ಬೆಂಗಳೂರು: ನೂತನ ಮುಖ್ಯಮಂತ್ರಿಗಳು ಸಂಭ್ರಮಾಚರಣೆ ಬಿಟ್ಟು ರಾಜ್ಯದ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ದುರ್ವ್ಯವಸ್ಥೆ ಯನ್ನು ಮೊದಲು ಸರಿಪಡಿಸಲಿ ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.
ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗಿದ್ದರೂ ಸಾವಿರಾರು ವಿದ್ಯಾರ್ಥಿಗಳಿಗೆ ಕುಳಿತುಕೊಳ್ಳಲು ಕೊಠಡಿ, ಶೌಚಾಲಯ, ಬೆಂಚ್-ಡೆಸ್ಕ್ಗಳು ಇಲ್ಲದಿರುವುದು ಅತ್ಯಂತ ದುರದೃಷ್ಟಕರ ಹಾಗೂ ಖಂಡನೀಯ ಸಂಗತಿ
ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಖಜಾಂಚಿ ಪ್ರಕಾಶ್ ನೆಡುಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರ್ಕಾರವು ನಲಿ-ಕಲಿ ಪದ್ಧತಿಯಿಂದ ದ್ವಿಭಾಷಾ ತರಗತಿಗಳ ವ್ಯವಸ್ಥೆಗೆ ಬದಲಾವಣೆ ಮಾಡಿರುವುದಾಗಿ ದೊಡ್ಡ ಪ್ರಮಾಣದಲ್ಲಿ ಪ್ರಚಾರ ಮಾಡಿಕೊಂಡಿದೆ, ಅದಕ್ಕೆ ಅಗತ್ಯವಾದ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ದೂರಿದ್ದಾರೆ.
ಅನೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಇನ್ನೂ ನೆಲದ ಮೇಲೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಇದೆ,ಇದು ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಸ್ಪಷ್ಟ ಸಾಕ್ಷಿಯಾಗಿದೆ. ಕೂಡಲೇ ನೂತನ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಮ್ಮ ಸಂಭ್ರಮಾಚರಣೆಯನ್ನು ಬಿಟ್ಟು ರಾಜ್ಯದ ಎಲ್ಲ ಜಿಲ್ಲೆಗಳ ಶಾಲೆಗಳಿಗೆ ಭೇಟಿ ನೀಡಿ ಅಲ್ಲಿನ ಮೂಲ ವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಬೇಕು ಎಂದು ಪ್ರಕಾಶ್ ನೆಡುಂಗಡಿ ಒತ್ತಾಯಿಸಿದ್ದಾರೆ.
ಶಾಲೆಗಳು ಖಾಸಗಿ ದಾನಿಗಳ ಬಳಿ ನೆರವು ಕೇಳುವ ಪರಿಸ್ಥಿತಿ ನಿರ್ಮಾಣವಾಗಿರುವುದು ನಾಚಿಕೆಗೇಡಿನ ಸಂಗತಿ. ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮೀಸಲಿಟ್ಟಿರುವ ಅನುದಾನ ಎಲ್ಲಿಗೆ ಹೋಗುತ್ತಿದೆ ಎಂಬ ಪ್ರಶ್ನೆಗೆ ಸರ್ಕಾರ ಉತ್ತರ ನೀಡಬೇಕು ಒತ್ತಾಯಿಸಿದ್ದಾರೆ.
ರಾಜ್ಯ ಸರ್ಕಾರ ಕೂಡಲೇ
ಎಲ್ಲಾ ಸರ್ಕಾರಿ ಶಾಲೆಗಳಿಗೆ ಅಗತ್ಯವಿರುವ ಬೆಂಚ್-ಡೆಸ್ಕ್ಗಳನ್ನು ತುರ್ತು ಆಧಾರದ ಮೇಲೆ ಪೂರೈಸಬೇಕು.
ಮೂಲಸೌಕರ್ಯಗಳ ಕೊರತೆಯಿರುವ ಶಾಲೆಗಳ ಜಿಲ್ಲಾವಾರು ಪಟ್ಟಿಯನ್ನು ಸಾರ್ವಜನಿಕಗೊಳಿಸಬೇಕು.
ಶಿಕ್ಷಣ ಇಲಾಖೆಯ ನಿರ್ಲಕ್ಷ್ಯಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಸರ್ಕಾರಿ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಅನುದಾನ ಘೋಷಿಸಬೇಕು ಎಂದು ಪ್ರಕಾಶ್ ನೆಡುಂಗಡಿ
ಆಗ್ರಹಿಸಿದ್ದಾರೆ.
ರಾಜ್ಯದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಮತ್ತು ಗೌರವಯುತ ಕಲಿಕಾ ವಾತಾವರಣ ಒದಗಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
