ಅಜ್ಜಂಪುರ: ಕನ್ನಡ ಜಾನಪದ ಪರಿಷತ್ ಚಿಕ್ಕಮಗಳೂರು ಜಿಲ್ಲಾ ಮಹಿಳಾ ಘಟಕದ ವತಿಯಿಂದ ಅಜ್ಜಂಪುರ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಪ್ರಥಮ ಜಾನಪದ ಮಹಿಳಾ ಸಮ್ಮೇಳನದ ಲೆಕ್ಕಪತ್ರ ಮಂಡನೆ ಹಾಗೂ ತಾಲೂಕು ಸಮ್ಮೇಳನದ ಪೂರ್ವಭಾವಿ ಸಭೆ ನಡೆಯಿತು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷರಾದ ಡಾ. ಜಾನಪದ ಎಸ್. ಬಾಲಾಜಿ ಅವರು, ಜಾನಪದ ವಿದ್ವಾಂಸರಾದ ಡಾ. ಮಂಜುಳಾ ಹುಲಹಳ್ಳಿ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆದ ಅದ್ದೂರಿ ಮಹಿಳಾ ಜಾನಪದ ಸಮ್ಮೇಳನವು ಮಹಿಳಾ ಜಾಗೃತಿಗೆ ದಿಕ್ಸೂಚಿಯಾಗಿದ್ದು, ಇತರ ಸಮ್ಮೇಳನಗಳಿಗೆ ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.
ಸಮ್ಮೇಳನದಲ್ಲಿ ಮಹಿಳಾ ಜಾನಪದದ ಮೌಲ್ಯಾಧಾರಿತ ವಿಷಯಗಳು ಗೋಷ್ಠಿಗಳಲ್ಲಿ ಚರ್ಚೆಯಾಗಿದ್ದು ವಿಶೇಷವಾಗಿತ್ತು ಎಂದರು. ಇದೇ ಸಂದರ್ಭದಲ್ಲಿ ಅಜ್ಜಂಪುರದ ಅಣ್ಣೆ ಮಠದಲ್ಲಿ ತರೀಕೆರೆ ತಾಲೂಕು ಮಹಿಳಾ ಜಾನಪದ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗುವುದು ಎಂದು ಘೋಷಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಂಸ್ಕೃತಿಕ ರಾಯಭಾರಿ ಎ.ಸಿ. ಚಂದ್ರಪ್ಪ ಅವರು ಮಾತನಾಡಿ, ಸಮ್ಮೇಳನದ ಚೌಕಟ್ಟು ಹಾಗೂ ವಿಸ್ತರಣೆ ಅಚ್ಚುಕಟ್ಟಾಗಿದ್ದು, ಇತರರಿಗೆ ಅನುಕರಣೀಯವಾಗಿದೆ. ಸಮ್ಮೇಳನದ ಸ್ಮರಣ ಸಂಚಿಕೆಯನ್ನು ಹೊರತರಲಾಗುವುದು ತಿಳಿಸಿದರು.
ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷೆ ವಿಶಾಲಾಕ್ಷಮ್ಮ ಎಂ.ಎಸ್. ಅವರು ಮಾತನಾಡಿ, ಗ್ರಾಮ ಮಟ್ಟದಿಂದ ಜಿಲ್ಲಾ ಮಟ್ಟದ ಎಲ್ಲಾ ಪದಾಧಿಕಾರಿಗಳ ಶ್ರಮದಿಂದ ಸಮ್ಮೇಳನ ಯಶಸ್ವಿಯಾಗಿದೆ. ಮಹಿಳೆಯರು ಸಬಲರು ಎಂಬುದನ್ನು ತೋರಿಸುವಲ್ಲಿ ಈ ಸಮ್ಮೇಳನ ಮಹತ್ವದ ಪಾತ್ರ ವಹಿಸಿದೆ ಎಂದು ಹೇಳಿದರು.
ಸಮ್ಮೇಳನದ ಲೆಕ್ಕಪತ್ರಗಳನ್ನು ನವೀನ್ ಮಂಡಿಸಿದ್ದು, ಎಲ್ಲಾ ಪದಾಧಿಕಾರಿಗಳು ಸರ್ವಾನುಮತದಿಂದ ಅನುಮೋದಿಸಿದರು.
ಸಭೆಯಲ್ಲಿ ವಿಜಯ ಕುಮಾರಿ. ಸ್ವಾಗತ ಕೋರಿ ಮಾತನಾಡಿದರು,ರಂಜಿತಾ, ನಿರೂಪಿಸಿದರು ಪುಟ್ಟಮ್ಮ, ಪುಷ್ಪ, ಮಧು, ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಎಚ್.ಆರ್. ಚಂದ್ರಪ್ಪ, ಸಮ್ಮೇಳನ ದ ಬಗ್ಗೆ
ಮಾತನಾಡಿದರು. ಮಹೇಂದ್ರ ಹಾಗೂ ಕನ್ನಡ ಜಾನಪದ ಪರಿಷತ್ ಬೆಂಗಳೂರು ನಗರ ಜಿಲ್ಲಾಧ್ಯಕ್ಷ ಕೆ.ಸಿ. ಕಾಂತಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
