ಮೈಸೂರು: ಮೈಸೂರಿನ ಗಣಪತಿ ಸಚ್ಚಿದಾನಂದ ಆಶ್ರಮದ ಅವಧೂತ ದತ್ತ ಪೀಠದಲ್ಲಿ ಆಷಾಢ ಮಾಸ ಹಾಗೂ ಚಾತುರ್ಮಾಸ್ಯದ ಪ್ರಯುಕ್ತ ಆಯೋಜಿಸಲಾಗಿರುವ ಶತಚಂಡಿಕಾ ಯಾಗಕ್ಕೆ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು ವಿಧ್ಯುಕ್ತವಾಗಿ ಚಾಲನೆ ನೀಡಿದರು.
ವೇದ ಮಂತ್ರ ಹಾಗೂ ದೇವಿ ಸ್ತುತಿಯೊಂದಿಗೆ ಆಶೀರ್ವಚನ ನೀಡಿ ಮಾತನಾಡಿದ ಶ್ರೀಗಳು, ಈ ಮಹಾಯಾಗದ ಉದ್ದೇಶ, ಹಿನ್ನೆಲೆ ಹಾಗೂ ಮಹತ್ವವನ್ನು ತಿಳಿಸಿಕೊಟ್ಟರು.
ಭಕ್ತಾದಿಗಳು ಶುದ್ಧ ಮನಸ್ಸಿನಿಂದ ಪ್ರತಿದಿನ ಕನಿಷ್ಠ ೭ ಬಾರಿ ಸಪ್ತ ಶ್ಲೋಕಿಯನ್ನು (ದುರ್ಗಾ ಸ್ತುತಿ) ಪಾರಾಯಣ ಮಾಡಬೇಕು. ಸಾಧ್ಯವಾದಲ್ಲಿ ೨೭, ೫೪ ಅಥವಾ ೧೦೮ ಬಾರಿ ಪಠಿಸುವುದು ಅತ್ಯಂತ ಶ್ರೇಷ್ಠ ಎಂದು ಶ್ರೀಗಳು ಸಲಹೆ ನೀಡಿದರು.
ಸಕಲರ ಒಳಿತಿಗಾಗಿ, ವಿಶ್ವ ಶಾಂತಿ ಹಾಗೂ ಲೋಕ ಕಲ್ಯಾಣಕ್ಕಾಗಿ ಚಂಡಿಕಾ ಮಾತೆ ಮತ್ತು ಚಾಮುಂಡೇಶ್ವರಿಯಲ್ಲಿ ಎಲ್ಲರೂ ಭಕ್ತಿಯಿಂದ ಪ್ರಾರ್ಥಿಸಬೇಕು ಎಂದು ಕರೆ ನೀಡಿದರು.
ಆಶ್ರಮದಲ್ಲಿ ಸತತ ನಾಲ್ಕನೇ ವರ್ಷ ಈ ಶತಚಂಡಿಕಾ ಯಾಗವನ್ನು ಆಯೋಜಿಸಲಾಗಿದ್ದು, ಇದೇ ರೀತಿ ಹತ್ತು ವರ್ಷಗಳ ಕಾಲ ಮುಂದುವರಿಸಿ, ತದನಂತರ ಬೃಹತ್ ‘ಸಹಸ್ರ ಚಂಡಿಕಾ ಯಾಗ’ವನ್ನು ಮಾಡುವ ಸಂಕಲ್ಪ ಹೊಂದಲಾಗಿದೆ ಎಂದು ತಿಳಿಸಿದರು.
ಸೀತಾಮಾತೆಯೇ ಚಂಡಿ, ಕಾಳಿ ಹಾಗೂ ಲಕ್ಷ್ಮಿಯ ಸ್ವರೂಪವಾಗಿದ್ದಾಳೆ. ಅಂತಹ ಅಮ್ಮನವರ ಮುದ್ದಿನ ಮಗನಾದ ಕಾರ್ಯಸಿದ್ಧಿ ಆಂಜನೇಯ ಸ್ವಾಮಿಯ ಸನ್ನಿಧಿಯಲ್ಲಿಯೇ ಈ ಯಾಗ ನಡೆಯುತ್ತಿರುವುದು ಅತ್ಯಂತ ವಿಶೇಷ ಮತ್ತು ಶ್ರೇಷ್ಠವಾಗಿದೆ ಎಂದು ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.
ನವರಾತ್ರಿಯ ಸ್ಮರಣೆ: ಪೂಜ್ಯ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರಿಗೆ ಚಂಡಿಕಾ ಹೋಮವೆಂದರೆ ಅತ್ಯಂತ ಪ್ರೀತಿ. ನವರಾತ್ರಿಯ ಮಹಾನವಮಿಯ ದಿನ ಸ್ವತಃ ಶ್ರೀಗಳೇ ಅಮ್ಮನವರ ರೂಪದಲ್ಲಿ ಬಂದು ಯಾಗದ ಪೂರ್ಣಾಹುತಿ ಸಮರ್ಪಿಸುವ ದೃಶ್ಯ ಕಣ್ಮನ ಸೆಳೆಯುವಂತಿರುತ್ತದೆ ಎಂದು ಸ್ಮರಿಸಿದರು.
ಯಾಗವನ್ನು ಸಾಂಗವಾಗಿ ನೆರವೇರಿಸಲು ವಿವಿಧೆಡೆಯಿಂದ ಆಗಮಿಸಿರುವ ಋತ್ವಿಜರು ಅತ್ಯಂತ ಶ್ರದ್ಧಾಭಕ್ತಿಗಳಿಂದ ವಿಧಿವಿಧಾನಗಳನ್ನು ಪೂರೈಸಬೇಕು. ಆಶ್ರಮದ ಆವರಣದಲ್ಲಿಯೇ ವಾಸ್ತವ್ಯ ಹೂಡಿ, ನಿಯಮನಿಷ್ಠೆಗಳಿಂದ ಅನುಷ್ಠಾನ, ಪಾರಾಯಣ ಹಾಗೂ ಜಪ-ತಪಗಳನ್ನು ಕೈಗೊಳ್ಳುವಂತೆ ಕಿರಿಯ ಶ್ರೀಗಳು ಮಾರ್ಗದರ್ಶನ ನೀಡಿದರು.
ಈ ಶತಚಂಡಿಕಾ ಯಾಗದ ಉದ್ಘಾಟನಾ ಸಮಾರಂಭದಲ್ಲಿ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ
ಎಚ್. ವಿ. ರಾಜೀವ್,ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ
ಡಿ. ಟಿ. ಪ್ರಕಾಶ್,ಸಾಮಾಜಿಕ ಕಾರ್ಯಕರ್ತರಾದ ವಿಕಾಸ್ ಶಾಸ್ತ್ರಿ, ಕಲ್ಯಾಣ್ ಆಶ್ರಮದ ಕಲ್ಯಾಣ್ ಹಾಗೂ
ಆಶ್ರಮದ ಇತರ ಪ್ರಮುಖರು ಮತ್ತು ಭಕ್ತರು ಉಪಸ್ಥಿತರಿದ್ದು, ಚಂಡಿಕಾ ಯಾಗದ ದರ್ಶನ ಪಡೆದು ಅಮ್ಮನವರ ಕೃಪೆಗೆ ಪಾತ್ರರಾದರು.
