ಬೆಂಗಳೂರು: ಕೇರಳ ನೂತನ ಮುಖ್ಯಮಂತ್ರಿ ವಿ.ಡಿ.ಸತೀಸನ್ ಅವರು ತಮ್ಮ ರಾಜ್ಯದ ಆರ್ಥಿಕ ಸ್ಥಿತಿಗತಿಯ ನೈಜ ಚಿತ್ರಣವನ್ನು ಜನರ ಮುಂದಿಡುವ ಉದ್ದೇಶದಿಂದ ಹಣಕಾಸು ಶ್ವೇತಪತ್ರ ಮಂಡಿಸಿರುವುದು ಸ್ವಾಗತಾರ್ಹ ಎಂದು ಆರ್.ಅಶೋಕ್ ತಿಳಿಸಿದ್ದಾರೆ.
ಕೇರಳ ಮಾದರಿಯಲ್ಲಿ ಕರ್ನಾಟಕದ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೂ ಕೂಡ ರಾಜ್ಯದ ಹಣಕಾಸಿನ ಸ್ಥಿತಿಗತಿಯ ಕುರಿತು ಶ್ವೇತಪತ್ರ ಮಂಡಿಸಬೇಕು ಎಂದು ಒತ್ತಾಯಿಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಬಿಟ್ಟು ಹೋಗಿರುವ ಆರ್ಥಿಕ ಬಳುವಳಿ ಏನು ಎಂಬುದನ್ನು ತಿಳಿದುಕೊಳ್ಳುವ ಹಕ್ಕು ರಾಜ್ಯದ ಜನರಿಗಿದೆ ಎಂದು ವ್ಯಂಗ್ಯವಾಗಿ ಟ್ವಿಟ್ ಮಾಡಿದ್ದಾರೆ.
ರಾಜ್ಯದ ಸಾಲ ಎಷ್ಟು ಹೆಚ್ಚಾಗಿದೆ, ಸರ್ಕಾರದ ಖಜಾನೆಯ ನಿಜವಾದ ಸ್ಥಿತಿಗತಿ ಏನು, ಅವೈಜ್ಞಾನಿಕ ಯೋಜನೆಗಳು, ಮತಬ್ಯಾಂಕ್ ರಾಜಕಾರಣ ಮತ್ತು ದುಂದುವೆಚ್ಚಗಳಿಂದ ರಾಜ್ಯದ ಆರ್ಥಿಕತೆಗೆ ಎಷ್ಟು ಹಾನಿಯಾಗಿದೆ, ಮುಂದಿನ ಪೀಳಿಗೆಯ ಹೆಗಲ ಮೇಲೆ ಎಷ್ಟು ಸಾಲದ ಹೊರೆ ಹಾಕಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ಮುಚ್ಚಿಡಲು, ಮರೆಮಾಚಲು ಏನೂ ಇಲ್ಲವಾದರೆ ಕಾಂಗ್ರೆಸ್ ಸರ್ಕಾರ ತಕ್ಷಣ ವಿಧಾನಸಭೆಯಲ್ಲಿ ಹಣಕಾಸು ಶ್ವೇತಪತ್ರ ಮಂಡಿಸಲಿ, ಶ್ವೇತಪತ್ರವನ್ನು ಜನರ ಮುಂದಿಡಿ,ಸತ್ಯವನ್ನು ಹೊರಗೆ ಬರಲು ಬಿಡಿ ಎಂದು ಅಶೋಕ್ ಹೇಳಿದ್ದಾರೆ.
ಕರ್ನಾಟಕಕ್ಕೆ ಪಾರದರ್ಶಕತೆ ಬೇಕು, ಕನ್ನಡಿಗರಿಗೆ ಉತ್ತರದಾಯಿತ್ವ ಬೇಕು, ಎಲ್ಲಕ್ಕಿಂತ ಮುಖ್ಯವಾಗಿ, ಸಿದ್ದರಾಮಯ್ಯ ಸರ್ಕಾರ ರಾಜ್ಯಕ್ಕೆ ಬಿಟ್ಟುಹೋಗಿರುವ ನಿಜವಾದ ಸಾಕ್ಷಿಗುಡ್ಡೆ ಏನು ಎಂಬುದು ಜನರಿಗೆ ತಿಳಿಯಬೇಕು ಎಂದು ತಿಳಿಸಿದ್ದಾರೆ.
