ಮೈಸೂರು: 55 ಲಕ್ಷ ರೂ. ಸಾಲದ ಹಣ ಕೇಳಲು ಹೋದ ವ್ಯಕ್ತಿ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್. ವಿಶ್ವನಾಥ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾಂಗ್ರೆಸ್ ಮುಖಂಡ ಕೋಟೆಹುಂಡಿ ಮಹದೇವು ನೀಡಿದ ದೂರಿನ ಆದಾರದಲ್ಲಿ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣ ದಾಖಲಾಗಿದೆ.
2013ರಲ್ಲಿ ವಿಶ್ವನಾಥ್ ಸಂಸದರಾಗಿದ್ದಾಗ ಎಂ.ಟಿ.ಬಿ. ನಾಗರಾಜ್ ಮೂಲಕ ವಿಶ್ವನಾಥ್ ಮತ್ತು ಪುತ್ರ ಅಮಿತ್ ದೇವರಹಟ್ಟಿಗೆ ಮಹದೇವು 55 ಲಕ್ಷ ರೂ. ಸಾಲ ನೀಡಿದ್ದರು. ಆದರೆ ಹಣ ವಾಪಸ್ ನೀಡದೆ ಸತಾಯಿಸುತ್ತಿದ್ದರು ಎಂಬುದಾಗಿ ಆರೋಪಿಸಲಾಗಿದೆ.
ಫೆಬ್ರವರಿ 2026ರಲ್ಲಿ ಜಲದರ್ಶಿನಿಯಲ್ಲಿದ್ದ ವಿಶ್ವನಾಥ್ ಅವರನ್ನು ಭೇಟಿ ಮಾಡಿ ಹಣ ಕೇಳಿದಾಗ ಅವರು ಅವಾಚ್ಯವಾಗಿ ನಿಂದಿಸಿ, ತಲೆಗೆ ಹೊಡೆದಿದ್ದಾರೆ ಎಂದು ಮಹದೇವು ದೂರು ನೀಡಿದ್ದಾರೆ.
ಮೊದಲು ಎನ್ಸಿಆರ್ ದಾಖಲಿಸಿದ್ದ ಅವರು, ಬಳಿಕ ಕೋರ್ಟ್ ಮೊರೆ ಹೋಗಿ ಎಫ್ಐಆರ್ ದಾಖಲಿಸಲು ಆದೇಶ ತಂದಿದ್ದು ದೇವರಾಜ ಠಾಣೆ ಪೊಲೀಸರು ಎಫ್ ಐ ಆರ್ ದಾಖಲಿಸಿದ್ದಾರೆ.
