದಾಳಿಯಾಗುತ್ತಿದ್ದಂತೆ ಅವರ ಭದ್ರತಾ ಮುಖ್ಯಸ್ಥ ಇನ್ಸ್ಪೆಕ್ಟರ್ ಸಂತೋಷ್ ಕೆಂಗ್ರೆ ಮತ್ತು ಸಿಬ್ಬಂದಿ ಮಧ್ಯಪ್ರವೇಶಿಸಿ ದಾಳಿಕೋರನನ್ನು ತಡೆದಿದ್ದಾರೆ.
ಈ ವೇಳೆ ಬಾದಲ್ ಅವರ ಬಲಗೈ ಮತ್ತು ಭುಜಕ್ಕೆ ಗಾಯಗಳಾಗಿದ್ದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈ ಘಟನೆಯಲ್ಲಿ ಅವರ ಭದ್ರತಾ ಸಿಬ್ಬಂದಿ ಮತ್ತು ಚಾಲಕನಿಗೂ ತೀವ್ರ ಗಾಯಗಳಾಗಿವೆ.
ದಾಳಿ ನಡೆಸಿದ ತಕ್ಷಣವೇ ಆರೋಪಿ ಜಸ್ಪಾಲ್ ಸಿಂಗ್ನನ್ನು ಪೊಲೀಸರು ಬಂಧಿಸಿದ್ದು, ತನಿಖೆ ನಡೆಸುತ್ತಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಈ ದಾಳಿಯ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದ್ದಾರೆ.
ಸುಖ್ಬೀರ್ ಸಿಂಗ್ ಬಾದಲ್ ಅವರ ಮೇಲೆ ನಡೆದಿರುವ ಎರಡನೇ ಭೀಕರ ದಾಳಿ ಇದಾಗಿದೆ. ಇದಕ್ಕೂ ಮುನ್ನ ಡಿಸೆಂಬರ್ 2024 ರಲ್ಲಿ, ಅಮೃತಸರದ ಸುವರ್ಣ ಮಂದಿರದ ದ್ವಾರದ ಬಳಿ ಅವರು ಧಾರ್ಮಿಕ ಸೇವೆ ಸಲ್ಲಿಸುತ್ತಿದ್ದಾಗ, ಮಾಜಿ ಉಗ್ರ ನರೈನ್ ಸಿಂಗ್ ಚೌರಾ ಎಂಬಾತ ಅತ್ಯಂತ ಹತ್ತಿರದಿಂದ ಗುಂಡು ಹಾರಿಸಿ ಹತ್ಯೆ ಮಾಡಲು ಯತ್ನಿಸಿದ್ದ. ಆಗಲೂ ಭದ್ರತಾ ಸಿಬ್ಬಂದಿಯ ಜಾಗರೂಕತೆಯಿಂದಾಗಿ ಬಾದಲ್ ಅವರು ಪ್ರಾಣಾಪಾಯದಿಂದ ಪಾರಾಗಿದ್ದನ್ನು ಸ್ಮರಿಸಬಹುದು.
