ಮಂಡ್ಯ: ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಬಿದರ ಹೊಸಹಳ್ಳಿಯು ಶ್ರೀ ಅಭಯ ನಾಗಸುಬ್ರಹ್ಮಣ್ಯ ಸ್ವಾಮಿಯ ಪುಣ್ಯಕ್ಷೇತ್ರವಾಗಿದೆ.
ಸುಮಾರು ಎರಡು ದಶಕಗಳಿಂದ ಶ್ರೀ ಅಭಯ ನಾಗಸುಬ್ರಹ್ಮಣ್ಯ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆಯುತ್ತಾ ಬಂದಿದೆ.
ಈಗ ಆಷಾಢ ಮಾಸದಲ್ಲೂ ವಿಶೇಷ ಪೂಜೆ ನೆರವೇರಿದೆ. ಇಂದು ಭೀಮನ ಅಮಾವಾಸ್ಯೆ.ಇದು ನಾಗರ ಅಮಾವಾಸ್ಯೆ ಎಂದೇ ಪ್ರತೀತಿ. ಹಾಗಾಗಿ ಇಲ್ಲಿನ ನಾಗಸುಬ್ರಹ್ಮಣ್ಯ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ, ಸಚೇಲ ಸ್ನಾನ ನೆರವೇರಿಸಲಾಯಿತು.ಜತೆಗೆ ಅನ್ನಸಂತರ್ಪಣೆ ಕೂಡಾ ಇದ್ದು,ಭಕ್ತರು ಪ್ರಸಾದ ಸ್ವೀಕರಿಸಿದರು.
ನೂರಾರು ಭಕ್ತರು ಇಲ್ಲಿಗೆ ಆಗಮಿಸಿ
ನಾಗಸುಬ್ರಮಣ್ಯ ಸ್ವಾಮಿಯ ದರ್ಶನ ಪಡೆದು ಪುನೀತರಾದರು.
ವಿಶೇಷವೆಂದರೆ ಬಿದರ ಹೊಸಹಳ್ಳಿಯ ಮಹೇಶ್ ಎಂಬವರ ಮನೆಯಲ್ಲಿ ಸುಮಾರು 2006 ರಲ್ಲಿ ಒಂದು ಹುತ್ತ ಮೂಡಿತ್ತು, ಅದನ್ನು ಮನೆಯವರು ತೆಗೆಸುತ್ತಲೇ ಬಂದರೂ, ಅದು ಮತ್ತೆ ಮತ್ತೆ ಬೆಳೆಯುತ್ತಲೇ ಹೋಗಿದೆ.
ಅಂದಿನಿಂದಲೂ ಹುತ್ತ ಬೆಳೆಯುತ್ತಲೇ ಹೋದುದನ್ನು ಕಂಡು ಮನೆಯ ಮಾಲೀಕರಾದ ಮಹೇಶ್ ಅವರು ಅದನ್ನು ದೇವಸ್ಥಾನವಾಗಿಯೇ ಪರಿವರ್ತಿಸಿ ಬಿಟ್ಟಿದ್ದಾರೆ ಈಗ ಅವರ ಮನೆ ಒಂದು ದೇವಾಲಯವಾಗಿ ಪರಿವರ್ತನೆಯಾಗಿದೆ.ಪ್ರತಿದಿನ ನೂರಾರು ಮಂದಿ ಆಗಮಿಸಿ ಶ್ರೀ ನಾಗಸುಬ್ರಮಣ್ಯನ ದರ್ಶನ ಪಡೆದು ಹೋಗುತ್ತಾರೆ.
ನಮ್ಮ ರಾಜ್ಯವಲ್ಲದೆ ಬೇರೆ ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಭಕ್ತರು ಬರುತ್ತಾರೆ. ಶ್ರೀ ಅಭಯ ನಾಗಸುಬ್ರಹ್ಮಣ್ಯ ಸ್ವಾಮಿ ಹೆಸರೇ ಹೇಳುವಂತೆ ಸುಬ್ರಹ್ಮಣ್ಯ ಸ್ವಾಮಿ ಭಕ್ತರಿಗೆ ಅಭಯ ನೀಡುತ್ತಾನೆ.
ಇಲ್ಲಿ ಹರಕೆ ಕಟ್ಟಿಕೊಂಡು ಹೋದರೆ ಸಮಸ್ಯೆಗಳು ಪರಿಹಾರವಾಗುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ಚರ್ಮ ಕಾಯಿಲೆಯವರು ಹೆಚ್ಚಿಗೆ ಬಂದು ಇಲ್ಲಿ ಪೂಜೆ ಮಾಡಿಸಿಕೊಂಡು ಹೋಗುತ್ತಾರೆ.
ಜೊತೆಗೆ ದೃಷ್ಟಿ ತಡೆ ನಿವಾರಣೆ,ಕಾಯಿಲೆಗಳು, ಮತ್ತು ಯಾವುದೇ ಸಮಸ್ಯೆಗಳಿದ್ದರೂ ಇಲ್ಲಿ ಬಂದು ಪೂಜಿಸಿದರೆ ಸುಬ್ರಮಣ್ಯ ಸ್ವಾಮಿ ಅಭಯ ನೀಡಿ ಕಳಿಸುತ್ತಾನೆ ಎಂದು ಭಕ್ತರು ಹೇಳುತ್ತಾರೆ.
ಅದರಂತೆ ಸಮಸ್ಯೆ ಪರಿಹಾರವಾದ ನಂತರ ಅಥವಾ ಕಾಯಿಲೆ ವಾಸಿಯಾದ ನಂತರ ಭಕ್ತರು ಹರಿಸಿಕೊಂಡಂತೆ ಇಲ್ಲಿ ನಾಗರ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುವುದು ವಾಡಿಕೆಯಾಗಿ ಬಂದಿದೆ.ಹಾಗಾಗಿ ಇಲ್ಲಿ ನೂರಾರು ನಾಗರ ಮೂರ್ತಿ ಗಳು ಪ್ರತಿಷ್ಟಾಪನೆಯಾಗಿವೆ.
ಅದರಂತೆ ಹುಣಸೂರು ತಾಲೂಕು,ಹೊನ್ನಿಕುಪ್ಪೆ ಗ್ರಾಮದ ಚೆಲುವರಾಜು ಎಂಬವರು ತಮ್ಮ ಸಮಸ್ಯೆಯನ್ನು ಹೇಳಿಕೊಂಡು ಅದು ಪರಿಹಾರವಾದರೆ ವಿಗ್ರಹವನ್ನು ಮಾಡಿಸಿಕೊಡುವುದಾಗಿ ಹರಕೆ ಹೊತ್ತಿದ್ದರಂತೆ.
ಈಗ ಅವರ ಕಷ್ಟ ಪರಿಹಾರವಾಗಿದ್ದು,ಅವರು ಇಂದು ಶ್ರೀ ಅಭಯ ನಾಗಸುಬ್ರಹ್ಮಣ್ಯ ಸ್ವಾಮಿಗೆ ನಾಗರಕಲ್ಲು ಮೂರ್ತಿಯನ್ನು ನೀಡಿ ಹರಕೆ ತೀರಿಸಿ ಹೋಗಿದ್ದಾರೆ.
ಈ ಕುರಿತು ಅವರು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.
ಇದೇ ಆ. 16-17ರಂದು ನಡೆಯಲಿರುವ ನಾಗರಪಂಚಮಿ ದಿನಗಳಲ್ಲೂ ಶ್ರೀ ಅಭಯ ನಾಗಸುಬ್ರಹ್ಮಣ್ಯ ಸ್ವಾಮಿ ಪುಣ್ಯಕ್ಷೇತ್ರದಲ್ಲಿ ವಿಶೇಷ ಪೂಜೆಗಳು ನಡೆಯಲಿವೆ, ಭಕ್ತರು ಎಂದಿನಂತೆ ಈ ಸೇವೆಗಳ ಅನುಕೂಲಗಳನ್ನು ಪಡೆದುಕೊಳ್ಳಬೇಕೆಂದು ಮಹೇಶ್ ಅವರು ಕೋರಿದ್ದಾರೆ.
