ಸಿದ್ದಾಪುರ : ವಿರಾಜಪೇಟೆ ತಾಲೂಕಿನ ಚೆಂಬೆಬೆಳ್ಳೂರು ಸುತ್ತಮುತ್ತಲ ಗ್ರಾಮಗಳ ಕಾಫಿ ತೋಟಗಳಲ್ಲಿ ಬಿಡು ಬಿಟ್ಟು ಅಪಾರ ಪ್ರಮಾಣದ ಬೆಲೆ ನಾಶ ಪಡಿಸಿ ಜನರಲ್ಲಿ ಭೀತಿ ಹುಟ್ಟಿಸಿದ್ದ ಪುಂಡ ಆನೆ ಕಡೆಗೂ ಸೆರೆಸಿಕ್ಕಿದೆ.
ಕಾರ್ಮಿಕರು, ಬೆಳೆಗಾರರು, ಶಾಲಾ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡುತ್ತಿದ್ದ ಪುಂಡನೆಯನ್ನು ಕೊನೆಗೂ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ.
ದುಬಾರೆ ಹಾಗೂ ಮತ್ತಿಗೋಡು ಶಿಬಿರದ ಸಾಕಾನೆಗಳಾದ ಅಭಿಮನ್ಯು ಮಹೇಂದ್ರ, ಕಂಜನ್, ಭೀಮಾ, ಸುಗ್ರೀವ, ಹರ್ಷ ಆನೆಗಳನ್ನು ಕರೆತಂದು
ಕಾರ್ಯಚರಣೆಗಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಸತತ ಐದು ಗಂಟೆ ಕಾಲ ಶ್ರಮಿಸಿ ಪುಂಡ ಅಡಗಿದ್ದ ಜಾಗ ಪತ್ತೆ ಹಚ್ಚುವಲ್ಲಿ ಯಶಸ್ವಿಯಾದರು.
ಕೊನೆಗೆ ಚೆಂಬೆಬೆಳ್ಳೂರು ಕಾಫಿ ತೋಟದ ಪುಂಡ ಕಂಡು ಬಂದಿದೆ.ವನ್ಯಜೀವಿ ವೈದ್ಯಾಧಿಕಾರಿ ಡಾ ರಮೇಶ್, ಕುಶಾಲನಗರ ಉಪ ಅರಣ್ಯ ಅಧಿಕಾರಿ ಶಾರ್ಪ್ ಶೂಟರ್ ಕಕನ್ನಂಡ ರಂಜನ್ ಬಂದೂಕಿನ ಮೂಲಕ ಅರವಳಿಕೆ ನಿಡುವಲ್ಲಿ ಯಶಸ್ವಿಯಾದರು.
ನಂತರ ಸಾಕಾನೆಗಳ ಸಹಯದಿಂದ ಪುಂಡಾನೆಗೆ ಆರೈಕೆ ಮಾಡಿ ನಂತರ ಮತ್ತಿಗೂಡು ಶಿಬಿರಕ್ಕೆ ಕಳಿಸಲಾಯಿತು.
ಜಿಲ್ಲಾ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸೋನಾಲ್ ವೃಷ್ಣಿ, ವೀರಾಜಪೇಟೆ ತಾಲೂಕು ಉಪ ಅರಣ್ಯ ಸಂರಕ್ಷಣಾಧಿಕಾರಿ ಜಗನ್ನಾಥ್ ಅವರ ಮಾರ್ಗದರ್ಶನದಲ್ಲಿ ಕಾರ್ಯಚರಣೆ ನಡೆಯಿತು.
ಹಲವು ವರ್ಷಗಳಿಂದ ಈ ಪುಂಡ ನಿರಂತರವಾಗಿ ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಹಗಲಿನಲ್ಲೂ ಕಾಣಿಸಿಕೊಂಡು ಹಲವರ ಮೇಲೆ ದಾಳಿಗೆ ಯತ್ನಿಸಿದ್ದ.
ಬೆಳೆಗಾರರು, ಕಾರ್ಮಿಕರು ತೋಟಕೆ ತೆರಳಲು ಹೆದರುತ್ತಿದ್ದರು.
ಚೆಂಬೆಬೆಳ್ಳೂರು, ದೇವಣಗೇರಿ, ಬೆಳ್ಳರಿಮಾಡು, ಕುಕ್ಲೂರು, ಪೊದಕೋಟೆ, ಐಮಂಗಲ, ಮೈತಾಡಿ, ಕದನೂರು, ಬಿಳುಗುಂದ, ಹಾಲುಗುಂದ ಹಾಗೂ ಅಮ್ಮತಿ ಸುತ್ತಮುತ್ತಲ ಗ್ರಾಮಗಳಲ್ಲಿ ಬೀಡು ಬಿಟ್ಟು ದಾಂಧಲೆ ನಡೆಸುತ್ತಿದ್ದು ಕಾಡಾನೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಲೇ ಬಂದಿದ್ದರು.
ಪುಂಡನನ್ನು ಸೆರೆಹಿಡಿಯುವ ಸಂದರ್ಭದಲ್ಲಿ ಮಡಿಕೇರಿ ಡಿ ಸಿ ಎಫ್ ರಮೇಶ್, ಎಸಿಎಫ್ ಗೋಪಾಲ್, ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ, ವೀರಾಜಪೇಟೆ ವಲಯ ಅರಣ್ಯ ಅಧಿಕಾರಿ ಶಿವರಾಮ್, ತಿತಿಮತಿ ವಲಯ ಅರಣ್ಯ ಅಧಿಕಾರಿ ಗಂಗಾಧರ್, ಡಾ ಚೆಟ್ಟಿಯಪ್ಪ, ಡಿ ಆರ್ ಎಫ್ ಒ ಸಂಜಿತ್ ಸೋಮಯ್ಯ, ರಾಘವ, ದಿವಾಕರ್, ಶಶಿ, ಮೂರ್ತಿ, ಜಡಿಮಣಿ ಸೇರಿದಂತೆ ಆರ್ ಆರ್ ಟಿ ,ಇ ಪಿ ಟಿ, ಅರಣ್ಯ ಇಲಾಖೆಯ ಸಿಬ್ಬಂದಿ ಸೇರಿ ನೂರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು.
