ಬೆಂಗಳೂರು: ನಿನ್ನೆ ರಾತ್ರಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಏಳು ಜನ ಅಮಾಯಕರು ಬಲಿಯಾಗಿರುವ ಪ್ರಕರಣಕ್ಕೆ ಸ್ಥಳಿಯ ಶಾಸಕ ರಿಜ್ವಾನ್ ಹರ್ಷದ್ ನಿರ್ಲಕ್ಷ ಹಾಗೂ ಬೇಜವಾಬ್ದಾರಿ ನಡೆ ನೇರ ಕಾರಣ ಎಂದು ಆಮ್ ಆದ್ಮಿ ಪಕ್ಷ ಆರೋಪಿಸಿದೆ.
ಕೂಡಲೇ ಶಾಸಕ ರಿಜ್ವಾನ್ ಹರ್ಷದ್ ಅವರ
ರಾಜೀನಾಮೆ ಪಡೆಯಬೇಕೆಂದು ಮುಖ್ಯ ಮಂತ್ರಿಗಳನ್ನು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಸಂಘಟನಾ ಕಾರ್ಯದರ್ಶಿ ಮರಿಯಾ ಹುಸೇನ್ ಆಗ್ರಹಿಸಿದ್ದಾರೆ.
ನೆನ್ನೆ ರಾತ್ರಿ ದುರ್ಘಟನೆ ನಡೆದ ಸ್ಥಳದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಮರಿಯಾ ಹುಸೇನ್, ಸ್ಥಳೀಯ ಶಾಸಕ ರಿಜ್ವಾನ್ ಹರ್ಷದ್ ರಿಗೆ ಅನೇಕ ಬಾರಿ ಸ್ಥಳೀಯ ಮುಖಂಡರು, ವ್ಯಾಪಾರಸ್ಥರು ಈ ಅಪಾಯಕಾರಿ ಕಾಂಪೌಂಡ್ ಬಗ್ಗೆ ಮನವರಿಕೆ ಮಾಡಿ ಕೂಡಲೇ ತೆರವುಗೊಳಿಸಲು ಮನವಿ ಮಾಡಿಕೊಂಡಿದ್ದರು. ಆದರೂ ಶಾಸಕರು ನಿರ್ಲಕ್ಷ್ಯ ತೋರಿಸಿದ್ದರಿಂದ ಇಂದು ಏಳು ಜನ ಅಮಾಯಕರ ಸಾವಿಗೆ ಕಾರಣಕರ್ತರಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಮುಖ್ಯಮಂತ್ರಿಗಳು ಕೂಡಲೇ ಇಂತಹ ನಿರ್ಲಕ್ಷ್ಯ ಶಾಸಕರ ರಾಜಿನಾಮೆಯನ್ನು ಪಡೆದುಕೊಳ್ಳಬೇಕು ಹಾಗೂ ಮೊಕದ್ದಮೆಯನ್ನು ದಾಖಲಿಸಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡಬೇಕು ಅಲ್ಲದೆ ಈ ಏಳು ಜನ ಅಮಾಯಕರ ಕುಟುಂಬಗಳಿಗೆ ಸರ್ಕಾರಿ ಉದ್ಯೋಗಗಳನ್ನು ನೀಡಬೇಕು ಎಂದು ಮರಿಯ ಹುಸೇನ್ ಆಗ್ರಹಿಸಿದರು.
ಕಳೆದ ವರ್ಷ ಇದೇ ರೀತಿ ಶಿವಾಜಿನಗರ ಕ್ಷೇತ್ರದಲ್ಲಿ ಸರ್ಕಾರಿ ಶಾಲೆಯ ಕಟ್ಟಡ ಬೆಳಗಿನ ಜಾವ 6 ಗಂಟೆಗೆ ಕುಸಿದು ಬಿದ್ದಿತ್ತು. ಆಗಲು ಸಹ ಸ್ಥಳೀಯ ಶಾಸಕರಿಗೆ ಸಾಕಷ್ಟು ಮನವಿಗಳನ್ನು ನೀಡಿದ್ದರು ಸಹ ತಮ್ಮ ನಿರ್ಲಕ್ಷ ಧೋರಣೆಯನ್ನು ಮುಂದುವರಿಸಿಕೊಂಡೇ ಬಂದಿದ್ದಾರೆ, ಅದೃಷ್ಟ ವಶಾತ್ ಬೆಳಗಿನ ಜಾವ ಶಾಲಾ ಕಟ್ಟಡ ಕುಸಿದಿದ್ದರಿಂದ ನೂರಾರು ಮಕ್ಕಳು ಪಾರಾಗಿದ್ದಾರೆ ಎಂದು ಹೇಳಿದರು.
ಶಿಥಿಲಾವಸ್ತೆಯ ಇಂತಹ ಅನೇಕ ಕಟ್ಟಡ ಗಳನ್ನು ತೆರವುಗೊಳಿಸಲು ಶಾಸಕರು ಯಾವುದೇ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುತ್ತಿಲ್ಲ. ತನಗೇನು ಸಂಬಂಧವಿಲ್ಲದಂತೆ ವರ್ತಿಸುತ್ತಿರುವ ಶಾಸಕರ ನಡೆ ನಿಜಕ್ಕೂ ನಾಗರಿಕ ಸಮಾಜ ಸಹಿಸುವುದಿಲ್ಲ ಎಂದು ಮಾರಿಯ ಹುಸೇನ್ ಎಚ್ಚರಿಸಿದರು.
ಬಲಿಯಾಗಿದ ಅಮಾಯಕರ ಕುಟುಂಬಗಳಿಗೆ ಸರ್ಕಾರ ನೀಡುವ 5 ಲಕ್ಷ ಭಿಕ್ಷೆ ಬೇಕಾಗಿಲ್ಲ. ಇನ್ನು ಮುಂದಾದರೂ ಅಮಾಯಕರನ್ನು ಬಲಿ ತೆಗೆದುಕೊಳ್ಳುವ ಇವರ ಬೇಜವಾಬ್ದಾರಿತನಕ್ಕೆ ಇತಿಶ್ರೀ ಹಾಡಬೇಕು ಎಂದು ಮರಿಯ ಹುಸೇನ್ ಗುಡುಗಿದರು.
ಸ್ಥಳದಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಕುದ್ರತ್ ಸೇರಿದಂತೆ ಅನೇಕ ಮುಖಂಡರು ಕಾರ್ಯಕರ್ತರು ಹಾಜರಿದ್ದರು.
