ಯಳಂದೂರು: ಯಳಂದೂರು ತಾಲೂಕಿನ ವಿವಿಧ ಗ್ರಾಮಗಳಲ್ಲಿ 1.55 ಕೋಟಿ ರೂ. ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್. ಕೃಷ್ಣಮೂರ್ತಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಲವು ವರ್ಷಗಳಿಂದಲೂ ಗ್ರಾಮ ಪಂಚಾಯಿತಿ ಕೇಂದ್ರವಾಗಿರುವ ಯರಿಯೂರು ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಸುವರ್ಣಾವತಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಾಣಕ್ಕೆ ಬೇಡಿಕೆ ಇಡಲಾಗಿತ್ತು. ಇದಕ್ಕಾಗಿ ಇಲ್ಲಿ ಸಂಕ ಸೇತುವೆ ನಿರ್ಮಾಣ ಮಾಡಲು 70 ಲಕ್ಷ ರೂ. ಹಣ ಮಂಜೂರು ಮಾಡಿಸಲಾಗಿದ್ದು ಇದಕ್ಕೆ ತಕ್ಷಣ ಚಾಲನೆ ನೀಡಲಾಗುವುದು ಎಂದು ಹೇಳಿದರು.
ಉಪ್ಪಿನ ಮೋಳೆ ಗ್ರಾಮದಲ್ಲಿ ಎರಡು ಕಡೆ ರಸ್ತೆ ಅಭಿವೃದ್ದಿಗೆ ಒಟ್ಟು 50 ಲಕ್ಷ ರೂ. ಅನುದಾನ ಬಿಡುಗಡೆಯಾಗಿದ್ದು ಈ ಕೆಲಸಕ್ಕೂ ಚಾಲನೆ ನೀಡಲಾಗಿದೆ. ಗುಂಬಳ್ಳಿ ಗ್ರಾಮದ ಪರಿಶಿಷ್ಟ ಜಾತಿಯವರು ಇರುವ ಕಡೆ ರಸ್ತೆ ಅಭಿವೃದ್ಧಿಗೆ 10 ಲಕ್ಷ ರೂ. ಹಾಗೂ ಯರಗಂಬಳ್ಳಿ ಗ್ರಾಮದ ರಸ್ತೆ, ವಾಲ್ಮೀಕಿ ಭವನಕ್ಕೆ 25 ಲಕ್ಷ ರೂ. ಹಣ ನೀಡಲಾಗಿದೆ. ಇದರೊಂದಿಗೆ ಇದೇ ಗ್ರಾಮದಲ್ಲಿ ಪಿಎಂಶ್ರೀ ಶಾಲೆಯ ಹೆಚ್ಚುವರಿ ಕೊಠಡಿಗೆ 13 ಲಕ್ಷ ರೂ. ವೆಚ್ಚದ ಕಾಮಗಾರಿಗೂ ಚಾಲನೆ ನೀಡಲಾಗಿದೆ.
ಇದರೊಂದಿಗೆ ಕೃಷ್ಣಾಪುರ ಮಾರ್ಗವಾಗಿ ಗಣಿಗನೂರು ಗ್ರಾಮದ ಮಾರ್ಗಧ ರಸ್ತೆ ಅಭಿವೃದ್ಧಿಗೆ 4 ಕೋಟಿ ರೂ. ಹಣ ಬಿಡುಗಡೆಯಾಗಿದ್ದು ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ, ಈ ಕಾಮಗಾರಿ ಶೀಘ್ರದಲ್ಲೇ ಆರಂಭಗೊಳ್ಳಲಿದೆ., ಇದರೊಂದಿಗೆ ಶಿವಕಳ್ಳಿಯಿಂದ ಕುಣಗಳ್ಳಿ ವರೆಗಿನ ಆಯ್ದ ಭಾಗಗಳ ರಸ್ತೆ ಅಭಿವೃದ್ಧಿಗೆ 5 ಕೋಟಿ ರೂ. ಹಣ ಬಿಡುಗಡೆಯಾಗಿದ್ದು ಈ ಕೆಲಸವೂ ಶೀಘ್ರದಲ್ಲೇ ಆರಂಭಗೊಳ್ಳಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಜಿಪಂ ಮಾಜಿ ಉಪಾಧ್ಯಕ್ಷ ಜೆ.ಯೋಗೇಶ್, ಸಿಪಿಐ ಸುಬ್ರಹ್ಮಣ್ಯ, ಲೋಕೋಪಯೋಗಿ ಇಲಾಖೆಯ ಎಇಇ ಕುಮಾರ್ ಜೆಇ ಜಯಶ್ರೀ ಸೇರಿದಂತೆ ಅನೇಕರು ಹಾಜರಿದ್ದರು.
