ಮೈಸೂರು: ಪ್ರಾಕೃತಿಕ ವಿಕೋಪಗಳಿಂದ ಹಾನಿಗೊಳಗಾದ ಎಫ್ಸಿವಿ ತಂಬಾಕು ಬೆಳೆಗಾರರಿಗೆ ಮಹತ್ವದ ಪರಿಹಾರವಾಗಿ, ಕೇಂದ್ರ ಸರ್ಕಾರವು ತಂಬಾಕು ಮಂಡಳಿಯ ಮೂಲಕ ನೀಡಲಾಗುವ ಅನುದಾನ ಮತ್ತು ಬಡ್ಡಿರಹಿತ ಸಾಲದ ಮೊತ್ತವನ್ನು ಹೆಚ್ಚಿಸಿದೆ.
ಇದಕ್ಕೆ ಕಾರಣ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ತಂಬಾಕು ಮಂಡಳಿಯ ಮುಂದೆ ರೈತರ ಪರವಾಗಿ ನಿರಂತರವಾಗಿ ಮನವಿ ಸಲ್ಲಿಸಿ, ಪರಿಣಾಮಕಾರಿ ಪ್ರತಿನಿಧಿತ್ವ ವಹಿಸಿದ್ದು.
ಪ್ರಾಕೃತಿಕ ವಿಕೋಪಗಳಿಂದ ತಂಬಾಕು ಬೆಳೆಗಾರರು ಎದುರಿಸುತ್ತಿರುವ ಸಂಕಷ್ಟವನ್ನು ಮನಗಂಡು, ಅವರಿಗೆ ನೀಡಲಾಗುತ್ತಿರುವ ಆರ್ಥಿಕ ನೆರವನ್ನು ಹೆಚ್ಚಿಸಬೇಕೆಂದು ಯದುವೀರ್ ಅವರು ಕೇಂದ್ರ ಸರ್ಕಾರವನ್ನು ನಿರಂತರವಾಗಿ ಒತ್ತಾಯಿಸಿದ್ದರು.
ಇದರ ಪರಿಣಾಮವಾಗಿ ತಂಬಾಕು ಮಂಡಳಿಯು ಅನುದಾನ ಹಾಗೂ ಬಡ್ಡಿರಹಿತ ಸಾಲದ ಮೊತ್ತವನ್ನು 50,000 ರಿಂದ 75,000 ರೂಗೆ ಹೆಚ್ಚಿಸುವುದರೊಂದಿಗೆ, ಇತರೆ ನೆರವಿನ ವಿಭಾಗಗಳಲ್ಲಿಯೂ ಪರಿಷ್ಕೃತ ಮಾರ್ಗಸೂಚಿಗಳಂತೆ ಆರ್ಥಿಕ ನೆರವನ್ನು ಹೆಚ್ಚಿಸಿದೆ.
ಈ ನಿರ್ಧಾರಕ್ಕೆ ಸ್ಪಂದಿಸಿದ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ತಂಬಾಕು ಮಂಡಳಿಗೆ ಯದುವೀರ್ ಒಡೆಯರ್ ಅವರು ಕೃತಜ್ಞತೆ ಸಲ್ಲಿಸಿದ್ದಾರೆ.
ಕರ್ನಾಟಕದ ತಂಬಾಕು ಬೆಳೆಗಾರರಿಗೂ ನ್ಯಾಯಸಮ್ಮತ ಬೆಂಬಲ ಬೆಲೆ ದೊರಕುವಂತೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಈ ಸಂಬಂಧ ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರಾದ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು, ಆಂಧ್ರ ಪ್ರದೇಶದ ತಂಬಾಕು ಬೆಳೆಗಾರರಿಗೆ ನೀಡಲಾಗುತ್ತಿರುವ ಪರಿಗಣನೆಯಂತೆಯೇ ಕರ್ನಾಟಕದ ತಂಬಾಕು ಬೆಳೆಗಾರರಿಗೂ ನ್ಯಾಯಯುತ ಮತ್ತು ಲಾಭದಾಯಕ ಬೆಂಬಲ ಬೆಲೆಯನ್ನು ನಿಗದಿಪಡಿಸುವಂತೆ ಮನವಿ ಮಾಡಿದ್ದಾರೆ. ಕರ್ನಾಟಕದ ರೈತರೂ ಸಮಾನ ಮಾನ್ಯತೆ ಮತ್ತು ರಕ್ಷಣೆಗೆ ಅರ್ಹರು ಎಂಬುದನ್ನು ಅವರು ಮನವರಿಕೆ ಮಾಡಿಕೊಟ್ಟಿದ್ದಾರೆ.
ಪರಿಷ್ಕೃತ ಯೋಜನೆಯಡಿ ಅರ್ಹರಾಗಿರುವ ಮೈಸೂರು ಹಾಗೂ ಕೊಡಗು ಜಿಲ್ಲೆಯ ಎಲ್ಲಾ ತಂಬಾಕು ಬೆಳೆಗಾರರು ತಂಬಾಕು ಮಂಡಳಿಯ ಕಚೇರಿಗಳನ್ನು ಸಂಪರ್ಕಿಸಿ ಈ ಸೌಲಭ್ಯಗಳ ಪ್ರಯೋಜನ ಪಡೆಯುವಂತೆ ಯದುವೀರ್ ಅವರು ಮನವಿ ಮಾಡಿದ್ದಾರೆ.
