ಮೈಸೂರು: ಕ್ರೀಡಾ ವಸತಿ ನಿಲಯಗಳಲ್ಲಿನ ವಿದ್ಯಾರ್ಥಿನಿಯರು ಕ್ರೀಡೆ ಮತ್ತು ಶಿಕ್ಷಣ ಎರಡೂ ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಿ ಸಾವಿರಾರು ಯುವಜನರಿಗೆ ಮಾದರಿಯಾಗಬೇಕು ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಎಂ.ಎನ್ ಅನುಚೇತ್ ತಿಳಿಸಿದರು.
ಚಾಮುಂಡಿ ವಿಹಾರ್ ಕ್ರೀಡಾಂಗಣದಲ್ಲಿರುವ ಕ್ರೀಡಾ ವಸತಿ ನಿಲಯಕ್ಕೆ ಭೇಟಿ ನೀಡಿ, ವಿದ್ಯಾರ್ಥಿನಿಯರೊಂದಿಗೆ ವಸತಿನಿಲಯದಲ್ಲಿ ದೊರೆಯುತ್ತಿರುವ ಆಹಾರ, ತರಬೇತಿ ಹಾಗೂ ಇತರೆ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ವಿದ್ಯಾರ್ಥಿನಿಯರೊಂದಿಗೆ ಊಟ ಮಾಡಿ ಆಹಾರದ ಗುಣಮಟ್ಟವನ್ನು ಖುದ್ದು ಪರಿಶೀಲಿಸಿದರು.
ವಸತಿ ನಿಲಯದಲ್ಲಿ ಸರ್ಕಾರ ನಿಗದಿಪಡಿಸಿರುವಂತೆ ಪ್ರತಿದಿನ ಉಪಹಾರ ಮತ್ತು ಊಟದ ವ್ಯವಸ್ಥೆ ಇರಬೇಕು. ಕ್ರೀಡೆಯಲ್ಲಿ ಭಾಗವಹಿಸಲು ಊಟ ಮತ್ತು ತರಬೇತಿ ಎರಡೂ ಮುಖ್ಯ ಅಂಶಗಳಾಗಿವೆ. ಯಾವುದೇ ರೀತಿಯ ಲೋಪವಾಗದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು ಎಂದು ಅವರು ಸೂಚಿಸಿದರು.
ಕ್ರೀಡಾ ವಿಜ್ಞಾನವು ಕ್ರೀಡಾಪಟುಗಳು ಆಯ್ಕೆ ಮಾಡುವ ಕ್ರೀಡೆಗೆ ಅನುಗುಣವಾಗಿ ಅವರ ದೇಹವನ್ನು ಹೆಚ್ಚು ಶಕ್ತಿಶಾಲಿ ಮಾಡಲು ಉಪಯುಕ್ತವಾಗಿದೆ. ಕ್ರೀಡಾ ವೈಜ್ಞಾನಿಕ ತರಬೇತಿ ಕೇಂದ್ರದಲ್ಲಿ ಕ್ರೀಡಾಪಟುಗಳನ್ನು ಅವರ ಕ್ರೀಡೆಯ ಆಧಾರದ ಮೇಲೆ ಪರೀಕ್ಷಿಸಲಾಗುತ್ತದೆ. ಅವರ ದೇಹದ ಯಾವ ಭಾಗಕ್ಕೆ ಹೆಚ್ಚಿನ ವ್ಯಾಯಾಮ ಬೇಕು ಎಂಬುದನ್ನು ಗುರುತಿಸಿ 3 ತಿಂಗಳ ಕಾಲ ವಿಶೇಷ ತರಬೇತಿ ನೀಡಿ ದೇಹವನ್ನು ಬಲಿಷ್ಠಗೊಳಿಸಲಾಗುತ್ತದೆ. ಆದ್ದರಿಂದ ಕ್ರೀಡಾ ವೈಜ್ಞಾನಿಕ ಕೇಂದ್ರವನ್ನು ಎಲ್ಲರೂ ಸದುಪಯೋಗಪಡಿಸಿಕೊಳ್ಳಬೇಕು ಎಂದು ಆಯುಕ್ತರು ಹೇಳಿದರು.
ಈ ಸಂದರ್ಭದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಭಾಸ್ಕರ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಎಚ್ ಸೇರಿದಂತೆ ಕ್ರೀಡಾ ತರಬೇತಿದಾರರು ಹಾಜರಿದ್ದರು.
