ಬೆಳಗಾವಿ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2028ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಆದರೆ ಸಕ್ರಿಯ ರಾಜಕಾರಣದಲ್ಲಿ ಕೊನೆಯವರೆಗೂ ಇರುತ್ತಾರೆ ಎಂದು ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಂದೆಯವರು ಮೊದಲಿನಿಂದಲೂ 2028ರ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣಾ ರಾಜಕೀಯ ಬಿಟ್ಟರೂ ರಾಜ್ಯದ ಶೋಷಿತರ ಧ್ವನಿಯಾಗಿ ಕೆಲಸ ಮಾಡುತ್ತಾರೆ. ತಂದೆಯವರು ಗಟ್ಟಿ ನಿರ್ಧಾರ ಮಾಡಿದ್ದಾರೆ. ಅದನ್ನು ಬದಲಾಯಿಸಿ ಎಂದು ಹೇಳಲು ಸಾಧ್ಯವಿಲ್ಲ ಅವರಿಗೆ ವಯಸ್ಸಾಗಿದೆ. ಆರೋಗ್ಯದ ಬಗ್ಗೆ ಕಾಳಜಿ ವಹಿಸಲಿ ಎಂದು ಹೇಳಿದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು,ಕೇಂದ್ರ ಸರ್ಕಾರ ಎಷ್ಟೇ ಹಗರಣ ಮಾಡಿದರೂ ಸಚಿವರಿಂದ ರಾಜೀನಾಮೆ ಕೊಡಿಸುತ್ತಿರಲಿಲ್ಲ. ಜನರು ಆಕ್ಷೇಪಿಸಿದರೂ ನಾವು ರಾಜೀನಾಮೆ ಕೊಡುವುದಿಲ್ಲ ಎಂಬ ಮನಸ್ಥಿತಿ ಬಿಜೆಪಿಯದ್ದಾಗಿತ್ತು. ಶಿಕ್ಷಣ ಸಚಿವರ ರಾಜೀನಾಮೆ ಕೇಂದ್ರ ಸರ್ಕಾರಕ್ಕೆ ಒಂದು ಪಾಠವಾಗಿದೆ ಜನರು ಸುಮ್ಮನೆ ಇರುವವರಲ್ಲ ಎಂಬ ಸಂದೇಶ ಸಿಕ್ಕಿದೆ ಎಂದು ತಿಳಿಸಿದರು.
ನಾವು ಏನೇ ತಪ್ಪು ಮಾಡಿದರೂ ಯಾರಿಗೂ ಬಗ್ಗುವುದಿಲ್ಲ ಎಂಬ ಮನಸ್ಥಿತಿಯಲ್ಲಿ ಕೇಂದ್ರ ಸರ್ಕಾರ ಇತ್ತು. ಈಗ ವಿದ್ಯಾರ್ಥಿಗಳ ಹೋರಾಟಕ್ಕೆ ಮಣಿದಿದೆ. ಇನ್ನಾದರೂ ಕೇಂದ್ರ ಸರ್ಕಾರ ಆ ಮನಸ್ಥಿತಿಯನ್ನು ಬಿಡಬೇಕು ಎಂದು ಯತೀಂದ್ರ ಸಲಹೆ ನೀಡಿದರು.
ಕೆಪಿಎಸ್ಸಿ ಹಗರಣ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೆಪಿಎಸ್ಸಿ ಅಧ್ಯಕ್ಷರನ್ನು ನೇಮಕ ಮಾಡಿದ್ದು ಬಿಜೆಪಿ ಸರ್ಕಾರ, ಅವರನ್ನು ಬದಲಾಯಿಸುವ ಅಧಿಕಾರ ಸರ್ಕಾರಕ್ಕೆ ಇರಲಿಲ್ಲ,ರಾಜ್ಯಪಾಲರ ಮೂಲಕ ವಜಾ ಆಗಿದೆ. ಈಗ ಅಂತಹ ಭ್ರಷ್ಟನ ಪರವಾಗಿ ಬಿಜೆಪಿ ಬೆಂಬಲಿತ ವಕೀಲರೇ ಕೋರ್ಟ್ಗೆ ಹೋಗಿದ್ದಾರೆ. ಒಂದು ಕಡೆ ಹಗರಣ ಎನ್ನುತ್ತಾರೆ, ಇನ್ನೊಂದು ಕಡೆ ಹಗರಣ ಮಾಡಿದವರ ಪರ ನಿಲ್ಲುತ್ತಾರೆ. ಬಿಜೆಪಿಯದ್ದು ಯಾವಾಗಲೂ ಡಬಲ್ ಸ್ಟ್ಯಾಂಡ್ ಎಂದು ಕುಟುಕಿದರು.
ಯಾವುದೇ ಫೈನಾನ್ಸ್ ಕಂಪನಿಗಳು ರೈತರನ್ನು ಪೀಡಿಸಬಾರದು ಎಂದು ಈಗಾಗಲೇ ಕಾನೂನು ತರಲಾಗಿದೆ,ಬರದ ನಡುವೆಯೇ ರೈತರಿಗೆ ನೋಟಿಸ್ ಕೊಟ್ಟ ವಿಚಾರವನ್ನು ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ಸಚಿವ ಯತೀಂದ್ರ ತಿಳಿಸಿದರು.
