ಬೆಂಗಳೂರು: ಕೇಂದ್ರದ ಜಂಟಿ ಸಂಸದೀಯ ಸಮಿತಿ ಸಭೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಡಾ. ಮುಖ್ಯಮಂತ್ರಿ ಚಂದ್ರು ಭಾಗವಹಿಸಿ, ಪಕ್ಷದ ರಾಷ್ಟ್ರೀಯ ನಿಲುವುಗಳನ್ನು ತಿಳಿಸಿದ್ದಾರೆ.
129ನೇ ಸಂವಿಧಾನ ತಿದ್ದುಪಡಿ ಮಸೂದೆ ಕುರಿತು ಆಮ್ ಆದ್ಮಿ ಪಾರ್ಟಿಯ ಅಭಿಪ್ರಾಯವನ್ನು ಚಂದ್ರು ಸ್ಪಷ್ಟಪಡಿಸಿ ಎಲ್ಲಾ ಅಂಶಗಳನ್ನು ಕೂಲಂಕುಶವಾಗಿ ಪರಿಶೀಲಿಸಿ
129ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಪಕ್ಷದ ವಿರೋಧವಿದೆ ಎಂದು ತಿಳಿಸಿದರು.
129ನೇ ಸಂವಿಧಾನ ತಿದ್ದುಪಡಿ ಮಸೂದೆ ಸರ್ಕಾರದ ಒಂದು ರಾಷ್ಟ್ರ, ಒಂದು ಚುನಾವಣೆ ಯೋಜನೆಯನ್ನು ಪ್ರಸ್ತಾಪಿಸುತ್ತದೆ. ಇದರ ಅಡಿಯಲ್ಲಿ ಲೋಕಸಭೆ, ರಾಜ್ಯ ವಿಧಾನಸಭೆಗಳು ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಏಕಕಾಲಿಕ ಚಕ್ರದಲ್ಲಿ ನಡೆಸುವ ಉದ್ದೇಶವಿದ್ದು ಅದರ ಮುಖ್ಯ ಉದ್ದೇಶಗಳು ಹೀಗಿವೆ:
ಚುನಾವಣಾ ವೆಚ್ಚದ ಭಾರವನ್ನು ಕಡಿಮೆ ಮಾಡುವುದು,
ಮಾದರಿ ನೀತಿ ಸಂಹಿತೆ ಹಾಗೂ ಕಾರ್ಯನಿರ್ವಾಹಕ ನಾಯಕರ ಚುನಾವಣಾ ಪ್ರಚಾರದ ಕಾರಣದಿಂದ ಆಗುವ ಆಡಳಿತ ಅಡಚಣೆಯನ್ನು ನಿವಾರಿಸುವುದು
ಸರ್ಕಾರಿ ಸಿಬ್ಬಂದಿಯನ್ನು ಚುನಾವಣಾ ಕಾರ್ಯಕ್ಕೆ ನಿಯೋಜಿಸುವುದರಿಂದ ಉಂಟಾಗುವ ಆಡಳಿತಾತ್ಮಕ ಅಸಮರ್ಥತೆಯನ್ನು ಪರಿಹರಿಸುವುದು
ಆಡಳಿತಾವಧಿಯ ಅನಿಶ್ಚಿತತೆಯಿಂದ ಉಂಟಾಗುವ ಆರ್ಥಿಕ ಹಾಗೂ ನೀತಿ ಸ್ಥಿರತೆಯ ಸಮಸ್ಯೆಗಳನ್ನು ಪರಿಹರಿಸುವುದು
ಆಮ್ ಆದ್ಮಿ ಪಾರ್ಟಿಯ ಅಭಿಪ್ರಾಯದಲ್ಲಿ, ಮೇಲ್ಕಂಡ ಉದ್ದೇಶಗಳಿಗೆ ಪ್ರಸ್ತುತ ತಿದ್ದುಪಡಿಯ ಮೂಲಕ ಸರಿಯಾದ ಪರಿಹಾರ ಸಿಗುವುದಿಲ್ಲ ಹಾಗೂ ಅವು ಪ್ರಸ್ತುತ ಸಂದರ್ಭದಲ್ಲಿ ಈ ಕೆಳಗಿನ ಕಾರಣಗಳಿಂದ ಸಮರ್ಪಕವೂ ಅಲ್ಲ ಎಂದು ಚಂದ್ರು ಹೇಳಿದರು.
ಚುನಾವಣಾ ವೆಚ್ಚವು ಕೇಂದ್ರ ಸರ್ಕಾರದ ಒಟ್ಟು ಬಜೆಟ್ನ ಸುಮಾರು 0.25% ಮಾತ್ರ. ಪ್ರಜಾಪ್ರಭುತ್ವದಂತಹ ಮಹತ್ವದ ವ್ಯವಸ್ಥೆಗೆ ಇದು ನ್ಯಾಯ ಸಮ್ಮತ ವೆಚ್ಚವಾಗಿದೆ. ಪ್ರಸ್ತಾವಿತ ಮಸೂದೆಯಲ್ಲಿ ಈ ವೆಚ್ಚದಲ್ಲಿ ಎಷ್ಟು ಉಳಿತಾಯ ಸಾಧ್ಯ ಎಂಬುದನ್ನು ಸ್ಪಷ್ಟಪಡಿಸುವುದಿಲ್ಲ.
ಒಂದು ರಾಷ್ಟ್ರ, ಒಂದು ಚುನಾವಣೆ ಪ್ರಸ್ತಾಪಿಸುವ ಈ ಮಸೂದೆ, ರಾಜ್ಯ ವಿಧಾನಸಭೆ ಅಥವಾ ಲೋಕಸಭೆಯಲ್ಲಿ ರಾಜಕೀಯ ಸಂಕಷ್ಟ ಎದುರಾದಲ್ಲಿ ಮರುಚುನಾವಣೆಗಳ ನಡೆಸಬೇಕೆನ್ನುವುದು ಈ ತಿದ್ದುಪಡಿಯ ಮೂಲ ಉದ್ದೇಶವನ್ನೇ ದುರ್ಬಲಗೊಳಿಸುತ್ತದೆ.
ಮರು ಚುನಾವಣೆಗಳಿಂದ ಮಾದರಿ ನೀತಿ ಸಂಹಿತೆ, ಚುನಾವಣಾ ವೆಚ್ಚ, ಚುನಾವಣಾ ಯಂತ್ರ ಸಿದ್ಧತೆ ಹೀಗೆ ಮೊದಲಿದ್ದ ಸಮಸ್ಯೆಗಳು ಯತಾವತ್ತು ಮುಂದುವರಿಯುತ್ತವೆ.
ಈ ತಿದ್ದುಪಡಿ ಆಡಳಿತಾತ್ಮಕ ಕೊರತೆಗಳಿಗೆ ಒತ್ತು ನೀಡಿದರೂ, ಪ್ರಜಾಪ್ರಭುತ್ವದ ಮೂಲತತ್ವ ಮತ್ತು ನಮ್ಮ ಸಂವಿಧಾನದ ಮೂಲ ಉದ್ದೇಶವನ್ನು ಕಡೆಗಣಿಸುತ್ತದೆ.
ಚುನಾವಣೆಗಳು ಕೇವಲ ಸರ್ಕಾರ ಆಯ್ಕೆ ಮಾಡುವ ಸಾಧನವಲ್ಲ; ಅವು ಜನರಿಗೆ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ತಮ್ಮ ಅನುಮೋದನೆ ಅಥವಾ ಅಸಮ್ಮತಿಯನ್ನು ವ್ಯಕ್ತಪಡಿಸುವ ಪ್ರಮುಖ ಪ್ರತಿಕ್ರಿಯಾ ವ್ಯವಸ್ಥೆಯೂ ಆಗಿವೆ. ಸ್ಥಳೀಯ, ರಾಜ್ಯ ಹಾಗೂ ಕೇಂದ್ರ ಚುನಾವಣೆಗಳು ಸರ್ಕಾರಗಳಿಗೆ ನಿರಂತರ ಜನಾಭಿಪ್ರಾಯದ ಸೂಚನೆ ನೀಡುತ್ತವೆ. ಈ ಅವಕಾಶವನ್ನು ಕೇವಲ ಐದು ವರ್ಷಕ್ಕೊಮ್ಮೆ ಮಾತ್ರ ಸೀಮಿತಗೊಳಿಸುವುದು ಮತದಾರರ ಸ್ವಾತಂತ್ರ್ಯ ಹಾಗು ಹಕ್ಕಿಗೆ ಧಕ್ಕೆಯಾಗಿದೆ.
ಭಾರತವು ಒಕ್ಕೂಟ ವ್ಯವಸ್ಥೆಯ ದೇಶವಾಗಿದ್ದು, ರಾಜ್ಯ ಹಾಗೂ ಕೇಂದ್ರದ ವಿಷಯಗಳು ವಿಭಿನ್ನವಾಗಿವೆ, ಚುನಾವಣಾ ವಿಷಯಗಳೂ ವಿಭಿನ್ನವಾಗಿರುವುದರಿಂದ ಏಕಕಾಲಿಕ ಚುನಾವಣೆಗಳು ಪ್ರಾದೇಶಿಕ ಸಮಸ್ಯೆಗಳು, ಭಾಷೆಗಳು, ಸಂಸ್ಕೃತಿ, ಪರಂಪರೆ, ಉದ್ಯೋಗ, ಹವಾಮಾನ ಮತ್ತು ಭೌಗೋಳಿಕ ವೈವಿಧ್ಯತೆಯನ್ನು ಕಡೆಗಣಿಸುತ್ತದೆ.
ಸ್ಥಳೀಯ ಸಂಸ್ಥೆಗಳು, ರಾಜ್ಯ ವಿಧಾನಸಭೆಗಳು ಹಾಗೂ ರಾಜ್ಯಸಭೆ ಆಡಳಿತದಲ್ಲಿರುವವರ ಮೇಲೆ ನಿಯಂತ್ರಣ ಮತ್ತು ಸಮತೋಲನ ಸಾಧಿಸುವ ಪ್ರಮುಖ ವ್ಯವಸ್ಥೆಗಳಾಗಿವೆ. ವಿಭಿನ್ನ ಸಮಯಗಳಲ್ಲಿ ಚುನಾವಣೆಗಳು ನಡೆಯುವುದರಿಂದ ಈ ಸಮತೋಲನ ಸದಾ ಸಕ್ರಿಯವಾಗಿರುತ್ತವೆ. ರಾಮ ಮನೋಹರ ಲೋಹಿಯಾ ಅವರು ಹೇಳಿದಂತೆ,ಜೀವಂತ ರಾಷ್ಟ್ರಗಳು ಐದು ವರ್ಷ ಕಾಯುವುದಿಲ್ಲ.
ಈ ತಿದ್ದುಪಡಿ ಬಿಜೆಪಿಯಂತಹ ಅಥವಾ ಕಾಂಗ್ರೆಸ್ನಂತಹ ದೊಡ್ಡ ರಾಷ್ಟ್ರೀಯ ಪಕ್ಷಗಳಿಗೆ ಅನುಕೂಲಕರವಾಗಬಹುದು. ಆದರೆ ಸಣ್ಣ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಹಾನಿಕಾರಕವಾಗಿದೆ.
ಪ್ರಾದೇಶಿಕ ಪಕ್ಷಗಳ ಪ್ರಾಸಂಗಿಕತೆ, ಪ್ರತಿನಿಧಿತ್ವ ಹಾಗೂ ಚುನಾವಣಾ ಸಿದ್ಧತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಎಂದು ಮುಖ್ಯ ಮಂತ್ರಿ ಚಂದ್ರು ತಮ್ಮ ಪಕ್ಷದ ಪರವಾಗಿ ಆತಂಕ ವ್ಯಕ್ತಪಡಿಸಿದರು.
ಚುನಾವಣೆಗಳನ್ನು ಮುಂದೂಡಬಹುದಾದ ಸಮಯ ಮಿತಿಗಳು ಮತ್ತು ಸಂದರ್ಭಗಳನ್ನು ವ್ಯಾಖ್ಯಾನಿಸದೆ ಚುನಾವಣೆಗಳನ್ನು ಅನಿರ್ದಿಷ್ಟವಾಗಿ ಮುಂದೂಡಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಿರುವುದು ಅಪಾಯಕಾರಿ. ಇದು ಚುನಾವಣಾ ಆಯೋಗವನ್ನು ನೇಮಕಾತಿ ಮಾಡುವ ಕೇಂದ್ರ ಸರ್ಕಾರಕ್ಕೆ ಅನಗತ್ಯ ಅಧಿಕಾರ ನೀಡುತ್ತದೆ.
ಈ ತಿದ್ದುಪಡಿಯಿಂದ ಕೇವಲ ಚುನಾವಣಾ ದಿನಾಂಕವನ್ನು ಒಂದು ಬಾರಿ ಬದಲಾಯಿಸುವುದನ್ನು ಬಿಟ್ಟರೆ ಹೆಚ್ಚಿನ ಪ್ರಯೋಜನ ಆಗುವುದಿಲ್ಲ. ಇದು ಪ್ರಜಾಪ್ರಭುತ್ವದ ಮೂಲತತ್ವವನ್ನು ದುರ್ಬಲಗೊಳಿಸುತ್ತದೆ.
ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ, ಆಮ್ ಆದ್ಮಿ ಪಾರ್ಟಿ 129ನೇ ಸಂವಿಧಾನ ತಿದ್ದುಪಡಿ ಮಸೂದೆಗೆ ಸ್ಪಷ್ಟವಾಗಿ ವಿರೋಧ ವ್ಯಕ್ತಪಡಿಸುತ್ತದೆ ಎಂದು ತಿಳಿಸಿದರು.
