ಮೈಸೂರು: ಅಬಕಾರಿ ಇಲಾಖೆ ಅಧಿಕಾರಿಗಳು ಮೈಸೂರಿನ ಕೂರ್ಗಳ್ಳಿಯ ಕೆ.ಎಸ್.ಬಿ.ಸಿ.ಎಲ್ ಮೈಸೂರು-1ಲಿಕ್ಕರ್ ಡಿಪೋದಲ್ಲಿ ಮಾರಾಟವಾಗದೇ ದಾಸ್ತಾನು ಉಳಿದಿದ್ದ ಅಪಾರ ಪ್ರಮಾಣದ ಮದ್ಯ ಮತ್ತು ಬಿಯರ್ ನಾಶಪಡಿಸಿದ್ದಾರೆ.
ಮೈಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಹೆಚ್.ಕೆ. ರಮೇಶ್ ನೇತೃತ್ವದಲ್ಲಿ ನಾಶ ಪಡಿಸಲಾಯಿತು.
ಮೈಸೂರು ನಗರ ಜಿಲ್ಲೆ ಅಬಕಾರಿ ಉಪ ಆಯುಕ್ತರ ಆದೇಶದ ಮೇರೆಗೆ, ಕೆ.ಎಸ್.ಬಿ.ಸಿ.ಎಲ್ ಡಿಪೋ ವ್ಯವಸ್ಥಾಪಕರು, ಅಬಕಾರಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಮ್ಮುಖದಲ್ಲಿ ದಾಸ್ತಾನು ನಾಶಪಡಿಸಲಾಯಿತು.
ಡಿಪೋದಲ್ಲಿ ಮಾರಾಟವಾಗದೇ ಉಳಿದಿದ್ದ ಒಟ್ಟು 1,35,000 ಲೀಟರ್ ಮದ್ಯ ಹಾಗೂ 11,93,460 ಲೀಟರ್ ಬಿಯರ್ ಅನ್ನು ನಿಯಮಾನುಸಾರ ನಾಶಪಡಿಸಲಾಗಿದೆ.
ಈ ಕಾರ್ಯಾಚರಣೆಯ ಸಂಪೂರ್ಣ ಛಾಯಾಚಿತ್ರ ಮತ್ತು ವಿಡಿಯೋ ದಾಖಲೀಕರಣ ಮಾಡಲಾಗಿದೆ ಎಂದು ಅಬಕಾರಿ ಇಲಾಖೆ ತಿಳಿಸಿದೆ. ಮಾರಾಟ ಅವಧಿ ಮುಗಿದ ಹಾಗೂ ಗುಣಮಟ್ಟ ಕಾಯ್ದುಕೊಳ್ಳದ ದಾಸ್ತಾನನ್ನು ನಿಯಮದಂತೆ ವಿಲೇವಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
