ಮೈಸೂರು: ಲಯನ್ಸ್ ಕ್ಲಬ್ ಆಫ್ ಮೈಸೂರು ಅಂಬಾಸಿಡರ್ಸ್ನ 2026–27ನೇ ಸಾಲಿನ ನೂತನ ಅಧ್ಯಕ್ಷರಾಗಿ ಲಯನ್ ಹೆಚ್.ಕೆ. ಪ್ರಸನ್ನ ಅವರು ಅಧಿಕಾರ ಸ್ವೀಕರಿಸಿದರು.
ನಗರದ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಪದಗ್ರಹಣಾಧಿಕಾರಿಯಾಗಿ ಲಯನ್ ಡಾ. ಎನ್. ಕೃಷ್ಣೇಗೌಡ ಅವರು ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿ ಅಧಿಕಾರ ಹಸ್ತಾಂತರ ಮಾಡಿದರು.
ಈ ವೇಳೆ ಡಾ. ಎನ್. ಕೃಷ್ಣೇಗೌಡ ಅವರು ಮಾತನಾಡಿ, ನಾಯಕತ್ವ ಎಂದರೆ ಜವಾಬ್ದಾರಿ ಮತ್ತು ಸೇವೆಯ ಸಮನ್ವಯ, ಸದಸ್ಯರ ಸಹಕಾರದೊಂದಿಗೆ ಕ್ಲಬ್ ಅನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯುವಂತೆ ಕರೆ ನೀಡಿದರು.
ಆರೋಗ್ಯ, ಶಿಕ್ಷಣ, ಪರಿಸರ ಸಂರಕ್ಷಣೆ, ರಕ್ತದಾನ, ನೇತ್ರದಾನ ಜಾಗೃತಿ, ಹಸಿದವರಿಗೆ ಆಹಾರ ವಿತರಣೆ, ಮಹಿಳಾ ಸಬಲೀಕರಣ ಹಾಗೂ ಯುವಜನರ ವ್ಯಕ್ತಿತ್ವ ವಿಕಸನದಂತಹ ಸೇವಾ ಕಾರ್ಯಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಹಮ್ಮಿಕೊಳ್ಳುವಂತೆ ಸಲಹೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಎರಡನೇ ಉಪರಾಜ್ಯಪಾಲ ಲಯನ್ ಎಂ. ಸಿದ್ದೇಗೌಡ ಅವರು ಮಾತನಾಡಿ, ಲಯನ್ಸ್ ಸಂಸ್ಥೆಯ ಧ್ಯೇಯವಾದ ನಾವು ಸೇವೆ ಸಲ್ಲಿಸುತ್ತೇವೆ ಎಂಬ ಆದರ್ಶವನ್ನು ಪ್ರತಿಯೊಬ್ಬ ಸದಸ್ಯರೂ ಜೀವನದಲ್ಲಿ ಅಳವಡಿಸಿಕೊಂಡು ಸಮಾಜಮುಖಿ ಸೇವೆಯಲ್ಲಿ ತೊಡಗಬೇಕು ಎಂದು ಕರೆ ನೀಡಿದರು.
ನೂತನ ಅಧ್ಯಕ್ಷ ಲಯನ್ ಹೆಚ್.ಕೆ. ಪ್ರಸನ್ನ ಅವರು ಮಾತನಾಡಿ, ಕ್ಲಬ್ನ ಎಲ್ಲ ಸದಸ್ಯರ ಸಹಕಾರದೊಂದಿಗೆ ವರ್ಷಪೂರ್ತಿ ಅರ್ಥಪೂರ್ಣ ಹಾಗೂ ಜನೋಪಯೋಗಿ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಭರವಸೆ ನೀಡಿದರು.
ಗ್ರಾಮೀಣ ಪ್ರದೇಶ ಹಾಗೂ ಅಗತ್ಯವಿರುವವರಿಗೆ ನೆರವು ನೀಡುವ ವಿವಿಧ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.
ನಿರ್ಗಮಿತ ಅಧ್ಯಕ್ಷ ಲಯನ್ ಡಾ. ಆರ್. ಡಿ. ಕುಮಾರ್ ಅವರನ್ನು ಅವರ ಯಶಸ್ವಿ ನಾಯಕತ್ವ ಹಾಗೂ ಸಮಾಜಮುಖಿ ಸೇವೆಗಾಗಿ ಆತ್ಮೀಯವಾಗಿ ಸನ್ಮಾನಿಸಿ ಅಭಿನಂದಿಸಲಾಯಿತು.
ಅವರ ಅಧಿಕಾರಾವಧಿಯಲ್ಲಿ ಲಯನ್ಸ್ ಜಿಲ್ಲೆಯಲ್ಲಿ ಮೂರನೇ ಸ್ಥಾನವನ್ನು ಪಡೆದು ಹಾಗೂ ಸಂಸ್ಥೆ ಕೈಗೊಂಡ ಸೇವಾ ಕಾರ್ಯಗಳನ್ನು ಪ್ರಶಂಸಿಸಿದರು.
ಈ ಸಮಾರಂಭದ ಅಂಗವಾಗಿ ಸೇವಾ ಕಾರ್ಯವನ್ನು ಹಮ್ಮಿಕೊಂಡಿದ್ದು, ಆರ್ಥಿಕವಾಗಿ ಮಹಿಳೆಯರು ಸಬಲರಾಗಬೇಕೆಂಬ ಹಿನ್ನೆಲೆಯಲ್ಲಿ ನಾಲ್ಕು ಹೊಲಿಗೆ ಯಂತ್ರಗಳನ್ನು ನೀಡಲಾಯಿತು.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಸಂಪುಟ ಕಾರ್ಯದರ್ಶಿ ಲಯನ್ ಟಿ.ಎಚ್. ವೆಂಕಟೇಶ್ ,ಜಿಲ್ಲಾ ಸಂಪುಟ ಖಜಾಂಜಿ ಲಯನ್ ಎ.ಪಿ .ಭರತೇಶ್, ಪ್ರಾಂತೀಯ ಅಧ್ಯಕ್ಷರಾದ ಲಯನ್ ಜ್ಯೋತಿ ಮಂಜುನಾಥ್, ವಲಯ ಅಧ್ಯಕ್ಷರಾದ ಲಯನ್ ಪಿ. ಶಿವಾಜಿ ರಾವ್, ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷರಾದ ಲಯನ್ ಎಂ ಶಿವಕುಮಾರ್, ಕಾರ್ಯದರ್ಶಿ ಲಯನ್ ಡಾ. ಜಿ.ಕಿಶೋರ್, ಖಜಾಂಚಿ ಲಯನ್ ಪಿ. ಮಲ್ಲಿಕಾರ್ಜುನಪ್ಪ , ಲಯನ್ ಕೆ.ಟಿ ವಿಷ್ಣು, 317 G ಜಿಲ್ಲಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಲಯನ್ ಸಿ. ಆರ್ ದಿನೇಶ್ ಉಪಸ್ಥಿತರಿದ್ದರು.
