ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ತುಮಕೂರಿನಲ್ಲಿ ನಡೆದ ಸಾಧನಾ ಸಮಾವೇಶದಲ್ಲಿ ಕರ್ನಾಟಕವನ್ನು ನಂ.1ಮಾಡಿದ್ದೇವೆ ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದೀರಲ್ಲಾ
ಹೌದು, ನಿಮ್ಮ ಆಡಳಿತದಲ್ಲಿ ಕರ್ನಾಟಕ ನಂ.1 ಆಗಿದೆ, ಆದರೆ ಅಭಿವೃದ್ಧಿಯಲ್ಲಿ ಅಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದ್ದಾರೆ.
ಭ್ರಷ್ಟಾಚಾರದಲ್ಲಿ, ಬೆಲೆ ಏರಿಕೆಯಲ್ಲಿ, ರೈತರ ಕಣ್ಣೀರಿನಲ್ಲಿ, ಯುವಕರ ನಿರಾಶೆಯಲ್ಲಿ ಮತ್ತು ರಾಜ್ಯವನ್ನು ಸಾಲದ ಸುಳಿಗೆ ತಳ್ಳುವುದರಲ್ಲಿ ನೀವು ನಂ.1 ಆಗಿದ್ದೀರಿ ಎಂದು ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ನಿಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಬರೋಬ್ಬರಿ 5,394 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ದೇಶದಲ್ಲಿ ರೈತರ ಆತ್ಮಹತ್ಯೆ ಪ್ರಮಾಣ ಕಡಿಮೆಯಾಗುತ್ತಿದ್ದರೆ, ಕರ್ನಾಟಕದಲ್ಲಿ ಮಾತ್ರ ಶೇ 22 ಕ್ಕೂ ಹೆಚ್ಚು ಏರಿಕೆಯಾಗಿದೆ.
ರೈತನ ಬದುಕು ಉಳಿಸುವ ಬದಲು, ಅವನ ಬದುಕಿನ ಆಶೆಯನ್ನೇ ಕೊಂದ ಸರ್ಕಾರ ನಿಮ್ಮದು ಎಂದು ಕಿಡಿಕಾರಿದ್ದಾರೆ.
ಮುಡಾ ಹಗರಣದಲ್ಲಿ ತಮ್ಮ ಹೆಸರು ಕೇಳಿಬಂದಿದೆ. ತಮ್ಮ ಪತ್ನಿಯವರ ಹೆಸರಿನಲ್ಲಿದ್ದ 14 ಸೈಟುಗಳನ್ನು ವಾಪಸ್ಸು ಕೊಡುವ ಮೂಲಕ ಪರೋಕ್ಷವಾಗಿ ತಪ್ಪೊಪ್ಪಿಕೊಂಡಿದ್ದೀರಿ. ನಿಮ್ಮ ಅತ್ಯಾಪ್ತರ 100 ಕೋಟಿ ಮೌಲ್ಯದ ಆಸ್ತಿಯನ್ನು ಇಡಿ ಜಪ್ತಿ ಮಾಡಿದೆ.ಸಿಬಿಐ ತನಿಖೆ ತಪ್ಪಿಸಲು ಕನ್ನಡಿಗರ ತೆರಿಗೆ ಹಣದಲ್ಲಿ ಕೋಟ್ಯಂತರ ರೂಪಾಯಿ ವಕೀಲರ ಫೀಸ್ ಪಾವತಿಸಿದ್ದೀರಿ
ರಾಜ್ಯ ಸರ್ಕಾರದ ಬೊಕ್ಕಸದ ಹಣ ನಿಮ್ಮ ಖಾಸಗಿ ಆಸ್ತಿನಾ ಎಂದು ಅಶೋಕ್ ಖಾರವಾಗಿ ಪ್ರಶ್ನಿಸಿದ್ದಾರೆ.
ವಾಲ್ಮೀಕಿ ಹಗರಣ, ಕೆಐಡಿಬಿ ಹಗರಣ, ಕೆ ಪಿ ಎಸ್ ಸಿ ಹಗರಣ, ನಕಲಿ ಚೆಕ್ ಹಗರಣ,
ನಿಮ್ಮ ಸರ್ಕಾರ ಆಡಳಿತ ನಡೆಸುತ್ತಿದೆಯೋ ಅಥವಾ ಹಗರಣಗಳ ಕಾರ್ಖಾನೆ ನಡೆಸುತ್ತಿದೆಯೋ ಎಂದು ಲೇವಡಿ ಮಾಡಿದ್ದಾರೆ.
ಗ್ಯಾರಂಟಿ ಹೆಸರಿನಲ್ಲಿ ಲೂಟಿ – ಬೆಲೆ ಏರಿಕೆಯಲ್ಲಿ ನಂ.1
ಒಂದು ಕೈಯಲ್ಲಿ ಗ್ಯಾರಂಟಿ ಕೊಟ್ಟು, ಇನ್ನೊಂದು ಕೈಯಲ್ಲಿ ಕನ್ನಡಿಗರ ಜೇಬಿಗೆ ಕತ್ತರಿ ಹಾಕುತ್ತಿದ್ದೀರಿ ಎಂದು ಗುಡುಗಿದ್ದಾರೆ.
ನೀವು ರೌಡಿಸಂ ರಾಜಕಾರಣದಲ್ಲಿ ನಂ.1
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರ ನೆಟ್ ಬೋಲ್ಟ್ ಟೈಟ್ ಮಾಡ್ತೀವಿ ಹರಿದಾಕಿದ್ದೀರಾ ಎಂಬೆಲ್ಲಾ ಭಾಷೆ ಕೇಳಿದರೆ ರಾಜ್ಯದಲ್ಲಿ ಸರ್ಕಾರ ಇದೆಯೋ ಅಥವಾ ರೌಡಿಗಳ ಗ್ಯಾಂಗ್ ಮಾಫಿಯಾ ಇದೆಯೋ ಎಂಬ ಅನುಮಾನ ಬರುತ್ತದೆ ಎಂದು ಆರ್.ಅಶೋಕ್ ಲೇವಡಿ ಮಾಡಿದ್ದಾರೆ.
ನಿನ್ನೆ ನಡೆದಿದ್ದು ಸಾಧನಾ ಸಮಾವೇಶ ಅಲ್ಲ
ಅದು ಕಾಂಗ್ರೆಸ್ ಸರ್ಕಾರದ ವೈಫಲ್ಯೋತ್ಸವ
ಇದು ಕನ್ನಡಿಗರ ನಂಬಿಕೆಗೆ ಬಗೆದ ದ್ರೋಹದ ಸಾರ್ವಜನಿಕ ಪ್ರದರ್ಶನ ನಿಮ್ಮ ಅಹಂಕಾರ, ದಬ್ಬಾಳಿಕೆ ಮತ್ತು ಭ್ರಷ್ಟಾಚಾರಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ನೀಡುವ ದಿನ ದೂರವಿಲ್ಲ ಎಂದು ಪ್ರತಿಪಕ್ಷ ನಾಯಕ ಎಚ್ಚರಿಸಿದ್ದಾರೆ.
