ಮೈಸೂರು: ಮೈಸೂರಿನ ದಾಸಪ್ರಕಾಶ್ ಹೋಟೆಲ್ನಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಕರ್ನಾಟಕ ರಾಜ್ಯ ಮಟ್ಟದ 13 ವರ್ಷದೊಳಗಿನ ಮುಕ್ತ ಮತ್ತು ಬಾಲಕಿಯರ ಚೆಸ್ ಚಾಂಪಿಯನ್ಶಿಪ್-2026 ಯಶಸ್ವಿಯಾಗಿದ್ದು,ಕ್ರೀಡಾಪಟುಗಳು ಸಂಭ್ರಮದಿಂದ ಪಾಲ್ಗೊಂಡರು.
ರಾಜ್ಯದ 17 ಜಿಲ್ಲೆಗಳಿಂದ ಒಟ್ಟು 394 ಬಾಲ ಪ್ರತಿಭೆಗಳು ಈ ಕೂಟದಲ್ಲಿ ಭಾಗವಹಿಸಿದ್ದರು. ಮುಕ್ತ ವಿಭಾಗದಲ್ಲಿ 260 ಹಾಗೂ ಬಾಲಕಿಯರ ವಿಭಾಗದಲ್ಲಿ 134 ಸ್ಪರ್ಧಿಗಳು ಚಾಣಾಕ್ಷತನ ಮೆರೆದರು.
ವಿಜೇತರ ವಿವರ-
ಮುಕ್ತ ವಿಭಾಗ ಚಾಂಪಿಯನ್:
ಆದ್ಯ ಗೌಡ (ಬೆಂಗಳೂರು, 8 ಪಾಯಿಂಟ್ಸ್), ರನ್ನರ್-ಅಪ್: ಇಶಾನ್ ಭನ್ಸಾಲಿ (ಬೆಂಗಳೂರು, 7.5 ಪಾಯಿಂಟ್ಸ್)
ವಿಶೇಷ ಸಾಧನೆ: ಬಾಲಕಿಯರಿಗಾಗಿ ಪ್ರತ್ಯೇಕ ವಿಭಾಗವಿದ್ದರೂ ಸಹ, ಬಾಲಕಿ ಆದ್ಯ ಗೌಡ ಮುಕ್ತ ವಿಭಾಗದಲ್ಲಿ ಸ್ಪರ್ಧಿಸಿ ಬಾಲಕರನ್ನು ಹಿಂದಿಕ್ಕಿ ಸಮಗ್ರ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಬಾಲಕಿಯರ ವಿಭಾಗ ಚಾಂಪಿಯನ್:ಶ್ರೇಯಾ ರಾಜೇಶ್ (ಬೆಂಗಳೂರು ನಗರ, 7.5 ಪಾಯಿಂಟ್ಸ್)
ರನ್ನರ್-ಅಪ್: ಇಂದುಶೀತಲ (ಬೆಂಗಳೂರು ನಗರ, 7.5 ಪಾಯಿಂಟ್ಸ್) (ಶ್ರೇಯಾ ರಾಜೇಶ್ ಅವರು ಟೈ-ಬ್ರೇಕರ್ ನಿಯಮದ ಆಧಾರದ ಮೇಲೆ ಪ್ರಥಮ ಸ್ಥಾನ ಪಡೆದರು.
ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಈ ಪಂದ್ಯದಲ್ಲಿ ಮುಕ್ತ ಮತ್ತು ಬಾಲಕಿಯರ ವಿಭಾಗದ ಮೊದಲ ಎರಡು ಸ್ಥಾನ ಪಡೆದ ವಿಜೇತರು, ಬರುವ ಸೆಪ್ಟೆಂಬರ್ನಲ್ಲಿ ಪಾಂಡಿಚೇರಿಯಲ್ಲಿ ನಡೆಯಲಿರುವ ರಾಷ್ಟ್ರೀಯ ಮಟ್ಟದ 13 ವರ್ಷದೊಳಗಿನವರ ಚೆಸ್ ಚಾಂಪಿಯನ್ಶಿಪ್ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.
ಬಹುಮಾನ ವಿತರಣಾ ಸಮಾರಂಭದಲ್ಲಿ ಮೈಸೂರು ಚೆಸ್ ಸೆಂಟರ್ ಸ್ಥಾಪಕ ನಾಗೇಂದ್ರ ಮುರಳೀಧರ್, ಮೈಸೂರು ಜಿಲ್ಲಾ ಚೆಸ್ ಸಂಸ್ಥೆಯ ಅಧ್ಯಕ್ಷ ಡಾ. ವೇಣುಗೋಪಾಲ್, ಕೆ.ಎಸ್.ಸಿ.ಎ ಪದಾಧಿಕಾರಿಗಳಾದ ಸುರೇಶ್ ಜೆ, ಸುರೇಶ್ ಬಾಬು ಎಂ.ಎಚ್, ದಾಸಪ್ರಕಾಶ್ ಹೋಟೆಲ್ ಮಾಲೀಕರಾದ ದಾಸ್, ಮಾಜಿ ಚಾಂಪಿಯನ್ ಕವನ ಎಂ, ಅಂತರಾಷ್ಟ್ರೀಯ ಆರ್ಬಿಟರ್ ರವಿಕಿರಣ್ ಡಿ.ಜೆ ಮತ್ತು ಏಷ್ಯನ್ ಕಂಚಿನ ಪದಕ ವಿಜೇತೆ ಮಾನಸ ಎಚ್.ಆರ್ ಉಪಸ್ಥಿತರಿದ್ದರು.
ಕರ್ನಾಟಕ ರಾಜ್ಯ ಚೆಸ್ ಸಂಸ್ಥೆಯ ಅಧ್ಯಕ್ಷರಾದ ಟಿ. ಎನ್ ಮಧುಕರ್ ಮತ್ತು ಕಾರ್ಯದರ್ಶಿ ತೇಜ್ಕುಮಾರ್ ಎಂ.ಎಸ್ ಕ್ರೀಡಾಪಟುಗಳ ಸಾಧನೆಯನ್ನು ಶ್ಲಾಘಿಸಿದ್ದಾರೆ.
