ಮೈಸೂರು: ಪ್ರತಾಪ್ ಸಿಂಹ ಅವರೇ 2014 ರ ಚುನಾವಣೆಯಲ್ಲಿ ನೀವು ಸಂಸದರಾಗಿದ್ದು ಒಬ್ಬ ಹಿಂದುಳಿದ ನಾಯಕನನ್ನ ತುಳಿದೇ ಅನ್ನೋದನ್ನ ಮರೆಯಬೇಡಿ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ತಿರುಗೇಟು ನೀಡಿದ್ದಾರೆ.
ಯತೀಂದ್ರ ಅವರೆ ನಿಮಗೆ ಮಂತ್ರಿ ಸ್ಥಾನ ಸಿಕ್ಕಿದು ಇದೇ ಹಿಂದೂ ಧರ್ಮದ ಜಾತಿ ವ್ಯವಸ್ಥೆಯಿಂದ. ನಿಮ್ಮದು ಜಾತಿ ಕೋಟಾ. ಅಪ್ಪನ ಕೋಟಾ ನೆನಪಿರಲಿʼ ಎಂಬ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಸುಬ್ರಮಣ್ಯ ಈ ರೀತಿ ಪ್ರತಿಕ್ರಿಯಿಸಿದರು.
ಯತೀಂದ್ರ ಸಿದ್ದರಾಮಯ್ಯ ಅವರು ಮಂತ್ರಿಯಾಗಿರೋದು ಮೆರಿಟ್ ಕೋಟಾದಲ್ಲೇ ವಿನಃ ಅಪ್ಪನ ಕೋಟಾದಲ್ಲಿ ಅಲ್ಲ. 2018 ರಲ್ಲಿ ರಾಜಕೀಯ ಪ್ರವೇಶ ಮಾಡಿದ ಯತೀಂದ್ರ ಅವರು ಮೊದಲ ಬಾರಿಗೆ ವರುಣ ಕ್ಷೇತ್ರದಿಂದ ಗೆದ್ದು ವಿಧಾನಸಭೆ ಪ್ರವೇಶಿಸಿದರು. 2023 ರಲ್ಲಿ ಹೈಕಮಾಂಡ್ ಸೂಚನೆಯಂತೆ ಕ್ಷೇತ್ರವನ್ನ ತ್ಯಾಗ ಮಾಡಿದರು. 2023 ರ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯಾದ್ಯಂತ ಪ್ರಚಾರ ಮಾಡಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಶ್ರಮಿಸಿದ್ದಾರೆ ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ ಸರ್ಕಾರ ಕೊಟ್ಟ ಗ್ಯಾರಂಟಿ ಯೋಜನೆಗಳು, ಇತರ ಕೊಡುಗೆಗಳನ್ನು ಜನರ ಮನಮುಟ್ಟುವಂತೆ ಮಾಡಿ, ದಾವಣಗೆರೆ, ಬಾಗಲಕೋಟೆ ಚುನಾವಣೆಗಳಲ್ಲೂ ಗೆಲುವು ಸಿಗುವಂತೆ ಮಾಡಿದರು. ಯತೀಂದ್ರ ಅವರ ಕಾರ್ಯವೈಖರಿಯನ್ನು ಕಂಡು ಕಾಂಗ್ರೆಸ್ ಹೈಕಮಾಂಡ್ ರಾಹುಲ್ ಗಾಂಧಿ ಅವರು ಯತೀಂದ್ರರನ್ನ ಮಂತ್ರಿ ಮಾಡಿದ್ದಾರೆ. ಇದ್ಯಾವುದು ಕೋಟಾದಲ್ಲಿ ಇಲ್ಲ ಎಂದು ಸುಬ್ರಹ್ಮಣ್ಯ ಸ್ಪಷ್ಟಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಹೇಳಿದ್ದರೂ, ಕರ್ನಾಟಕ ಕಾಂಗ್ರೆಸ್ ಪಕ್ಷದ 136 ಶಾಸಕರಿಗೂ ಅವರು ನಾಯಕರೇನೆ. ಸಮಾ ಸಮಾಜಕ್ಕಾಗಿ ಶ್ರಮಿಸುವ ನಾಯಕರು. ಪ್ರತಿ ಸಮಾಜದ ನಾಯಕರಿಗೂ ಸ್ಥಾನ ಸಿಗಬೇಕು, ಗೌರವ ಸಿಗಬೇಕು ಎಂದು ಬಯಸುತ್ತಾರೆಯೇ ಹೊರತು, ಅವರಿಗೆ ಕೊಡಿ,ಇವರಿಗೆ ಕೊಡಬೇಡಿ ಎನ್ನುವ ಜಾಯಮಾನ ಅವರದ್ದಲ್ಲ ಎಂದಿದ್ದಾರೆ.
ಹಾಗೇ ನೋಡಿದರೆ 2014 ರಲ್ಲಿ ನೀವು ಮೈಸೂರು – ಕೊಡಗು ಕ್ಷೇತ್ರದಿಂದ ಒಬ್ಬ ಹಿಂದುಳಿದ ನಾಯಕನನ್ನು ತುಳಿದು ಬಿಜೆಪಿಯಿಂದ ಟಿಕೆಟ್ ಪಡೆದುಕೊಂಡಿರಿ. ಅಲ್ಲಿಂದ ನಿಮ್ಮ ರಾಜಕೀಯ ಜೀವನ ಶುರು ಮಾಡಿದಿರಿ, ಮೋದಿ ಬಿಟ್ಟರೇ ಕೆಲಸ ಮಾಡ್ತಿರೋದು ನಾನೇ ಎನ್ನುವಂತೆ ಬೀಗುತ್ತಿದ್ರಿ. ನಿಮ್ಮ ಆಟಗಳನ್ನ ನೋಡಿಯೇ 2024ರ ಚುನಾವಣೆಯಲ್ಲಿ ನಿಮಗೆ ಟಿಕೆಟ್ ನಿರಾಕರಿಸಿದರಿ. ಈಗ ಮತ್ತೆ ನಾನಿದ್ದೀನಿ ಅಂತ ತೋರಿಸಿಕೊಳ್ಳೋಕೆ, 2028 ರ ಚುನಾವಣೆಯಲ್ಲಿ ಬಿ-ಫಾರಂ ಪಡೆಯೋಕೆ ಈ ರೀತಿ ಆರೋಪಗಳನ್ನ ಮಾಡುತ್ತೀದ್ದೀರಿ ಎಂದು ಸುಬ್ರಮಣ್ಯ ಕುಟುಕಿದ್ದಾರೆ.
ಸಿದ್ದರಾಮಯ್ಯ ವಿರುದ್ಧ, ಕಾಂಗ್ರೆಸ್ ವಿರುದ್ಧ ನಿರಂತರ ಆರೋಪಗಳನ್ನ ಮಾಡುತ್ತಿದ್ದರೆ ಹೈಕಮಾಂಡ್ ನಿಮ್ಮನ್ನು ಗುರುತಿಸುತ್ತದೆ ಎನ್ನುವ ಭ್ರಮೆಯಲ್ಲಿದ್ದೀರಿ, ಈ ರೀತಿ ಇಲ್ಲಸಲ್ಲದ ಆರೋಪಗಳು ನಿಮ್ಮ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಅವರು ಹೇಳಿದ್ದಾರೆ.
