ಮೈಸೂರು: ಸುಪ್ರೀಂ ಕೋರ್ಟ್ ನೀಡಿರುವ ನಿರ್ದೇಶನದ ಮೇರೆಗೆ ಮೈಸೂರು ನಗರ ಪಾಲಿಕೆ ಅಧಿಕಾರಿಗಳ ನೇತೃತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ಭರದಿಂದ ಸಾಗಿದೆ.
ಎರಡು ಬದಿಗಳಲ್ಲೂ ಒತ್ತುವರಿಯಾಗಿದ್ದ ಸಯ್ಯಾಜಿರಾವ್ ರಸ್ತೆಯಿಂದ ರಾಜಪಥದ ವರೆಗಿನ ಪಾದಚಾರಿ ಮಾರ್ಗವನ್ನು ತೆರವುಗೊಳಿಸಲಾಗಿದೆ.
ಹಲವು ವರ್ಷಗಳಿಂದ ಪಾದಚಾರಿ ಮಾರ್ಗದಲ್ಲಿ ನಡೆದಿದ್ದ ಒತ್ತುವರಿಯಿಂದಾಗಿ ಜನರು ರಸ್ತೆಯಲ್ಲೇ ನಡೆಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ನಗರ ಪಾಲಿಕೆ ಅಧಿಕಾರಿಗಳು, ಪೊಲೀಸ್ ಬಂದೋಬಸ್ತ್ನೊಂದಿಗೆ ಸ್ಥಳಕ್ಕೆ ಆಗಮಿಸಿ ಒತ್ತುವರಿ ಮಾಡಿಕೊಂಡಿದ್ದ ಮಳಿಗೆಗಳು, ಬೋರ್ಡ್ಗಳು ಮತ್ತು ಇತರೆ ವಸ್ತುಗಳನ್ನು ತೆರವುಗೊಳಿಸಿದರು. ಕಾರ್ಯಾಚರಣೆಯ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಮಾಡಲಾಗಿತ್ತು.
ಸುಪ್ರೀಂ ಕೋರ್ಟ್ ಪಾದಚಾರಿ ಮಾರ್ಗಗಳನ್ನು ಒತ್ತುವರಿ ಮುಕ್ತಗೊಳಿಸುವಂತೆ ನೀಡಿದ್ದ ಆದೇಶದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ನಗರದ ಇತರೆ ಪ್ರಮುಖ ರಸ್ತೆಗಳಲ್ಲೂ ಇದೇ ಮಾದರಿಯಲ್ಲಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದರು.
ಪಾದಚಾರಿ ಮಾರ್ಗ ತೆರವಾದ ನಂತರ ಸ್ಥಳೀಯರು ಮತ್ತು ವಿದ್ಯಾರ್ಥಿಗಳು ನಿಟ್ಟುಸಿರು ಬಿಟ್ಟು ಸಧ್ಯ ಈಗಲಾದರೂ ಸರಿಯಾಗಿ ಓಡಾಡಬಹುದಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.
