ಮೈಸೂರು: ಕ್ರೆಡಿಟ್ ಕಾರ್ಡ್ ಪ್ರೊಟೆಕ್ಷನ್ ಪ್ಲಾನ್ ಡಿಸೇಬಲ್ ಮಾಡಿಸುವುದಾಗಿ ಆಮಿಷ ತೋರಿಸಿ ಮಹಿಳೆಗೆ 1,95,869 ರೂ ವಂಚಿಸಿರುವ ಘಟನೆ ಮೈಸೂರಲ್ಲಿ ನಡೆದಿದೆ.
ಮೈಸೂರಿನ ಹೂಟಗಳ್ಳಿ ನಿವಾಸಿ ಸುಚಿತ್ರ( 32)ವಂಚನೆಗೆ ಒಳಗಾದವರು.
ಈ ಸಂಬಂಧ ಸೋನು ಭಗತ್ ಎಂಬ ಅಪರಿಚಿತ ವ್ಯಕ್ತಿಯ ವಿರುದ್ಧ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.17 ರಂದು ಸುಚಿತ್ರ ರವರಿಗೆ ಅನಾಮಧೇಯ ವ್ಯಕ್ತಿಯೊಬ್ಬರು ಕರೆ ಮಾಡಿ ನಿಮ್ಮ ಕ್ರೆಡಿಟ್ ಕಾರ್ಡ್ ಪ್ರೊಟೆಕ್ಷನ್ ಪ್ಲಾನ್ ಎನೇಬಲ್ ಆಗಿದೆ. ಅದನ್ನು ಡಿಸೇಬಲ್ ಮಾಡಿಸಿಕೊಳ್ಳದಿದ್ದರೆ ಪ್ರತಿ ತಿಂಗಳು ನಿಮ್ಮ ಖಾತೆಯಿಂದ 5 ಸಾವಿರ ರೂ ಕಡಿತವಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾನೆ.
ಈ ಸಂಬಂಧ ಸುಚಿತ್ರ ಅವರು ICICI ಬ್ಯಾಂಕ್ ನಲ್ಲಿ ಪರಿಶೀಲಿಸಿದಾಗ ಯಾವುದೇ ಮಾಹಿತಿ ದೊರೆಯಲಿಲ್ಲ. ಕೆಲವು ದಿನಗಳ ನಂತರ ಅದೇ ವ್ಯಕ್ತಿ ಮತ್ತೆ ಫೋನ್ ಮಾಡಿ ನೀವು ಡಿಸೇಬಲ್ ಮಾಡಿಸಿಲ್ಲವಾದ್ದರಿಂದ ಮುಂದಿನ ದಿನಗಳಲ್ಲಿ ಪ್ರತಿ ತಿಂಗಳು 5 ಸಾವಿರ ರೂ ಕಡಿತವಾಗುತ್ತದೆ ಎಂದು ತಿಳಿಸಿದ್ದಾನೆ.
ಬ್ಯಾಂಕ್ ನಲ್ಲಿ ಯಾವುದೇ ಮಾಹಿತಿ ಇಲ್ಲವೆಂದು ತಿಳಿಸಿದಾಗ ನಮ್ಮ ಮ್ಯಾನೇಜರ್ ಮಾತನಾಡುತ್ತಾರೆ ಎಂದು ಹೇಳಿ ಸೋನು ಭಗತ್ ಎಂಬವರಿಗೆ ಸಂಪರ್ಕ ಕೊಟ್ಟು ಮಾತನಾಡಿಸಿದ್ದಾನೆ. ಸೋನು ಭಗತ್ ಹೆಸರಿನ ವ್ಯಕ್ತಿ ಸಹ ನಿಮ್ಮ ಖಾತೆಯಿಂದ ಹಣ ಕಟ್ ಆಗುವುದಾಗಿ ನಂಬಿಸಿ ಆನ್ ಲೈನ್ ಮೂಲಕವೇ ಡಿಸೇಬಲ್ ಮಾಡಿಕೊಳ್ಳಬಹುದು ಎಂದು ಲಿಂಕ್ ಕಳಿಸಿದ್ದಾನೆ.
ಲಿಂಕ್ ಓಪನ್ ಮಾಡಿದ ಸುಚಿತ್ರ ಅವರಿಗೆ ಡಿಸೇಬಲ್ ಬಗ್ಗೆ ಯಾವುದೇ ಮಾಹಿತಿ ದೊರೆಯಲಿಲ್ಲ. ಈ ವೇಳೆ ಸಂಪರ್ಕಿಸಿದ ಸೋನು ಭಗತ್ ನಿಮ್ಮ ಕ್ರೆಡಿಟ್ ಲಿಮಿಟ್ ಅನ್ನು 1 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸಿದರೆ ಆಫರ್ ಸಿಗುತ್ತದೆ ಎಂದು ನಂಬಿಸಿದ್ದಾನೆ. ಸೋನು ಭಗತ್ ಕೇಳಿದ ಸಂಪೂರ್ಣ ಮಾಹಿತಿ ಹಾಗೂ OTP ಅನ್ನು ಸುಚಿತ್ರ ನೀಡಿದ್ದಾರೆ. ಕೆಲವೇ ಕ್ಷಣಗಳಲ್ಲಿ 1,95,869 ರೂ ಖಾತೆಯಿಂದ ಕಡಿತವಾಗಿದೆ.
ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಬ್ಯಾಂಕ್, ಕ್ರೆಡಿಟ್ ಕಾರ್ಡ್ ಹೆಸರಿನಲ್ಲಿ ಬರುವ ಅಪರಿಚಿತ ಕರೆಗಳು, ಲಿಂಕ್ ಗಳು ಹಾಗೂ OTP ಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅನುಮಾನ ಬಂದಲ್ಲಿ ನೇರವಾಗಿ ಬ್ಯಾಂಕ್ ಶಾಖೆಯನ್ನು ಸಂಪರ್ಕಿಸಿ ಎಂದು ಬ್ಯಾಂಕ್ ಅಧಿಕಾರಿಗಳು ಮತ್ತು ಪೊಲೀಸರು ಸೂಚಿಸಿದ್ದಾರೆ.
