ಮೈಸೂರು: ಭ್ರಷ್ಟಾಚಾರ ತೊಲಗಲಿ ಎಂಬ ಘೋಷಣೆಯೊಂದಿಗೆ ಮೈಸೂರಿನಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಶನಿವಾರ ಭ್ರಷ್ಟಾಚಾರ ವಿರೋಧಿ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಲಾಯಿತು.
ಮೈಸೂರಿನ ಆರ್ ಗೇಟ್ ವೃತ್ತದಲ್ಲಿ ವಾಟಾಳ್ ನೇತೃತ್ವದಲ್ಲಿ ಘೋಷಣೆ ಕೂಗುತ್ತಾ ಪ್ರತಿಭಟನೆ ನಡೆಸಿ ತೆಂಗಿನಕಾಯಿ ಈಡುಗಾಯಿ ಹೊಡೆಯಲಾಯಿತು.
ಎಲ್ಲೆಡೆ ಭ್ರಷ್ಟಾಚಾರ ಎಲ್ಲೆ ಮೀರಿದೆ, ಪ್ರಾಮಾಣಿಕತೆಗೆ ಬೆಲೆ ಇಲ್ಲದಂತಾಗಿದೆ ಭ್ರಷ್ಟಾಚಾರಿಗಳನ್ನೇ ಕೆಲವರು ಹೊಗಳುತ್ತಾರೆ ಜೈಲಿನಿಂದ ಬಂದ ಬ್ರಷ್ಟಾಚಾರಿಗಳಿಗೂ ಹಾರ ತುರಾಯಿ ಹಾಕಿ ಸ್ವಾಗತಿಸುತ್ತಾರೆ ಇದು ನಿಜಕ್ಕೂ ದುರಂತ ಎಂದು ಈ ವೇಳೆ ವಾಟಾಳ್ ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಚುನಾವಣೆ ಭ್ರಷ್ಟಾಚಾರ ಮಯವಾಗಿದೆ ತತ್ವ ಸಿದ್ಧಾಂತಗಳೆಲ್ಲ ಗಾಳಿಗೆ ತೂರಲಾಗಿದೆ ಶಾಸನಸಭೆಗಳು, ವಿಧಾನ ಪರಿಷತ್ತು ಲೋಕಸಭೆ ಎಲ್ಲವೂ ಭ್ರಷ್ಟರಿಂದ ತುಂಬಿ ಹೋಗಿದೆ ಭ್ರಷ್ಟಾಚಾರ ನಿಲ್ಲದಿದ್ದರೆ ಪ್ರಜಾಪ್ರಭುತ್ವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವಾಟಾಳ್ ನಾಗರಾಜ್ ಆತಂಕ ವ್ಯಕ್ತಪಡಿಸಿದರು.
ಈ ಹೋರಾಟದಲ್ಲಿ ಪಾರ್ಥಸಾರಥಿ, ಗಿರೀಶ್ ಗೌಡ, ಮೂಗೂರು ನಂಜುಂಡಸ್ವಾಮಿ, ತೇಜೇಶ್ ಲೋಕೇಶ್ ಗೌಡ, ಶಿವಶಂಕರ್, ನಾರಾಯಣ ಸ್ವಾಮಿ, ನಾಗೇಗೌಡ, ಸಿಂದುವಳ್ಳಿ ಶಿವಕುಮಾರ್, ರಾಧಾಕೃಷ್ಣ, ದರ್ಶನ್ ಗೌಡ, ಪ್ರದೀಪ್ , ರಘು ಅರಸ್, ಬಸವರಾಜು , ಹನುಮಂತಯ್ಯ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
