ಮೈಸೂರು: ಮೇ 3ರಂದು ನಡೆದಿದ್ದ ನೀಟ್ ಪರೀಕ್ಷೆ ರದ್ದಾದ ಹಿನ್ನೆಲೆ ಆಘಾತಕ್ಕೊಳಗಾಗಿ ನಾಲ್ವರು ನೀಟ್ ಆಕಾಂಕ್ಷಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ, ಇದರ ನೈತಿಕ ಹೊಣೆ ಹೊತ್ತು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಮಾಜಿ ಅಧ್ಯಕ್ಷ ಬಿ. ಸುಬ್ರಹ್ಮಣ್ಯ ಆಗ್ರಹಿಸಿದ್ದಾರೆ.
ನೀಟ್ ಆಕಾಂಕ್ಷಿಗಳ ಸರಣಿ ಆತ್ಮಹತ್ಯೆ ಕುರಿತು ಪ್ರತಿಕ್ರಿಯಿಸಿರುವ ಸುಬ್ರಮಣ್ಯ,ಬದುಕಿನ ಕನಸು ಹೊತ್ತ ವಿದ್ಯಾರ್ಥಿಗಳು ಜೀವ ತೆತ್ತೆದ್ದಾರೆ, ಹಿಜಬ್, ಹಲಾಲ್, ಮಂದಿರ, ಮಸೀದಿ, ಹಿಂದೂ – ಮುಸ್ಲಿಂ ಅಂತ ಭಾವನಾತ್ಮಕ ರಾಜಕಾರಣ ಮಾಡುವ ಬಿಜೆಪಿಯ ಯಾವೊಬ್ಬ ನಾಯಕನೂ ಈ ಬಗ್ಗೆ ದನಿ ಎತ್ತುತ್ತಿಲ್ಲ. ಸಂಸತ್ತಿನಲ್ಲಿ ಇಂತಹ ವಿಷಯಗಳ ಬಗ್ಗೆ ಚರ್ಚೆಗೆ ಕರೆದರೆ, ವಿಪಕ್ಷದವರು ನನ್ನನ್ನ ಏನೋ ಮಾಡಿಬಿಡ್ತಾರೆ ಅಂತ ಡೋಂಗಿ ಹೊಡೆದು ಓಡಿ ಹೋಗ್ತಾರೆ ಎಂದು ಲೇವಡಿ ಮಾಡಿದ್ದಾರೆ.
ರಾಜ್ಯದ ಬಿಜೆಪಿ-ಜೆಡಿಎಸ್ ಸಂಸದರಾಗಲಿ, ಕೇಂದ್ರ ಸಚಿವರಾಗಲಿ ನೀಟ್ ಹಗರಣವನ್ನ ತಪ್ಪು ಅಂತ ಒಪ್ಪಿಕೊಳ್ಳದೇ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಒಬ್ಬ ಕೆಮಿಸ್ಟ್ರಿ ಪ್ರೊಫೆಸರ್ ತನ್ನ ಮನೆಯ ಕೋಚಿಂಗ್ ಕ್ಲಾಸ್ನಲ್ಲಿ ವಿದ್ಯಾರ್ಥಿಗಳಿಗೆ ಪ್ರಶ್ನೆಪತ್ರಿಕೆ ಲೀಕ್ ಮಾಡ್ತಾನೆ ಅಂದರೆ ಎಷ್ಟರ ಮಟ್ಟಿಗೆ ಕೇಂದ್ರ ಸರ್ಕಾರ ನಿಗಾವಹಿಸಿದೆ ಎಂಬುದನ್ನು ಆಲೋಚಿಸಬೇಕು.
ಅತಿಹೆಚ್ಚು ಅಂಕ ಪಡೆದು ಉತ್ತೀರ್ಣರಾಗುತ್ತೇವೆ ಅಂದುಕೊಂಡಿದ್ದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ, ಇದರ ಹೊಣೆ ಮೋದಿ ಹೊರುತ್ತಾರಾ ಅಂತ ಎಂದು ಸುಬ್ರಮಣ್ಯ ಖಾರವಾಗಿ ಪ್ರಶ್ನಿಸಿದ್ದಾರೆ.
ನೀಟ್ ವಿದ್ಯಾರ್ಥಿಗಳು ಇಂತಹ ಘಟನೆಗಳಿಂದ ದೃತಿಗೆಡಬಾರದು, ಪರೀಕ್ಷೆ ಹೋದರೆ ಮತ್ತೊಂದು ಪರೀಕ್ಷೆ ಎದುರಿಸಬಹುದು. ಆದರೆ ನಿಮ್ಮ ಭವಿಷ್ಯದ ಬಗ್ಗೆ ನೂರಾರು ಕನಸು ಕಟ್ಟಿಕೊಂಡ ಹೆತ್ತವರ ಬದುಕು ಏನಾಗಬೇಕು ಸಾಲ ಸೋಲ ಮಾಡಿಸಿ ಮಕ್ಕಳನ್ನ ಓದಿಸಿರುತ್ತಾರೆ, ಎಷ್ಟೊ ಜನ ಮನೆ ಮಟ ಎಲ್ಲವನ್ನೂ ಮಕ್ಕಳಿಗಾಗಿ ತ್ಯಾಗ ಮಾಡುತ್ತಾರೆ, ಇಂತಹ ಸನ್ನಿವೇಶಗಳು ಬಂದಾಗ ಅವರನ್ನೊಮ್ಮೆ ನೆನೆಸಿಕೊಳ್ಳಿ, ಏನೇ ಆದರೂ ಧೈರ್ಯವಾಗಿ ಎದುರಿಸುವ ಆತ್ಮಸ್ಥೈರ್ಯ ಬೆಳೆಸಿಕೊಳ್ಳಿ ಎಂದು ಅವರು ಕಿವಿಮಾತು ಹೇಳಿದ್ದಾರೆ.
ಇನ್ನೂ ಹಿಂದೂಗಳನ್ನ ಉರಿಸಲು ಹಿಜಬ್ಗೆ ಅವಕಾಶ ಕೊಟ್ಟಿದ್ದಾರೆ ಅನ್ನೋ ಮಾಜಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಗೆ ಸುಬ್ರಹ್ಮಣ್ಯ ಕಿಡಿ ಕಾರಿದ್ದಾರೆ. ಕೇಸರಿ, ಹಳದಿ, ನೀಲಿ, ಗುಲಾಬಿ ಶಾಲುಗಳು ಅಥವಾ ಹಿಜಬ್ ಯಾವುದೂ ಸಹ ಉದ್ಯೋಗ ಕೊಡೋದಿಲ್ಲ. ಉದ್ಯೋಗಸ್ಥರಾಗಲು ಬೇಕಿರುವುದು ಶಿಕ್ಷಣ, ಕೌಶಲ್ಯವೇ ಹೊರತು ನಿಮ್ಮ ರಾಜಕೀಯ ಅಜೆಂಡಾದ ಅಸ್ತ್ರಗಳೂ ಅಲ್ಲ, ವಸ್ತ್ರಗಳೂ ಅಲ್ಲ. ಅಂದಹಾಗೆ ಬಿಜೆಪಿಯವರು ಕೇಸರಿ ಶಾಲು ಹಾಕಿ ಕಳಿಸಿದವರು ಇಂದು ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆಯಂತಹ ಅನೈತಿಕತೆಯಲ್ಲಿ ತೊಡಗಿದ್ದಾರೆ, ಅದನ್ನು ಉದ್ಯೋಗ ಎನ್ನುವುದಿಲ್ಲ, ಅಕ್ರಮ ಎನ್ನುತ್ತಾರೆ, ಬಿಜೆಪಿಗೆ ಇದು ತಿಳಿದಿರಬೇಕು ಎಂದು ಕುಟುಕಿದ್ದಾರೆ.
ನಿಶ್ಕಲ್ಮಶವಾದ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಜಾತಿ-ಧರ್ಮದ ವಿಷಬೀಜ ಬಿತ್ತಿದ್ದೇ ನಿಮ್ಮ ಸರ್ಕಾರ. ಶಾಲಾ-ಕಾಲೇಜುಗಳ ವ್ಯವಸ್ಥೆಯನ್ನೇ ಹಾಳುಮಾಡಿದಿರಿ, ಆದ್ರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಸರ್ವಧರ್ಮಗಳ ಪಾಲನೆಗೆ ಅವಕಾಶ ಮಾಡಿಕೊಟ್ಟಿದೆ. ಜನಿವಾರ, ಶಿವದಾರ, ರುದ್ರಾಕ್ಷಿ ಧಾರಣೆಗೂ ಅವಕಾಶ ಕೊಟ್ಟಿದ್ದಾರೆ. ಶಾಲೆಗಳಿಗೆ ಹಿಜಬ್ ಧರಿಸಿಕೊಂಡು ಹೋದ್ರೂ, ವಿದ್ಯಾರ್ಥಿನಿಯರು ಕ್ಲಾಸ್ ರೂಮಲ್ಲಿ ಹಾಕಿಕೊಂಡು ಕೂರಲ್ಲ. ಇದನ್ನ ಮಹಾಜ್ಞಾನಿ ಎಂದು ಬೀಗುವವರು ಅರ್ಥಮಾಡಿಕೊಳ್ಳಬೇಕು ಎಂದು ತಿರುಗೇಟು ನೀಡಿದ್ದಾರೆ.
ಹರುಕು ಬಾಯಿಯ ಪ್ರತಾಪ್ ಸಿಂಹ ಅಥವಾ ಇನ್ಯಾರೇ ಬಿಜೆಪಿ ನಾಯಕರು ನೈತಿಕತೆಯಿದ್ದರೆ ನೀಟ್ ಬಗ್ಗೆ ದನಿ ಎತ್ತಲಿ. ನೀಟ್ ನಂತಹ ಪ್ರಕರಣ ಸಿದ್ದರಾಮಯ್ಯ ಸರ್ಕಾರದಲ್ಲಿ ಏನಾದ್ರೂ ಆಗಿದ್ದಿದ್ದರೇ ಇಷ್ಟೊತ್ತಿಗೆ ಬೀದಿಯಲ್ಲಿ ನಿಂತು ಮೈ ಪರಚಿಕೊಳ್ಳುತ್ತಿದ್ದರು. ಆದ್ರೆ ತಮ್ಮದೇ ಸರ್ಕಾರದಲ್ಲಿ ಆಗಿದ್ದರಿಂದ ಅದನ್ನ ಮುಚ್ಚಿಹಾಕಲು ಯತ್ನಿಸುತ್ತಿದ್ದಾರೆ ಎಂದು ಸುಬ್ರಮಣ್ಯ ಟೀಕಾಪ್ರಹಾರ ನಡೆಸಿದ್ದಾರೆ.
