ಕೊಳ್ಳೇಗಾಲ: ಉಪ್ಪಾರ ಸಮಾಜದ ಮಕ್ಕಳ ಪೋಷಕರು ಗುಣಮಟ್ಟದ ಶಿಕ್ಷಣಕ್ಕೆ ಒತ್ತು ಕೊಡಬೇಕೆಂದು ಸಚಿವ ಸಿ.ಪುಟ್ಟರಂಗಶೆಟ್ಟಿ ಅವರು ಕರೆ ನೀಡಿದರು.
ಪಟ್ಟಣದ ಗುರುಭವನದಲ್ಲಿ ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕು ಉಪ್ಪಾರ ಸರ್ಕಾರಿ ನೌಕರರ ಸಂಘದ ವತಿಯಿಂದ ಆಯೋಜಿಸಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈಗಾಗಲೇ ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಸಮಾಜದ ಮಕ್ಕಳ ಶಿಕ್ಷಣಕ್ಕೆ ಒತ್ತು ನೀಡುವ ಕೆಲಸ ಮಾಡುತ್ತಾ ಬಂದಿದ್ದೇವೆ. ಭಗಿರಥ ಮಹರ್ಷಿಯನ್ನು ನಾವು ನೆನೆಸಿಕೊಳ್ಳುತ್ತೇವೆ ಏಕೆಂದರೆ ಅವರು ತಮ್ಮ ಛಲವನ್ನು ಬಿಡದೆ ಯಾವ ರೀತಿ ಕೆಲಸ ಸಾಧಿಸಿದರು ಆ ರೀತಿ ಸಣ್ಣತನದಲ್ಲಿಯೇ ಸಮೂದಾಯದ ವಿದ್ಯಾರ್ಥಿಗಳು ಒಂದು ಗುರಿಯಿಟ್ಟು ಶಿಕ್ಷಣವನ್ನು ನಡೆಯಬೇಕು ನಾವು ಇದೇ ರೀತಿ ಆಗಬೇಕೆಂದು ಅಂದುಕೊಂಡು ಓದಬೇಕು ಹಾಗಾದರೆ ಮಾತ್ರ ಗುರಿಮುಟ್ಟಲು ಸಾಧ್ಯ, ಏನೋ ಕಾಟಚಾರಕ್ಕೆ ಓದಿ ಎದ್ದು ಹೋಗುವುದಲ್ಲ ಎಂದು ತಿಳಿಹೇಳಿದರು.
ಈ ಕಾಲದಲ್ಲಿ ಎಲ್ಲಾ ಸೌಲಭ್ಯವು ಇದೆ. ಸಮಾಜದ ನಮ್ಮ ನಾಯಕರುಗಳು ಹಾಗೂ ಧಾನಿಗಳು ಸಹಾಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಸರ್ಕಾರವು ಇಂದು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿದೆ ಕಾಲಕಾಲಕ್ಕೆ ತಕ್ಕಹಾಗೆ ಗುಣಾತ್ಮಕ ಶಿಕ್ಷಣವನ್ನು ಕೊಡಬೇಕೆಂದು ಸರ್ಕಾರ ಶ್ರಮಿಸುತ್ತಿದೆ. ಹಾಗಾಗಿ ಇಂದು ಯಾರು ಸಹ ನಮ್ಮ ಮಕ್ಕಳಿಗೆ ಊಟ ಇಲ್ಲ, ಬಟ್ಟೆಇಲ್ಲ ಓದಿಸಲು ಹಣವಿಲ್ಲ ಎಂದು ಹೇಳಲು ಬರುವುದಿಲ್ಲ ಎಂದು ಹೇಳಿದರು.
ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದು ನೀಟ್, ಸಿಇಟಿಯಂತಹ ಪರೀಕ್ಷೆಗಳನ್ನು ಬರೆದು ಇಂಜಿನಿಯರ್ ಹಾಗೂ ವೈದ್ಯಕೀಯ ಶಿಕ್ಷಣ ಪಡೆಯುವ ಮೂಲಕ ಜೀವನ ರೂಪಿಸಿ ಕೊಳ್ಳಿ. ಪಿಯುಸಿ ಶಿಕ್ಷಣ ತಿರುವು ಆದ್ದರಿಂದ ಈ ಹಂತದಲ್ಲಿ ಮನಸಿಟ್ಟು ಓದಿ, ಓದಿ ಚೆನ್ನಾಗಿ ಒಳ್ಳೆಯ ಹೆಸರು ಮಾಡಿ ತಂದೆ ತಾಯಿಗಳನ್ನು ಮರೆಯಬಾರದು, ಗುರು ಹಿರಿಯರನ್ನು ಮರೆಯಬಾರದು, ಸಮಾಜವನ್ನು ಮರೆಯಬಾರದು ಎಂದು ಕಿವಿ ಮಾತು ಹೇಳಿದರು.
ನಾನು ಸಮಾಜದಲ್ಲಿ ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದರೆ ನಮ್ಮ ತಂದೆ ತಾಯಿಗಳನ್ನು ಹಾಗೂ ಗುರು ಹಿರಿಯನ್ನು ದೇವರಂತೆ ಆತ್ಮದಲ್ಲಿ ಇಟ್ಟು ಪೂಜೆ ಮಾಡುತ್ತಿದ್ದೇನೆ. ಜೊತೆಗೆ ಸಮಾಜದ ಹೆಸರಿನಲ್ಲಿ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ ಎಂದು ಹೇಳಿದರು.
ಪುಟ್ಟರಂಗಶೆಟ್ಟಿ ಎಂದ ಮಾತ್ರಕ್ಕೆ ಪಕ್ಷಗಳು ಟಿಕೆಟನ್ನು ಕೊಡುವುದಕ್ಕೆ ಹೋಗುವುದಿಲ್ಲ ಕರ್ನಾಟಕದಲ್ಲಿ ಈ ಸಮಾಜದ ಎಷ್ಟು ಜನರಿದ್ದಾರೆ. ಅದರಿಂದಾಗಿ ಈ ಸಮಾಜಕ್ಕೆ ಒಂದು ಟಿಕೆಟ್ ಅನ್ನು ಕೊಡಬೇಕು ಆ ಮೂಲಕ ಸಮಾಜಕ್ಕೆ ಸಾಮಾಜಿಕ ನ್ಯಾಯ ನೀಡಬೇಕು ಎಂದು ನನಗೆ ಅವಕಾಶ ನೀಡಿದ್ದಾರೆ ಇದರಿಂದಾಗಿ ನಾನು ಎರಡು ಬಾರಿ ಮಂತ್ರಿಯಾಗಿದ್ದೇನೆ ಎಂದು ತಿಳಿಸಿದರು.
ನಮ್ಮ ಹಿರಿಯ ನಾಯಕರಾದ ಸಿದ್ದರಾಮಯ್ಯರವರು ಹಾಗೂ ಮಲ್ಲಿಕಾರ್ಜುನ ಖರ್ಗೆ ಸಾಹೇಬರು ನನಗೆ ಸಹಾಯ ಮಾಡಿದ್ದರಿಂದ ನಾನು ಈ ಮಟ್ಟಕ್ಕೆ ಬಂದಿದ್ದೇನೆ. ನಾನು 2008 ರಲ್ಲಿ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಿದಾಗ ನನ್ನ ಬಳಿ ಚುನಾವಣಾ ಶುಲ್ಕ ಭರಿಸಲು ಹಣ ಇರಲಿಲ್ಲ. ಆದ್ದರಿಂದ ನಿಮ್ಮಲ್ಲಿ ಕೂಡಾ ಯಾರು ಬೇಕಾದರೂ ಏನನ್ನಾದರೂ ಸಾಧಿಸಬಹುದು ನಾನು ನಿಮ್ಮಂತೆ ಆಗಲು ಆಗುವುದಿಲ್ಲ ಆದರೆ ನೀವು ನನ್ನಂತೆ ಆಗಬಹುದು. ನೀವು ಮನಸ್ಸು ಮಾಡಿದರೆ ಎಂಎಲ್ಎ, ಮಂತ್ರಿ, ಆಗಬಹುದು ಐಎಎಸ್ ಅಧಿಕಾರಿಗಳು ಆಗಬಹುದು ಆದರೆ ನಾವು ಆ ಕಾಲಘಟ್ಟವನ್ನು ಮೀರಿ ಹೋಗಿದ್ದೇವೆ. ಆದ್ದರಿಂದ ನೀವು ಚೆನ್ನಾಗಿ ಓದಿ ನಿಮ್ಮ ತಂದೆ ತಾಯಿಗಳಿಗೆ ಹಾಗೂ ಸಮಾಜಕ್ಕೆ ಗೌರವ ತರುವ ಕೆಲಸವನ್ನು ಮಾಡಿ ಎಂದು ಸಮುದಾಯದ ವಿದ್ಯಾರ್ಥಿಗಳಿಗೆ ಸಚಿವರು ಕರೆ ನೀಡಿದರು.
ಕ್ಷೇತ್ರದ ಶಾಸಕ ಎ.ಆರ್.ಕೃಷ್ಣಮೂರ್ತಿರವರು ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇ.85 ಕ್ಕಿಂತ ಹೆಚ್ಚು ಅಂಕ ಗಳಿಸಿದ 80 ಮಕ್ಕಳಿಗೆ ಸನ್ಮಾನಿಸಿ, ಪ್ರೋತ್ಸಾಹ ಧನ ನೀಡಿ ಅಭಿನಂದನೆ ಸಲ್ಲಿಸಿದರು
ತಾಲ್ಲೂಕು ತಾಲ್ಲೂಕು ಉಪ್ಪಾರ ಸಂಘ ಅಧ್ಯಕ್ಷ ರಮೇಶ್, ಕೊಳ್ಳೇಗಾಲ ಮತ್ತು ಹನೂರು ತಾಲ್ಲೂಕು ಉಪ್ಪಾರ ನೌಕರರ ಸಂಘದ ಅಧ್ಯಕ್ಷ ಜಯಶಂಕರ್, ಗೌರವಧ್ಯಕ್ಷ ಯಡಮೋಳೆ ಗೋವಿಂದರಾಜು, ಕಾರ್ಯದರ್ಶಿ ರಾಜೇಂದ್ರ, ಪದಾಧಿಕಾರಿಗಳಾದ ರಾಜು ಹೊಂಡರಬಾಳು, ಪ್ರಿಯಶಂಕರ್, ನಂಜುಂಡಸ್ವಾಮಿ, ನಟರಾಜು ಉಪ್ಪಾರ್, ಮಾದೇಶ್ ಉಪ್ಪಾರ್, ಚೇತನ್, ಕಲ್ಲೇಶ್ ಮತ್ತಿತರರು ಹಾಜರಿದ್ದರು.
