ಮೈಸೂರು: ಜಿಲ್ಲೆಯ ಹೆಚ್.ಡಿ.ಕೋಟೆ ತಾಲ್ಲೂಕಿನಲ್ಲಿ ಮುಸ್ಲಿಂ ಸಮುದಾಯದ ಯುವತಿ ಒಬ್ಬರು ಪ್ರಪ್ರಥಮವಾಗಿ ಎಂಬಿಬಿಎಸ್ ವ್ಯಾಸಂಗ ಪೂರ್ಣಗೊಳಿಸಿ ವೈದ್ಯರಾಗಿ ದಾಖಲೆ ನಿರ್ಮಿಸಿದ್ದಾರೆ.
ಪಟ್ಟಣದ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿ ಕೋಟೆ ಮತ್ತು ಜೆಜೆ ಡ್ರೈವಿಂಗ್ ಸ್ಕೂಲ್ ಮಾಲೀಕರಾದ ಜಮೀರ್ ಅಹಮದ್ ಮತ್ತು ಜಾಸ್ಮಿನ್ ದಂಪತಿಯ ಮೊದಲನೇ ಪುತ್ರಿ ಜಹಾನ ಫಿರ್ದೋಸ್ ಅವರು ತಾಲೂಕಿನಲ್ಲೆ ಮುಸ್ಲಿಮ್ ಸಮುದಾಯದ ಪ್ರಥಮ ವೈದ್ಯರಾಗಿ ಗಮನ ಸೆಳೆದಿದ್ದಾರೆ
ಪಟ್ಟಣದ ಸೇಂಟ್ ಮೇರಿ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಸ್ಎಸ್ಎಲ್ಸಿವರೆಗೆ, ನಂತರ ಆದಿಚುಂಚನಗಿರಿ ಕಾಲೇಜಿನಲ್ಲಿ ಪಿಯುಸಿ ಓದಿ, ಸರ್ಕಾರದ ಉಚಿತ ಪ್ರವೇಶದಲ್ಲಿ ಬೆಳ್ಳೂರ್ ಕ್ರಾಸ್ ಆದಿಚುಂಚನಗಿರಿ ವಿ.ವಿಯಲ್ಲಿ ಎಂಬಿಬಿಎಸ್ ಐದು ವರ್ಷ ವ್ಯಾಸಂಗ ಮಾಡಿ ವೈದ್ಯರಾಗಿ ಪ್ರವಾಣ ಪತ್ರ ಪಡೆದುಕೊಂಡಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಬಡ ಕುಟುಂಬದವರು ತಮ್ಮ ಮಕ್ಕಳನ್ನು ಎಂಬಿಬಿಎಸ್ ಮತ್ತು ಇಂಜಿನಿಯರಿಂಗ್ ಓದಿಸುವುದು ಕಷ್ಟವಿದೆ. ಅದರಲ್ಲೂ ಮುಸ್ಲಿಂ ಸಮುದಾಯದವರು ಹೆಣ್ಣು ಮಕ್ಕಳಿಗೆ ಉನ್ನತ ವ್ಯಾಸಂಗ ಮಾಡಿಸಿರುವುದು ವಿರಳ.
ತಾಲ್ಲೂಕಿನ ಹೊನ್ನಮ್ಮನಕಟ್ಟೆ ಗ್ರಾಮದಲ್ಲಿ ಬಡ ಕುಟುಂಬದ ರೈತಾಪಿ ವರ್ಗದಿಂದ ಬಂದ ಜಮೀರ್ ಅಹಮದ್ ದಂಪತಿ ತಮ್ಮ ಮೂವರು ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ಕೊಡಿಸಬೇಕೆಂದು ೩೦ ವರ್ಷಗಳ ಹಿಂದೆ ಕೋಟೆಗೆ ಬಂದು ಡ್ರೈವಿಂಗ್ ಶಾಲೆ ತೆರೆದು ಕಷ್ಟಪಟ್ಟು ಮೊದಲನೇ ಪುತ್ರಿ ಜಹಾನ ಫಿರ್ದೋಸ್ರನ್ನು ವೈದ್ಯರನ್ನಾಗಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಎರಡನೇ ಪುತ್ರಿ ಜಸ್ನ ಫಿರ್ದೋಸ್ ಬಿಎಸ್ಸಿ ಅಗ್ರಿ ಮುಗಿಸಿ ಯುಪಿಎಸ್ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ಪುತ್ರ ಜಹಾಂಗೀರ್ ಅಹಮದ್ ಇಂಜಿನಿಯರಿಂಗ್ ವಿದ್ಯಾಭ್ಯಾಸ ವಾಡಿದ್ದಾರೆ. ಎಲ್ಲರಿಗೂ ಸರ್ಕಾರದ ಉಚಿತ ಪ್ರವೇಶದ ಮೂಲಕವೇ ವ್ಯಾಸಂಗದ ಅವಕಾಶ ದೊರೆತಿರುವುದು ವಿಶೇಷ.
ಮುಸ್ಲಿಂ ಸಮುದಾಯದ ಜಹಾನ ಫಿರ್ದೋಸ್ ಎಂಬಿಬಿಎಸ್ ಮುಗಿಸಿ ವೈದ್ಯರಾಗಿರುವುದು ಇತರರಿಗೂ ಸ್ಫೂರ್ತಿಯಾಗಿದೆ.
