ಮಡಿಕೇರಿ: 26ನೇ ಚೇನಂಡ ಹಾಕಿ ನಮ್ಮೆ ಸಂಭ್ರಮದಿಂದ ಮುಗಿಯುತ್ತಿದ್ದಂತೆ, 27ನೇ ಕೊಡವ ಕೌಟುಂಬಿಕ ಹಾಕಿ ಉತ್ಸವದ ತಯಾರಿಗೆ ಅಜ್ಜಿಕುಟ್ಟಿರ ಕುಟುಂಬ ಸಿದ್ಧತೆ ನಡೆಸಿದೆ.
ಚೇನಂಡ ಕುಟುಂಬದ ಯಶಸ್ವಿ ಆಯೋಜನೆಯ ನಂತರ 2027ರ ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಹಾಕಿ ನಮ್ಮೆಯ ಹೊಣೆಯನ್ನು ಅಜ್ಜಿಕುಟ್ಟಿರ ಕುಟುಂಬ ವಹಿಸಿಕೊಂಡಿದೆ.
ದಕ್ಷಿಣ ಕೊಡಗಿನ ಪೊನ್ನಂಪೇಟೆಯಲ್ಲಿ ಈ ಬಾರಿಯ ಉತ್ಸವವನ್ನು ಅದ್ದೂರಿಯಾಗಿ ನಡೆಸಲು ಕುಟುಂಬದವರು ಆಗಲೇ ಯೋಜನೆ ರೂಪಿಸಿ,ಸಿದ್ಧತೆಯಲ್ಲಿ ತೊಡಗಿದ್ದಾರೆ.
ಮೂರು ಕ್ರೀಡಾಂಗಣಗಳಲ್ಲಿ ಪಂದ್ಯಾವಳಿ ನಡೆಸುವ ಆಲೋಚನೆ ಇದ್ದು, ಪೊನ್ನಂಪೇಟೆಯ ಟರ್ಫ್ ಮೈದಾನವನ್ನು ಪ್ರಧಾನ ವೇದಿಕೆಯಾಗಿ ಬಳಸಿಕೊಳ್ಳಲು ನಿರ್ಧರಿಸಿದೆ.
ಪ್ರಮುಖ ಪಂದ್ಯಗಳು ಟರ್ಫ್ನಲ್ಲಿ ನಡೆಯಲಿದ್ದು, ಸಂಜೆ ವಿಳಂಬವಾದರೆ ಹೊನಲು ಬೆಳಕಿನಲ್ಲೂ ಆಟ ಮುಂದುವರಿಸುವ ವ್ಯವಸ್ಥೆ ಮಾಡಲಾಗುತ್ತಿದೆ.
ಇದು ಸಾಧ್ಯವಾದರೆ ಕೊಡವ ಹಾಕಿ ಉತ್ಸವದ ಇತಿಹಾಸದಲ್ಲೇ ಮೊದಲ ಬಾರಿಗೆ ಟರ್ಫ್ ಮತ್ತು ಫ್ಲಡ್ಲೈಟ್ನಲ್ಲಿ ಪಂದ್ಯಗಳು ನಡೆದ ದಾಖಲೆ ಆಗಲಿದೆ ಎಂದು ಅಜ್ಜಿಕುಟ್ಟಿರ ಕುಟುಂಬ ತಿಳಿಸಿದೆ.
ಶಾಸಕ ಎ.ಎಸ್.ಪೊನ್ನಣ್ಣ ಅವರ ಆಸೆಯಂತೆ ಅಜ್ಜಿಕುಟ್ಟಿರ ಕುಟುಂಬಕ್ಕೆ ಈ ಜವಾಬ್ದಾರಿ ಲಭಿಸಿದೆ. ಈ ಹಿಂದೆ ಮಡಿಕೇರಿಯಲ್ಲಿ ನಡೆದ ಮುದ್ದಂಡ ಹಾಕಿ ಉತ್ಸವದ ವೇದಿಕೆಯಲ್ಲೇ ಪೊನ್ನಣ್ಣ ಅವರು ಕೊಡವ ಹಾಕಿ ಅಕಾಡೆಮಿಗೆ ಮನವಿ ಮಾಡಿದ್ದರು. ಅದರಂತೆ ಅಕಾಡೆಮಿಯು ಚೇನಂಡ ಹಾಕಿ ಉತ್ಸವದ ಬಳಿಕ ಅಜ್ಜಿಕುಟ್ಟಿರ ಕುಟುಂಬಕ್ಕೆ ಅವಕಾಶ ನೀಡಿದೆ.
ಪೊನ್ನಣ್ಣ ಅವರ ಸಹೋದರ ಎ.ಎಸ್.ನರೇನ್ ಕಾರ್ಯಪ್ಪ ಅವರ ನೇತೃತ್ವದಲ್ಲಿ ಸಮಿತಿ ರಚನೆಯಾಗಿದ್ದು, ಪೊನ್ನಣ್ಣ ಅವರು ಪೋಷಕ ಅಧ್ಯಕ್ಷರಾಗಿ ಉತ್ಸವದ ಯಶಸ್ಸಿಗೆ ಸಹಕರಿಸಲಿದ್ದಾರೆ.
