ಹುಣಸೂರು: ಹುಣಸೂರು ತಾಲೂಕು ಹನಗೋಡು ಹೋಬಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಹಲವಾರು ಗ್ರಾಮಗಳ ನೂರಾರು ರೈತರು ಕೃಷಿಗಾಗಿ ಸಾಲ ಪಡೆದು ಪೂರ್ತಿಯಾಗಿ ಸಾಲದ ಹಣವನ್ನು ಕಟ್ಟಿದ್ದರೂ ಅದಕ್ಕೆ ಕ್ಲಿಯರೆನ್ಸ್ ನೀಡಿಲ್ಲವೆಂದು ಬಹಳಷ್ಟು ರೈತರು ನೊಂದು ನುಡಿದಿದ್ದಾರೆ.
ನಾವು ಸುಮಾರು ಎರಡು ಲಕ್ಷದ ಇಪ್ಪತ್ತೈದು ಸಾವಿರ ರೂಪಾಯಿ ಸಾಲ ಪಡೆದು ಅದನ್ನು ಸಂಪೂರ್ಣವಾಗಿ ಕಟ್ಟಿ ರಶೀತಿಯನ್ನು ಪಡೆದಿದ್ದೇವೆ, ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದವರು ನಮಗೆ ಹಣ ಕಟ್ಟಿರುವ ಬಗ್ಗೆ ಕ್ಲಿಯರೆನ್ಸ್ ನೀಡಿಲ್ಲ ಇದರಿಂದಾಗಿ ನಾವು ಹೊಸ ಸಾಲವನ್ನು ತೆಗೆದುಕೊಳ್ಳಲಾಗದೆ ಕಷ್ಟ ಅನುಭವಿಸುವಂತಾಗಿದೆ ಎಂದು ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಬಳಿ ಅಳಲು ತೋಡಿಕೊಂಡಿದ್ದಾರೆ.
ಈ ಬಗ್ಗೆ ನೊಂದ ರೈತರು ಮಾತನಾಡಿದ ಲೋಕೇಶ್ ಮತ್ತಿತರ ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ಹಣ ಕಟ್ಟಿದ್ದೇವೆ ಆದರೆ ಎರಡು ವರ್ಷ ಕಳೆದರೂ ಇದುವರೆಗೆ ನಮಗೆ ಬೇರೆ ಸಾಲವನ್ನು ನೀಡುತ್ತಿಲ್ಲ ಕ್ಲಿಯರೆನ್ಸ್ ಕೂಡ ನೀಡಿಲ್ಲ ಬೇರೆ ಬ್ಯಾಂಕಿನಲ್ಲೂ ನಮಗೆ ಸಾಲ ತೆಗೆದುಕೊಳ್ಳಲು ಆಗುತ್ತಿಲ್ಲ ಈಗ ಮಳೆ ಬಂದಿದೆ ಕೃಷಿ ಕಾರ್ಯವನ್ನು ಹೇಗೆ ಮಾಡಬೇಕು ನಮಗೆ ಹಣ ಎಲ್ಲಿಂದ ಬರಬೇಕು ಎಂದು ಪ್ರಶ್ನಿಸಿದ್ದಾರೆ.
ಇಂದು ಹುಣಸೂರಿಗೆ ಭೇಟಿ ನೀಡಿದ ಲೋಕಾಯುಕ್ತರಿಗೆ ಈ ಕುರಿತು ರೈತರು ಮನವಿ ನೀಡಿದ್ದು ನಮಗೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕ್ಲಿಯರೆನ್ಸ್ ಕೊಡಿಸಬೇಕು ಮತ್ತು ಹೊಸ ಸಾಲ ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಬೇಕೆಂದು ಅಲವತ್ತುಕೊಂಡಿದ್ದಾರೆ.
ಈಗಾಗಲೇ ಒಂದಿಬ್ಬರು ರೈತರು ಆತ್ಮಹತ್ಯೆ ಕೂಡ ಮಾಡಿಕೊಂಡಿದ್ದಾರೆ ಕೆಲವರು ಸಾಲ ಸೋಲ ಮಾಡಿ ಹಣ ಕಟ್ಟಿದ್ದಾರೆ ಮತ್ತೆ ಕೆಲವರು ಮನೆಯಲ್ಲಿದ್ದ ಒಡವೆಗಳನ್ನು ಮಾರಿ ಹಣ ಕಟ್ಟಿದ್ದಾರೆ ಆದರೂ ಇವರು ಕ್ಲಿಯರೆನ್ಸ್ ಕೊಡದೆ ನಮಗೆ ತೊಂದರೆಯಾಗಿದೆ ನಮಗೆ ಆತ್ಮಹತ್ಯೆ ಒಂದೇ ದಾರಿ ಎಂದು ಅತ್ಯಂತ ಬೇಸರದಿಂದ ಹೇಳಿದ್ದಾರೆ.
ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರು, ನಿರ್ದೇಶಕರು ತಕ್ಷಣ ಇತ್ತ ಗಮನ ಹರಿಸಿ ರೈತರಿಗೆ ಅವರು ತೆಗೆದುಕೊಂಡ ಸಾಲದ ಕ್ಲಿಯರೆನ್ಸ್ ನೀಡಬೇಕು ಮತ್ತು ಹೊಸ ಸಾಲ ಕೊಡಿಸಬೇಕು ಅಥವಾ ಬೇರೆ ಬ್ಯಾಂಕಿನಲ್ಲಿ ಸಾಲ ತೆಗೆದುಕೊಳ್ಳಲು ಅನುಕೂಲ ಮಾಡಿಕೊಡಬೇಕು ಎಂದು ಕರ್ನಾಟಕ ಪ್ರಜಾ ಪಾರ್ಟಿ ರೈತ ಪರ್ವ ಹುಣಸೂರು ತಾಲೂಕು ಅಧ್ಯಕ್ಷ ಚೆಲುವರಾಜು ಆಗ್ರಹಿಸಿದ್ದಾರೆ.
ರೈತರು ಮನವಿ ಕೊಟ್ಟ ವೇಳೆ ಲೋಕಾಯುಕ್ತ ಡಿ ವೈ ಎಸ್ ಪಿ ಶೈಲೇಂದ್ರ ಕುಮಾರ್,ಇನ್ಸ್ಪೆಕ್ಟರ್ ವಿಜಯಕುಮಾರ್
ತಹಸೀಲ್ದಾರ್ ಮಂಜುನಾಥ್,ನಗರಸಭಾ ಆಯುಕ್ತರಾದ ಮಾನಸಾ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

