ಬೆಂಗಳೂರು: ಬೆಂಗಳೂರು ನಗರದಲ್ಲಿ ಲಕ್ಷಾಂತರ ಜನರ ಜೀವನಾಧಾರವಾಗಿರುವ ಬೀದಿಬದಿ ವ್ಯಾಪಾರಿಗಳನ್ನು ಯಾವುದೇ ಸೂಕ್ತ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸದೆ, ಸಮರ್ಪಕ ನೋಟಿಸ್ ನೀಡದೆ ಏಕಾಏಕಿ ತೆರವುಗೊಳಿಸುತ್ತಿರುವ ರಾಜ್ಯ ಸರ್ಕಾರದ ನಡೆ ಖಂಡನೀಯ ಎಂದು ಆಪ್ ಕಿಡಿಕಾರಿದೆ.
ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಕ್ರಮವನ್ನು ಆಮ್ ಆದ್ಮಿ ಪಕ್ಷ ಕಟು ಮಾತುಗಳಿಂದ ಖಂಡಿಸಿತು.
ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾತನಾಡಿದ ಬೆಂಗಳೂರು ಉಸ್ತುವಾರಿ ಡಾ.ಸತೀಶ್ ಕುಮಾರ್ ಅವರು,ಈಗಾಗಲೇ ರಾಜ್ಯ ಸರ್ಕಾರವು ಸಾವಿರಾರು ಬೀದಿ ವ್ಯಾಪಾರಿಗಳಿಗೆ ಜೀವನೋಪಾಯ, ರಕ್ಷಣೆ ಮತ್ತು ಬೀದಿ ವ್ಯಾಪಾರ ನಿಯಂತ್ರಣ 2014 ರ ಕಾಯ್ದೆ ಅಡಿಯಲ್ಲಿ ಗುರುತಿನ ಚೀಟಿ ಹಾಗೂ ವ್ಯಾಪಾರ ಪರವಾನಗಿ ನೀಡುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ ಎಂದು ಹೇಳಿದರು.
ಸರ್ಕಾರದ ಅನುಮತಿ ಪಡೆದು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳನ್ನು ಯಾವುದೇ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಏಕಾಏಕಿ ತೆರವುಗೊಳಿಸುತ್ತಿರುವುದು ಬಡವರ ವಿರೋಧಿ , ಅನಾಗರಿಕ ಪ್ರವೃತ್ತಿ ಹಾಗೂ ಸಾಮಾಜಿಕ ನ್ಯಾಯದ ಪರಿಕಲ್ಪನೆಗೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಅಂಕಿ-ಅಂಶಗಳ ಪ್ರಕಾರ ರಸ್ತೆ ಅಪಘಾತಗಳಲ್ಲಿ ಪ್ರತಿವರ್ಷ ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಸಚಿವ ಕೃಷ್ಣ ಬೈರೇಗೌಡ ಅವರು ಹೇಳುತ್ತಿದ್ದಾರೆ. ಸಾರ್ವಜನಿಕರ ಜೀವ ರಕ್ಷಣೆ ಸರ್ಕಾರದ ಜವಾಬ್ದಾರಿಯೇ ಸರಿ. ಆದರೆ ಈ ಪರಿಸ್ಥಿತಿ ಇಂದಿನದಲ್ಲ. ಹಲವು ವರ್ಷಗಳಿಂದ ರಸ್ತೆ ಅಪಘಾತಗಳು ನಡೆಯುತ್ತಿವೆ. ಈ ಅವಧಿಯಲ್ಲಿ ಸರ್ಕಾರ ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು, ಪಾದಚಾರಿ ಮಾರ್ಗಗಳನ್ನು ಸುಧಾರಿಸಲು, ಅತಿಕ್ರಮಣವನ್ನು ವೈಜ್ಞಾನಿಕವಾಗಿ ನಿಯಂತ್ರಿಸಲು, ಸಂಚಾರ ವ್ಯವಸ್ಥೆಯನ್ನು ಬಲಪಡಿಸಲು ಹಾಗೂ ಅಪಘಾತ ತಡೆಗಟ್ಟಲು ಯಾವ ಶಾಶ್ವತ ಕ್ರಮಗಳನ್ನು ಕೈಗೊಂಡಿದೆ ಎಂದು ಖಾರವಾಗಿ ಪ್ರಶ್ನಿಸಿದರು.
ಸರ್ಕಾರಗಳ ನಿರ್ಲಜ್ಜ ಧೋರಣೆಯಿಂದ ಒಂದು ಕಡೆ ಸಾವಿರಾರು ಜನ ಅಮಾಯಕರು ಸಾವನ್ನಪ್ಪುತ್ತಿದ್ದರೆ, ಬೀದಿ ಬದಿಯಲ್ಲಿ ಬದುಕುತ್ತಿರುವ ಲಕ್ಷಾಂತರ ಜನ ಇಂದು ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾರೆ. ಅನೇಕ
ವರ್ಷಗಳ ಕಾಲ ನಿರ್ಲಕ್ಷ್ಯ ವಹಿಸಿ, ಈಗ ಏಕಾಏಕಿ ಬೀದಿ ವ್ಯಾಪಾರಿಗಳನ್ನು ಗುರಿಯಾಗಿಸಿಕೊಂಡು ಅವರ ಜೀವನೋಪಾಯವನ್ನು ಕಸಿದುಕೊಳ್ಳುವುದು ನ್ಯಾಯಸಮ್ಮತವೂ ಅಲ್ಲ, ಮಾನವೀಯವೂ ಅಲ್ಲ ಎಂದು ಹೇಳಿದರು.
ಕಾನೂನು ಪಾಲನೆ ಹೆಸರಿನಲ್ಲಿ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಸರ್ಕಾರದ ಈ ನಡೆ ಖಂಡನೀಯವಾಗಿದೆ ಎಂದು ಸತೀಶ್ ಕುಮಾರ್ ಟೀಕಿಸಿದರು.
ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ. ಸದಂ ಮಾತನಾಡಿ, ಕೃಷ್ಣ ಬೈರೇಗೌಡ ಅವರು ಬೃಹತ್ ವಾಣಿಜ್ಯ ಸಂಸ್ಥೆಗಳು ಹಾಗೂ ದೊಡ್ಡ ಮಳಿಗೆಗಳ ಒತ್ತಡಕ್ಕೆ ಮಣಿದು, ಸಣ್ಣಪುಟ್ಟ ಬೀದಿಬದಿ ವ್ಯಾಪಾರಿಗಳ ವಿರುದ್ಧ ಬ್ರಹ್ಮಾಸ್ತ್ರ ಪ್ರಯೋಗಿಸುತ್ತಿದ್ದಾರೆ ಎಂಬ ಭಾವನೆ ಸಾರ್ವಜನಿಕರಲ್ಲಿ ಮೂಡುತ್ತಿದೆ. ಇದು ಕಾಂಗ್ರೆಸ್ ಸರ್ಕಾರದ ಬಡವರ ವಿರೋಧಿ ಹಾಗೂ ಜನವಿರೋಧಿ ಧೋರಣೆಯನ್ನು ಬಯಲಿಗೆಳೆಯುತ್ತಿದೆ ಎಂದು ತಿಳಿಸಿದರು.
ಯಾವುದೇ ಬೀದಿಬದಿ ವ್ಯಾಪಾರಿಯನ್ನು ತೆರವುಗೊಳಿಸುವ ಮೊದಲು ಕಾನೂನುಬದ್ಧ ಪ್ರಕ್ರಿಯೆ ಅನುಸರಿಸಬೇಕು. ಅವರಿಗೆ ಸಮರ್ಪಕ ನೋಟಿಸ್ ನೀಡಬೇಕು. ಪರ್ಯಾಯ ವ್ಯಾಪಾರ ಸ್ಥಳವನ್ನು ಕಲ್ಪಿಸಬೇಕು, ಸ್ಥಳೀಯ ನಾಗರೀಕ ಸಂಘಗಳ, ಸಮಿತಿಗಳ ಶಿಫಾರಸುಗಳನ್ನು ಅಭಿಪ್ರಾಯಗಳನ್ನು ತೆಗೆದುಕೊಳ್ಳಬೇಕು ಹಾಗೂ ಅವರ ಜೀವನೋಪಾಯಕ್ಕೆ ಧಕ್ಕೆಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಬಿಎ ಚುನಾವಣೆಯನ್ನು ಎದುರಿಸಲು ಕಾಂಗ್ರೆಸ್ ಸರ್ಕಾರ ಭಯದ ಭೀತಿಯಿಂದ ಹಿಂದೇಟು ಹಾಕುತ್ತಿರುವುದು ಸ್ಪಷ್ಟವಾಗಿದೆ, ಚುನಾವಣೆಗಳನ್ನು ಸಮಯಕ್ಕೆ ನಡೆಸುವ ಬದಲು ವಿವಿಧ ನೆಪಗಳನ್ನು ಮುಂದಿಟ್ಟು ಮುಂದೂಡುವ ಪ್ರಯತ್ನದ ಹಿಂದೆ ಅಭಿವೃದ್ಧಿಯ ಹೆಸರಿನ ಕೋಟ್ಯಾಂತರ ರೂ.ಗಳನ್ನು ಕೊಳ್ಳೆ ಹೊಡೆಯುವ ಹುನ್ನಾರ ಸ್ಪಷ್ಟವಾಗುತ್ತಿದೆ,ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಕಾಂಗ್ರೆಸ್ ಸರ್ಕಾರ ಮುಂದಿನ ದಿನಗಳಲ್ಲಿ ಜನತಾ ನ್ಯಾಯಾಲಯದಲ್ಲಿ ತಕ್ಕ ಪಾಠವನ್ನು ಕಲಿಯಲಿದೆ ಎಂದು ಜಗದೀಶ್ ವಿ ಸದಂ ಎಚ್ಚರಿಸಿದರು.
