ಮೈಸೂರು: ಮೈಸೂರು ಜಿಲ್ಲೆಯಲ್ಲಿ ಪೂರ್ವ ಮುಂಗಾರಿನಲ್ಲಿ ಮಳೆ ಕೊರತೆಯಾಗಿದ್ದು, ಮುಂದಿನ ದಿನಗಳಲ್ಲಿ ಹವಾಮಾನ/ಮಳೆಯ ಆಧಾರದ ಮೇಲೆ ರೈತರಿಗೆ ಬೆಳೆ ಬೆಳೆಯಲು ಸಲಹೆ ನೀಡುವಂತೆ ಮೈಸೂರು-
ಚಾಮರಾಜನಗರ ಜಿಲ್ಲೆಗಳ ಪ್ರಕೃತಿ ವಿಕೋಪ ಮೇಲುಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಸೂಚಿಸಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕುಡಿಯುವ ನೀರು ಹಾಗೂ ಮುಂಗಾರು ಬಿತ್ತನೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಮುಂದಿನ ತಿಂಗಳಲ್ಲಿ ಮಳೆ ಕೊರತೆ ಉಂಟಾಗುವ ಸಾಧ್ಯತೆ ಇರುವುದರಿಂದ ರೈತರು ನೀರಿನ ಬೇಡಿಕೆ ಹೆಚ್ಚಿರುವ ಬೆಳೆಗಳ ಬದಲು ಕಡಿಮೆ ನೀರಿನಲ್ಲಿ ಬೆಳೆಯಬಹುದಾದ ಜೋಳ, ರಾಗಿ, ಕಾಳುಗಳನ್ನು ಬೆಳೆಯಲು ಪ್ರೋತ್ಸಾಹಿಸಿ ಜಾಗೃತಿ ಮೂಡಿಸಬೇಕು ಎಂದು ಸಲಹೆ ನೀಡಿದರು.
ಹೆಚ್.ಡಿ.ಕೋಟೆ, ಪಿರಿಯಾಪಟ್ಟಣ ಭಾಗದಲ್ಲಿ ಜೋಳದ ಬೆಳೆಯಲ್ಲಿ ಬಿಳಿಸುಳಿ ರೋಗ ಕಂಡುಬಂದಿದ್ದು, ಔಷಧೋಪಚಾರ ಹಾಗೂ ಬೆಳೆ ಪರಿವರ್ತನೆ ಕುರಿತು ಜಾಗೃತಿ ಮೂಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಮಳೆಯ ಕೊರತೆಯ ಹಿನ್ನೆಲೆಯಲ್ಲಿ ಹೊಸ ಬೋರ್ವೆಲ್, ನೀರಿನ ಪೈಪ್ಲೈನ್ ಕಾಮಗಾರಿಗಳಿಗೆ ಅರಣ್ಯ ಇಲಾಖೆ ವಿಳಂಬ ಮಾಡದೆ ನಿಯಮಾನುಸಾರ ಅನುಮತಿ ನೀಡಬೇಕು. ಅಗ್ನಿಶಾಮಕ ಹಾಗೂ ಅರಣ್ಯ ಇಲಾಖೆ ಅಗ್ನಿ ಅವಘಡಗಳಿಗೆ ಮುನ್ನೆಚ್ಚರಿಕೆ ಕ್ರಮ ಅನುಸರಿಸಬೇಕು ಎಂದು ತಿಳಿಸಿದರು.
ಕುಡಿಯುವ ನೀರಿನ ಸಮಸ್ಯೆ ಬಗ್ಗೆ ವಾಸ್ತವ ಮಾಹಿತಿ ನೀಡಬೇಕು. ಅಧಿಕಾರಿಗಳು ಸಮಸ್ಯೆ ಇರುವ ಸ್ಥಳಗಳಿಗೆ ಭೇಟಿ ನೀಡಬೇಕು. ಬೋರ್ವೆಲ್ ಇಲ್ಲದ ಕಡೆ ಖಾಸಗಿ ಬೋರ್ವೆಲ್, ಟ್ಯಾಂಕರ್ ವ್ಯವಸ್ಥೆ ಮಾಡಬೇಕು. ಆರ್ಡಿಪಿಆರ್ ಇಲಾಖೆಯಿಂದ ಬೋರ್ವೆಲ್ ಕೊರೆದ ನಂತರ ಚೆಸ್ಕಾಂ ವತಿಯಿಂದ ವಿದ್ಯುತ್ ಸಂಪರ್ಕ ಕೊಡಿಸಿ ಸಾರ್ವಜನಿಕರಿಗೆ ನೀರು ನೀಡಿದ ನಂತರವೇ ಕಾಮಗಾರಿ ಪೂರ್ಣವೆಂದು ಪರಿಗಣಿಸಬೇಕು. ಹೊಸ ಬೋರ್ವೆಲ್, ಖಾಸಗಿ ಟ್ಯಾಂಕರ್ ನೀರಿನ ಸ್ಯಾಂಪಲ್ ಪರಿಶೀಲಿಸಬೇಕು ಎಂದು ನಿರ್ದೇಶಿಸಿದರು.
ಚಾಮರಾಜನಗರ ಜಿಲ್ಲೆಯಲ್ಲಿ ಅಮೃತ್ 2.0 ಯೋಜನೆಯಡಿ ಕಾಮಗಾರಿ ವೇಗವಾಗಿ ಮುಗಿಸಿ ನೀರೊದಗಿಸಲು ಸೂಚಿಸಿದರು. ಮೈಸೂರು ನಗರದಲ್ಲಿ ವಾರ್ಡುವಾರು ಕುಡಿಯುವ ನೀರಿನ ಸಮಸ್ಯೆಗಳ ಪಟ್ಟಿಯನ್ನು ಮಹಾನಗರ ಪಾಲಿಕೆ ನೀಡಬೇಕು. ಓವರ್ಹೆಡ್ ಟ್ಯಾಂಕ್ಗಳ ಪಂಪಿಂಗ್ ಸೇರಿದಂತೆ ವಿದ್ಯುದ್ದೀಕರಣ ಕೆಲಸಗಳನ್ನು ದಿನಾಂಕ ನಿಗದಿಪಡಿಸಿ ಪೂರ್ಣಗೊಳಿಸಬೇಕು. ಕುಡಿಯುವ ನೀರಿಗೆ ಮೊದಲ ಆದ್ಯತೆ ನೀಡಬೇಕು ಎಂದು ಡಾ.ಯತೀಂದ್ರ ಹೇಳಿದರು.
ಲೋಕಸಭಾ ಸದಸ್ಯ ಸುನೀಲ್ ಬೋಸ್ ಮಾತನಾಡಿ, ಹನೂರು ಭಾಗ ಹಾಗೂ ಅರಣ್ಯ ಪ್ರದೇಶದ ಜನವಸತಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಶುದ್ಧ ನೀರು ಒದಗಿಸಬೇಕು ಎಂದು ಸೂಚಿಸಿದರು
ಶಾಸಕ ತನ್ವೀರ್ ಸೇಠ್, ಬೋರ್ವೆಲ್ಗಳಿಗೆ ಚೆಸ್ಕಾಂ ವತಿಯಿಂದ ಶೀಘ್ರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಹೇಳಿದರು.
ಶಾಸಕ ಕೆ. ಹರೀಶ್ ಗೌಡ ಮಾತನಾಡಿ, ಮಹಾನಗರ ಪಾಲಿಕೆ ಅಧಿಕಾರಿಗಳು ಸಾರ್ವಜನಿಕರೊಂದಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕು. ಕಾಮಗಾರಿ ವೇಳೆ ಪೈಪ್ಲೈನ್ಗೆ ಹಾನಿಯಾಗಿ ನೀರು ಪೋಲಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಮಾತನಾಡಿ, ಬರ ಘೋಷಣೆಯಾಗದ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಅನುದಾನ ಬಳಸಲಾಗುತ್ತಿದೆ. ಮೈಸೂರು ನಗರ ವ್ಯಾಪ್ತಿಯ ಕುಡಿಯುವ ನೀರಿನ ಸಮಸ್ಯೆ ಕುರಿತು ಶಾಸಕರ ಅಧ್ಯಕ್ಷತೆಯಲ್ಲಿ ಪ್ರತ್ಯೇಕ ಸಭೆ ನಡೆಸುತ್ತೇವೆ ಎಂದು ತಿಳಿಸಿದರು
ಸಭೆಯಲ್ಲಿ ಶಾಸಕರಾದ ರವಿಶಂಕರ್, ಶ್ರೀವತ್ಸ, ಗಣೇಶ್ ಪ್ರಸಾದ್, ಅನಿಲ್ ಚಿಕ್ಕಮಾಧು, ದರ್ಶನ್ ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಡಾ. ತಿಮ್ಮಯ್ಯ, ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್, ಜಿಲ್ಲಾ ಪಂಚಾಯತ್ ಸಿಇಒ ಮೋನಾ ರೋತ್, ಎಸ್ಪಿ ಮುತ್ತುರಾಜ್, ಮೈಸೂರು ಜಿಲ್ಲಾ ಪಂಚಾಯತ್ ಸಿಇಒ ಯುಕೇಶ್ ಕುಮಾರ್, ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಸೇರಿದಂತೆ ಇತರ ಅಧಿಕಾರಿಗಳು ಉಪಸ್ಥಿತರಿದ್ದರು.
