ಹುಣಸೂರು: ಬ್ಯಾಂಕಿಗೆ ಹಣ ಕಟ್ಟಲು ಹೋಗುತ್ತಿದ್ದ ದಲಿತ ಮಹಿಳಾ ಮುಖಂಡೆಯ ಮೇಲೆ ಹುಣಸೂರು ತಾಲೂಕು ಕಟ್ಟೆಮಳಲವಾಡಿಯ ಕೆಲವರು ಹಲ್ಲೆ ಮಾಡಿ ಮೊಬೈಲ್ ಒಡೆದು ಹಾಕಿದ್ದು ಈಗ ಆಕೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಟ್ಟೆಮಳಲವಾಡಿ ದಲಿತ ಮಹಿಳಾ ಮುಖಂಡರಾದ ಮಹದೇವಮ್ಮ ಅವರು ಸ್ವಸಹಾಯ ಸಂಘದ ಹಣವನ್ನು ಸಂಗ್ರಹಿಸಿ ಬ್ಯಾಂಕಿಗೆ ಕಟ್ಟಲು ಹೋಗುತ್ತಿದ್ದಾಗ ಕಟ್ಟೆಮಳಲವಾಡಿ ಗರಡಿ ಬೀದಿಯಲ್ಲಿ ಒಬ್ಬ ಮಹಿಳೆ ಸೇರಿ ಒಂದಿಬ್ಬರು ಪುರುಷರು ಏಕಾಏಕಿ ಹಿಂದಿನಿಂದ ಬಂದು ಹಲ್ಲೆ ಮಾಡಿದ್ದಾರೆ.
ನನ್ನ ಮೊಬೈಲನ್ನು ಕಿತ್ತು ಒಡೆದು ಹಾಕಿ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವಮಾನ ಮಾಡಿದ್ದಾರೆ ಎಂದು ಮಹದೇವಮ್ಮ ವರ್ಷಿಣಿ ನ್ಯೂಸ್ ವೆಬ್ ಪೋರ್ಟಲ್ ಗೆ ಮಾಹಿತಿ ನೀಡಿದ್ದಾರೆ.
ನಾನು ಹುಣಸೂರು ಪೊಲೀಸರಿಗೆ ದೂರು ನೀಡಿದ್ದೇನೆ ಆದರೆ ಎಫ್ ಐ ಆರ್ ಆಗಿದೆಯೋ ಇಲ್ಲವೋ ಗೊತ್ತಿಲ್ಲ. ನನಗೆ ಜೀವ ಬೆದರಿಕೆ ಇದೆ,ರಕ್ಷಣೆ ಇಲ್ಲದಂತಾಗಿದೆ,ನನಗೆ ಯಾವುದೇ ತೊಂದರೆ ಆದರೂ ಅಧಿಕಾರಿಗಳೇ ಹೊಣೆಯಾಗಬೇಕಾಗುತ್ತದೆ ಎಂದು ಆಕೆ ಹೇಳಿದ್ದಾರೆ.
ಈಗ ಆಕೆ ಹುಣಸೂರಿನ ಡಿ ದೇವರಾಜ ಅರಸು ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
