ಚಿತ್ರದುರ್ಗ: ಆಸ್ಪತ್ರೆಯಲ್ಲಿರುವ ಸಚಿವರ ಮಾಹಿತಿ ಏಕೆ ಮುಚ್ಚುಡುತ್ತಿದ್ದೀರಿ, ಹೆಬ್ಬೆಟ್ಟು ಒತ್ತಿಸಿಕೊಳ್ಳಬೇಕು ಎಂಬ ಉದ್ದೇಶದಿಂದಲೆ ಎಂದು ರಾಜ್ಯ ಸರ್ಕಾರವನ್ನು ಕೇಂದ್ರ ಸಚಿವ
ಹೆಚ್ ಡಿ ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.
ಚಿತ್ರದುರ್ಗದಲ್ಲಿ ಹೊಳಲ್ಕೆರೆ ಶಾಸಕ ಚಂದ್ರಪ್ಪ ಅವರ ಪುತ್ರನ ಆರತಕ್ಷತೆ ಕಾರ್ಯಕ್ರಮ ಮುಗಿದ ನಂತರ ತಮ್ಮನ ಭೇಟಿಯಾದ ಮಾಧ್ಯಮ ಪ್ರತಿನಿಧಿಗಳ ಜತೆ ಅವರು ಮಾತನಾಡಿದರು.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಚಿವ ಸುಧಾಕರ್ ಅವರ ಆರೋಗ್ಯದ ಬಗ್ಗೆ ರಾಜ್ಯ ಸರ್ಕಾರ ಸರಿಯಾದ ಮಾಹಿತಿ ನೀಡಬೇಕು ಎಂದು ಕುಮಾರಸ್ವಾಮಿ ಒತ್ತಾಯಿಸಿದರು.
ಸಚಿವ ಸುಧಾಕರ್ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದಾರೆ ಎಂದು ಇವರು ಹೇಳುತ್ತಿದ್ದಾರೆ. ಆದರೆ ಜನರೇ ಬೇರೆ ಮಾತನಾಡುತ್ತಿದ್ದಾರೆ. ಹಿರಿಯೂರು ಅಥವಾ ಬೇರೆ ಕ್ಷೇತ್ರದ ಬಗ್ಗೆ ಮಾತಾಡಲ್ಲ. ಆದರೆ, ಒಳಗೆ ಏನು ನಡೆಯುತ್ತಿದೆ ಎಂಬುದನ್ನು ನೋಡಬೇಕು, ಆ ವ್ಯಕ್ತಿ ಎಷ್ಟು ನೋವು ಅನುಭವಿಸುತ್ತಿದ್ದಾರೆ, ಯಾವ ಕಾರಣಕ್ಕೆ ಕೆಲ ವಿಷಯಗಳನ್ನು ಮುಚ್ಚಿಟ್ಟಿದ್ದಾರೆ ಅವರಿಂದ ಹೆಬ್ಬೆಟ್ಟು ಒತ್ತಿಸಿಕೊಳ್ಳಲು ಎಲ್ಲಾ ವಿಷಯಗಳನ್ನು ಮುಚ್ಚಿಡಲಾಗುತ್ತಿದೆಯೇ ಎಂಬುದರ ಬಗ್ಗೆ ರಾಜ್ಯ ಸರ್ಕಾರ ಹೇಳಬೇಕು ಎಂದು ಹೆಚ್ ಡಿ ಕೆ ಆಗ್ರಹಿಸಿದರು.
ನಾನು ಹಲವಾರು ಸಂದರ್ಭಗಳಲ್ಲಿ ನೋಡಿದ್ದೇನೆ. ಯಾವ ಕಾರಣಕ್ಕೆ ಎಲ್ಲವನ್ನು ಮುಚ್ಚಿಡುತ್ತಿದ್ದಾರೆ ಎಂಬುದನ್ನು ಜನತೆಗೆ ಹೇಳುವ ಜವಾಬ್ದಾರಿ ಸರ್ಕಾರದ್ದು. ಇಂಥ ವಿಚಾರಗಳಲ್ಲಿ ನಾನು ಚರ್ಚೆ ಮಾಡಲ್ಲ. ಆದರೆ, ಕೆಲ ವ್ಯಕ್ತಿಗಳು ಇಂಥ ಸಮಯ ದುರ್ಬಳಕೆ ಮಾಡಿಕೊಳ್ಳುವಲ್ಲಿ ಎಕ್ಸ್ ಪರ್ಟ್ ಗಳಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯಲ್ಲಿ ಏನೆಲ್ಲಾ ನಡೆಯಿತು ಎಂಬುದನ್ನು ನೋಡಿದ್ದೇವೆ. ಒಂದು ನಿರ್ದಿಷ್ಟ ಸಮುದಾಯವನ್ನು ಕಾಂಗ್ರೆಸ್ ಯಾವ ರೀತಿ ಅಪಮಾನಿಸಿ ಶಂಕಿಸಿ ನೋಡಿತು ಎಂಬುದನ್ನು ಕೂಡ ಕಂಡಿದ್ದೇವೆ. ವಾಸ್ತವ ಸ್ಥಿತಿ ಹೀಗಿರುವಾಗ ಯಾವ ಮುಖ ಇಟ್ಟುಕೊಂಡು ಕಾಂಗ್ರೆಸ್ ಪಕ್ಷ ಹುಬ್ಬಳ್ಳಿಯಲ್ಲಿ ಅಹಿಂದ ಸಮಾವೇಶ ಮಾಡುತ್ತೆ ಎಂದು ಹೆಚ್.ಡಿ. ಕುಮಾರಸ್ವಾಮಿ ಪ್ರಶ್ನಿಸಿದರು.
ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಪಕ್ಷ ಅಹಿಂದ ಸಮಾವೇಶ ಮಾಡುತ್ತಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ ಕುರ್ಚಿ ಉಳಿಸಿಕೊಳ್ಳಲು ಅಹಿಂದ ಸಮಾವೇಶ ಮಾಡಲು ಹೊರಟಿದ್ದಾರೆ ಎಂದು ಲೇವಡಿ ಮಾಡಿದರು.
ಜಿಬಿಎ ಚುನಾವಣೆಗೆ ಹಣವಿಲ್ಲ, ಸಿಬ್ಬಂದಿಯೂ ಇಲ್ಲ ಎಂದು ಚುನಾವಣಾ ಆಯೋಗ ಕೋರ್ಟ್ ಗೆ ತಿಳಿಸಿದೆ. ರಾಜ್ಯ ಸರ್ಕಾರವೇ ಚುನಾವಣಾ ಕಮಿಷನ್ ಮೂಲಕ ನ್ಯಾಯಾಲಯಕ್ಕೆ ತಿಳಿಸಿದೆ. ಕಾಂಗ್ರೆಸ್ ಸರ್ಕಾರ ಬೆನ್ನು ತೋರಿಸಿ ಓಡಿಹೋಗುತ್ತಿದೆ ಎಂದು ಕುಮಾರಸ್ವಾಮಿ ಕುಟುಕಿದರು
ಶಾಸಕ ಚಂದ್ರಪ್ಪ, ಚಿತ್ರದುರ್ಗ ಜೆಡಿಎಸ್ ಜಿಲ್ಲಾ ಅಧ್ಯಕ್ಷ ಎಂ. ಜಯಣ್ಣ ಸೇರಿದಂತೆ ಹಲವಾರು ಮುಖಂಡರು ಈ ಸಂದರ್ಭದಲ್ಲಿ ಹಾಜರಿದ್ದರು.
